ನಶೆ ಮುಕ್ತ ಹಾವಳಿ ನಿಗ್ರಹಕ್ಕೆ ಯುವ ಶುದ್ಧಿ ಅಭಿಯಾನ ಅಗತ್ಯ: ಗೆಹ್ಲೋಟ್

ಬೆಂಗಳೂರುಜೂ.13- ಅಂತಾರಾಷ್ಟ್ರೀಯ ಯೋಗ ದಿನ ಮತ್ತು ಮಾದಕ ದ್ರವ್ಯ ಮುಕ್ತ ಅಭಿಯಾನದ ಭಾಗವಾಗಿ, ಅಂತಾರಾಷ್ಟ್ರೀಯ ಯೋಗ ದಿನ 2025 ಮತ್ತುಮಾದಕವಸ್ತು ದುರುಪಯೋಗ ಮತ್ತು ಸಂಬ0ಧಿತ ಅಕ್ರಮ ಸಾಗಣೆ ವಿರುದ್ಧ ಅಂತಾರಾಷ್ಟ್ರೀಯ ದಿನ’ದ ಪೂರ್ವಭಾವಿ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅರಮನೆ ಮೈದಾನದಲ್ಲಿ ಚಾಲನೆ ನೀಡಿದರು. ಎಸ್. ವ್ಯಾಸ ವಿಶ್ವವಿದ್ಯಾಲಯದ ಗುರೂಜಿ ಎಚ್.ಆರ್. ನಾಗೇಂದ್ರಜಿ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ಆಯೋಜಿಸಲಾಗಿತ್ತು.

ಈ ವರ್ಷದ ಅಂತಾರಾಷ್ಟ್ರೀಯ ಯೋಗ ಮತ್ತು ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ `ಒಂದು ಆರೋಗ್ಯ, ಒಂದು ಭೂಮಿ’ ವಿಷಯದಡಿ ಭಾರತೀಯ ನರ್ಸಿಂಗ್ ಮತ್ತು ಅಲೈಡ್ ಸಂಘ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ವ್ಯಾಸ ವಿಶ್ವವಿದ್ಯಾಲಯ, ಆಯುಷ್ ಸಚಿವಾಲಯ, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಜಂಟಿ ಸಹಯೋಗ ನೀಡಿವೆ.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, `ಈ ವರ್ಷದ ಅಂತಾರಾಷ್ಟ್ರೀಯ ಯೋಗದ ಧ್ಯೇಯವಾಕ್ಯಒಂದು ಆರೋಗ್ಯ ಒಂದು ಭೂಮಿ’ಯ ಮೂಲಕ ಮಾನಸಿಕ ಮತ್ತು ದೈಹಿಕವಾಗಿ ಸಾಮರಸ್ಯದ ಸಮತೋಲನ ತರುವ ನಿಟ್ಟಿನಲ್ಲಿ ಶ್ರಮಿಸುವುದಲ್ಲದೆ, ದೈನಂದಿನ ಜೀವನದಲ್ಲಿ ಯೋಗವು ಮಹತ್ವ ಪಡೆದುಕೊಂಡಿದೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಮಾದಕ ದ್ರವ್ಯ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ಹಾವಳಿ ನಿಗ್ರಹಿಸಲು `ಯುವ ಶುದ್ಧಿ ಅಭಿಯಾನ’ವೂ ಅಷ್ಟೇ ಮುಖ್ಯವಾಗಿದೆ. ಅದೇ ರೀತಿ ಯುವ ಸಮುದಾಯವನ್ನು ಎಚ್ಚರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಕಾಲೇಜು ಆವರಣದಲ್ಲಿ ಯುವ ಶುದ್ಧಿ ಅಭಿಯಾನದಡಿ, ಸುತ್ತಮುತ್ತ ಮಾದಕ ವಸ್ತು ಮಾರಾಟ ನಿಲ್ಲಿಸುವ ಅಭಿಯಾನದಲ್ಲಿ ಆಯಾ ಕಾಲೇಜಿನ ವಿದ್ಯಾರ್ಥಿಗಳ ತಂಡ ಅಧ್ಯಾಪಕರೊಂದಿಗೆ ಭಾಗಿಯಾಗಲಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ ವಲಯ ನಿರ್ದೇಶಕ ಸಚಿನ್ ಘೋರ್ಪಡೆ “ಅತಿ ಹೆಚ್ಚು ಅಫೀಮು ಬೆಳೆಯುವ ಅಫ್ಘಾನಿಸ್ತಾನ, ಪಾಕಿಸ್ತಾನದಂತಹ ದೇಶಗಳು ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್‍ನ ಗೋಲ್ಡನ್ ಟ್ರಯಾಂಗಲ್ ಜೊತೆಗೆ ಭಾರತವನ್ನು ತನ್ನ ಸಾರಿಗೆ ಕೇಂದ್ರವಾಗಿ ಮೊದಲಿನಿಂದಲೂ ಬಳಸಿಕೊಳ್ಳುತ್ತಾ ಬಂದಿವೆ. ಆದರೆ ಇತ್ತೀಚಿನ ವರ್ಷದಲ್ಲಿ ಸನ್ನಿವೇಶ ಬದಲಾಗಿದ್ದು, ಅಭಿವೃದ್ಧಿ ಪಥದಲ್ಲಿರುವ ಆರ್ಥಿಕತೆ ಮತ್ತು ವೃದ್ಧಿಸುತ್ತಿರುವ ಆದಾಯದೊಂದಿಗೆ ಭಾರತೀಯರು ಡಾಕ್ರ್ನೆಟ್ ಮತ್ತು ಇತರ ಹೊಸ ತಂತ್ರಜ್ಞಾನ ಬಳಸಿಕೊಂಡು ಆನ್‍ಲೈನ್ ಮೂಲಕ ಮಾದಕ ದ್ರವ್ಯ, ಸಂಬಂಧಿತ ಔಷಧಗಳನ್ನು ಖರೀದಿಸುವ ದಾರಿ ಕಂಡುಕೊಂಡಿದ್ದಾರೆ. ಇದು ದೇಶದ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಮಾದಕವಸ್ತು ಭಯೋತ್ಪಾದನೆಗೆ ಕಾರಣವಾಗುತ್ತಿದೆ. ಕಳೆದ 2-3 ತಿಂಗಳಲ್ಲಿ ಕರ್ನಾಟಕದ ಎನ್‍ಸಿಬಿ ಹಲವಾರು ಮಾದಕವಸ್ತು ಪ್ರಕರಣಗಳಲ್ಲಿ 25-45 ವರ್ಷದೊಳಗಿನ 45 ಯುವಕರನ್ನು ಬಂಧಿಸಿದೆ. ಒಂದು ಗ್ರಾಂ ಮಾದಕ ದ್ರವ್ಯ ಹೊಂದಿರುವ ವ್ಯಕ್ತಿಗೂ 10 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಕಾನೂನು ನಮ್ಮಲ್ಲಿ ಜಾರಿಯಲ್ಲಿದೆ. ಎಂದರು

ಆರ್‍ಜಿಯುಎಚ್‍ಎಸ್‍ನ ಕುಲಪತಿ ಡಾ. ಬಿ.ವಿ. ಭಗವಾನ್ ಅವರು ಮಾತನಾಡಿ, ನಮ್ಮ 1500 ಕ್ಯಾಂಪಸ್‍ನಲ್ಲಿ 80,000ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸುಮಾರು 40,000 ವಿದ್ಯಾರ್ಥಿಗಳು ನರ್ಸಿಂಗ್ ಮತ್ತು ಅಲೈಡ್ ಕೋರ್ಸ್ ಕಲಿಯುತ್ತಿದ್ದಾರೆ. ಇವರಲ್ಲೂ ಆರೋಗ್ಯ ಕ್ಷೇತ್ರದ ಸುಮಾರು ಶೇ. 30 ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿದ್ದಾರೆನ್ನುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಯುವ ಶುದ್ಧಿ ಅಭಿಯಾನ'ಕ್ಕೆ ಮತ್ತು ಕರ್ನಾಟಕದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ ಸಹಯೋಗದೊಂದಿಗೆಮನಸ್’ ಸಹಾಯವಾಣಿ ಸಂಖ್ಯೆ `1933’ಕ್ಕೆ ಚಾಲನೆ ನೀಡಿದರು

ಯಾರಾದರೂ ಮಾದಕ ವ್ಯಸನಿಗಳಾಗಿದ್ದರೆ ಅಥವಾ ನೆರೆಹೊರೆಯಲ್ಲಿ ಬಳಸುವ ಮಾದಕ ವಸ್ತುಗಳ ಬಗ್ಗೆ ಯಾರಾದರೂ ಮಾಹಿತಿ ನೀಡಬೇಕಾದರೆ ಈ ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಅಂಥ ವ್ಯಕ್ತಿಗಳ ಗುರುತನ್ನು ಅತ್ಯಂತ ಗೌಪ್ಯವಾಗಿ ಇಡಲಾಗುವುದು ಎಂದು ಸಮಗ್ರ ಮಾಹಿತಿ ನೀಡಲಾಯಿತು.

ವ್ಯಾಸ ವಿಶ್ವವಿದ್ಯಾಲಯದ ಗುರೂಜಿ ಎಚ್.ಆರ್.ನಾಗೇಂದ್ರಜೀ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಐಐಟಿ ನಿರ್ದೇಶಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ವಿಜಯಲಕ್ಷ್ಮಿ ದೇಶಮಾನೆ, ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ, ಭಾರತೀಯ ನರ್ಸಿಂಗ್ ಮತ್ತು ಮಿತ್ರ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೆ.ಕೆ. ವಿಜಯಕುಮಾರ್, ಕಾರ್ಯಾಧ್ಯಕ್ಷ ಶಿವ ನಾಗಿ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಗಿಜು ಥಾಮಸ್, ಮತ್ತು ಅನಿಲ್ ಕುಮಾರ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.