ನವದುರ್ಗೆಯರ ಆರಾಧನೆಯಿಂದ ಶಾಂತಿ ನೆಮ್ಮದಿ ನೆಲೆಸುತ್ತದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.29:
ಶರನ್ನವರಾತ್ರಿಯ ಶುಭ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿಯು ದೊರೆಯುವ ಜೊತೆಗೆ ಸಮಾಜದಲ್ಲಿ ಶಾಂತಿ ಸಮೃದ್ಧಿಯು ನೆಲೆಸುತ್ತದೆ ಎಂದು ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.


ಅವರು ತಾಲೂಕಿನ ಭೃಗು ಮಹರ್ಷಿಗಳ ತಪೆÇೀ ಭೂಮಿಯಾಗಿರುವ ಹೇಮಗಿರಿ ಸುಕ್ಷೇತ್ರದಲ್ಲಿ ಶರನ್ನವ ರಾತ್ರಿಯ ಅಂಗವಾಗಿ ಬಿಜಿಎಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ನವದುರ್ಗೆಯರ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿ, ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಶರನ್ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಾವು ಪ್ರತಿದಿನವೂ ಶಕ್ತಿ ಸ್ವರೂಪಿಣಿ ಯಾಗಿರುವ ನವದುರ್ಗೆರೆಯನ್ನು ಪೂಜಿಸಿ, ಪ್ರಾರ್ಥಿಸಿದರೆ ಸಾಕು ನಮ್ಮ ಇಷ್ಟಾರ್ಥಗಳು ಈಡೇರುವ ಜೊತೆಗೆ ಲೋಕದಲ್ಲಿ ಸುಖ, ಸಂತೋಷ, ಶಾಂತಿ ಹಾಗೂ ಸಮೃದ್ಧಿಯು ನೆಲೆಸಿ ಮಾನವರಾದ ನಾವು ಆರೋಗ್ಯವಂತರಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದ ರಾಮಕೃಷ್ಣೇಗೌಡ ಮಹಾಶಕ್ತಿಯಾದ ಶ್ರೀ ಚಾಮುಂಡೇಶ್ವರಿ ತಾಯಿಯು ದುಷ್ಟನಾದ ಮಹಿಶಾಸುರನನ್ನು ಸಂಹರಿಸಿ, ಲೋಕವನ್ನು ಕಾಪಾಡಿದ ಶುಭ ದಿವಸವೇ ವಿಜಯದಶಮಿ ಯಾದ್ದರಿಂದ ಶರನ್ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನವದುರ್ಗೆಯರನ್ನು ಪೂಜಿಸುವ ಮೂಲಕ ನಾವು ನಮ್ಮ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ, ಬೆಳೆಸುವ ಮೂಲಕ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡುತ್ತಾ ಬಂದಿದ್ದೇವೆ ಎಂದು ರಾಮಕೃಷ್ಣೇಗೌಡ ಹೇಳಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟಕ ಹಳ್ಳಿ ಗಂಗಾಧರ್ , ಶರಣವ ರಾತ್ರಿಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತವೃಂದವನ್ನು ಉದ್ದೇಶಿಸಿ ಮಾತನಾಡಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಧಾರ್ಮಿಕ ಆಚರಣೆಗಳು ನಮ್ಮ ಹಿರಿಯರಿಂದ ನಮಗೆ ಬಂದಿರುವ ಕೊಡುಗೆಯಾಗಿವೆ. ದೇವರು ಹಾಗೂ ಧರ್ಮದ ಮಾರ್ಗದಲ್ಲಿ ನಾವು ಸಾಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವ ಜೊತೆಗೆ ನಾವು ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೂಡ ಸಿಗುವುದರಿಂದ ಹಿಂದಿನ ಒತ್ತಡದ ಜೀವನದಲ್ಲಿ ನಾವು ನಮ್ಮ ಧಾರ್ಮಿಕ ಆಚರಣೆಗಳನ್ನು ಒತ್ತಡದ ಕೆಲಸ ಕಾರ್ಯಗಳ ನಡುವೆಯೇ ಬಿಡುವು ಮಾಡಿಕೊಂಡು ಆಚರಿಸುತ್ತಾ ಬಂದಿದ್ದೇವೆ ನವದುರ್ಗೆಯರ ಆರಾಧನೆಯಿಂದ ಲೋಕಕಲ್ಯಾಣವಾಗಿ ಸುಖ ಶಾಂತಿ ಸಮೃದ್ಧಿಯು ನೆಲೆಸುತ್ತದೆ ಎಂದು ಗಂಗಾಧರ್ ಹೇಳಿದರು.


ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಮಾಜಿ ಕಾರ್ಯಾಧ್ಯಕ್ಷರಾದ ಬಳ್ಳೇಕೆರೆ ಮಂಜುನಾಥ್, ಮುಖಂಡರಾದ ಕಾಯಿ ಮಂಜೇಗೌಡ, ಲತಾಮಣಿ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.