Home ಜಿಲ್ಲೆ ಮಂಗಳೂರು ನರಿಮೊಗರಿನಲ್ಲಿ ಹಲಸು ಸಂಸ್ಕರಣಾ ಉದ್ಯಮ- ಹಳ್ಳಿ ಮಹಿಳೆಯರ ಆರ್ಥಿಕತೆಗೆ ಜೀವ ತುಂಬುವ ‘ಸಂಜೀವಿನಿ’

ನರಿಮೊಗರಿನಲ್ಲಿ ಹಲಸು ಸಂಸ್ಕರಣಾ ಉದ್ಯಮ- ಹಳ್ಳಿ ಮಹಿಳೆಯರ ಆರ್ಥಿಕತೆಗೆ ಜೀವ ತುಂಬುವ ‘ಸಂಜೀವಿನಿ’

ಪುತ್ತೂರು; ಒಂದು ಕಾಲದಲ್ಲಿ ನಾಲ್ಕು ಗೋಡೆಗಳ ನಡುವೆ ಆರ್ಥಿಕ ಗಟ್ಟಿತನವಿಲ್ಲದೆ ಬದುಕುತ್ತಿದ್ದ ಮಹಿಳೆಯರು ಇಂದು ಸಾಕಷ್ಟು ಪ್ರಮಾಣದಲ್ಲಿ ಸಬಲೀಕರಣಗೊಂಡಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆಯನ್ನು ಬಿಂಬಿಸುತ್ತಿದ್ದಾರೆ. ಸ್ವ ಉದ್ಯೋಗಗಳ ಮೂಲಕ ಗ್ರಾಮೀಣ ಭಾಗದ ಮಹಿಳೆಯರೂ ಇಂದು ಆರ್ಥಿಕ ಭದ್ರತೆಯನ್ನು ಕಂಡುಕೊಂಡಿದ್ದಾರೆ. ಆರ್ಥಿಕವಾಗಿ ಇನ್ನೂ ಹಿಂದೆ ಉಳಿದಿರುವ ಗ್ರಾಮೀಣ ಭಾಗದ ಮಹಿಳೆಯರು ಕೂಡಾ ತಮ್ಮ ಜೀವನೋಪಾಯ ಕಂಡುಕೊಳ್ಳುವಂತೆ ಮಾಡಲು ‘ಸಂಜೀವಿನಿ’ ಮುಂದಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಮೊತ್ತ ಮೊದಲಬಾರಿಗೆ ಜೀವನೋಪಾಯ ಸೇವಾ ಕೇಂದ್ರ ಹಲಸು ಸಂಸ್ಕರಣಾ ಉದ್ಯಮಕ್ಕೆ ಮುನ್ನುಡಿ ಬರೆದಿದೆ.
ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಭಾರತ ಸರ್ಕಾರದ ಪ್ರಮುಖ ಯೋಜನೆ. ರಾಜ್ಯದಲ್ಲಿ ಇದು ಸಂಜೀವಿನಿ ಹೆಸರಲ್ಲಿ ಕಾರ್ಯಾಚರಿಸುತ್ತಿದೆ. ಈಗಾಗಲೇ ಕೆಲವು ಗ್ರಾಮಪಂಚಾಯತ್ ಗಳಲ್ಲಿ ಸಂಜೀವಿನಿ ಮೂಲಕ ಜೀವನೋಪಾಯ ಸೇವಾ ಕೇಂದ್ರಗಳನ್ನು ಅಸ್ತಿತ್ವಕ್ಕೆ ತರಲಾಗಿದ್ದು, ವಿಶೇಷವಾಗಿ ಮಹಿಳೆಯರ ಆರ್ಥಿಕ ಸ್ಥಿತಿಗೆ ‘ಅರ್ಥ ಕಲ್ಪಿಸುವ ನಿಟ್ಟಿನಲ್ಲಿ ಈ ಸೇವಾ ಕೇಂದ್ರದಲ್ಲಿ ವಿವಿಧ ಉದ್ಯಮಗಳನ್ನು ಪ್ರಾರಂಭಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಪುತ್ತೂರಿನ ನರಿಮೊಗರು ಎಂಬಲ್ಲಿನ ಜೀವನೋಪಾಯ ಸೇವಾ ಕೇಂದ್ರದಲ್ಲಿ ಈ ಹಲಸು ಸಂಸ್ಕರಣೆಯ ಕೇಂದ್ರವನ್ನು ಪ್ರಾರಂಭ ಮಾಡಲಾಗಿದ್ದು, ಈ ಕೇಂದ್ರದಲ್ಲಿ ಸ್ಥಳೀಯರಿಂದ ಹಲಸು ಖರೀದಿಸಿ ಅದರ ಕಾಯಿ ಮತ್ತು ತೊಲೆಗಳನ್ನು ಬೇರ್ಪಡಿಸಿ ಹಣ್ಣಿನ ತೊಲೆಗಳನ್ನು ಮಾರಾಟ ಮಾಡುವ ಕಾರ್ಯ ಆರಂಭಗೊಂಡಿದೆ. ಹಲಸಿನ ಕೆಜಿಯೊಂದಕ್ಕೆ ರೂ.೧೦ರಂತೆ ಈ ಕೇಂದ್ರದಲ್ಲಿ ಖರೀದಿ ಮಾಡಲಾಗುತ್ತಿದೆ. ಸುಮಾರು ೧೦ ಕೆಜಿ ಹಲಸಿನಲ್ಲಿ ೩ರಿಂದ ೪ ಕೆಜಿ ಹಲಸಿನ ಹಣ್ಣಿನ ತೊಲೆ ಸಿಗುತ್ತದೆ. ಪ್ರಸ್ತುತ ಈ ಹಣ್ಣಿನ ತೊಲೆಗಳನ್ನು ಸ್ಥಳೀಯ ಗ್ರಾಮಜನ್ಯ ಸಂಸ್ಥೆಗೆ ಕೆಜಿಗೆ ರೂ.೨೦೦ರಂತೆ ಮಾರಾಟ ಮಾಡಲಾಗುತ್ತಿದೆ. ಕೇಂದ್ರದಲ್ಲಿ ಈಗ ೫ ಮಹಿಳೆಯರು ಕೆಲಸ ಮಾಡುತ್ತಿದ್ದು, ತೊಲೆ ಮಾರಾಟದಿಂದ ಬರುವ ಹಣವನ್ನು ಈ ಮಹಿಳೆಯರಿಗೆ ಸಮಾನವಾಗಿ ಹಂಚಲಾಗುತ್ತಿದೆ. ದಿನಕ್ಕೆ ಕನಿಷ್ಟವೆಂದರೂ ರೂ.೫೦೦ ಮಹಿಳೆಯರ ಕೈ ಸೇರುತ್ತದೆ.
ಗ್ರಾಮೀಣ ಭಾಗದಲ್ಲಿ ಹಲಸಿನ ಮರಗಳಿಗೆ ಕೊರತೆ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಹಲಸು ಕೂಡಾ ಸಿಗುತ್ತದೆ. ಬಹಳಷ್ಟು ಕಡೆಗಳಲ್ಲಿ ಈ ಹಲಸು ಉಪಯೋಗರಹಿತವಾಗಿ ಮರದ ಬುಡದಲ್ಲಿಯೇ ಮಣ್ಣಾಗಿ ಹೋಗುತ್ತಿದೆ. ಹಲಸನ್ನು ಹಪ್ಪಳ ತಯಾರಿ ಮತ್ತು ತಿನ್ನುವ ವಿಚಾರವೊಂದನ್ನು ಹೊರತುಪಡಿಸಿದರೆ ದನಗಳಿಗೆ ಆಹಾರವಾಗಿ ಬಳಕೆ ಮಾಡುವುದಷ್ಟೇ ರೈತವರ್ಗ ತಿಳಿದುಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲಸುಮೇಳದ ಮೂಲಕ ಒಂದಷ್ಟು ಹಲಸಿನ ಮೌಲವರ್ಧಿತ ಉತ್ಪನ್ನಗಳು ಪರಿಚಯವಾಗಿದ್ದರೂ ಗ್ರಾಮೀಣಭಾಗಕ್ಕೆ ಹೆಚ್ಚು ಪರಿಚಯವಾಗಿಲ್ಲ. ಹಾಗಾಗಿ ಇಂದಿಗೂ ಹಳ್ಳಿಗಳಲ್ಲಿ ಹಲಸು ಬಹುಪಯೋಗಿಯಾಗಿ ಬಳಕೆಯಾಗದೆ ಹಾಳಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಇಂತಹ ಹಲಸು ಸಂಸ್ಕರಣಾ ಕೇಂದ್ರಗಳ ಹುಟ್ಟು ಹಲಸಿನ ಹೊಸ ಉತ್ಪನ್ನಗಳಿಗೆ ಕಾರಣವಾಗಬಹುದು. ಇದರ ಜತೆಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಈ ಜೀವನೋಪಾಯ ಕೇಂದ್ರಗಳು ರೈತರಿಂದ ಖರೀದಿ ಮಾಡುವುದರಿಂದ ರೈತನಿಗೂ ಲಾಭದಾಯಕವಾಗಲಿದೆ. ಈಗಾಗಲೇ ಹಲಸಿನ ಕಾಯಿಯ ಹೋಳಿಗೆ ಮತ್ತಿತರ ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತಿದ್ದು, ಹಲಸು ಬಹುಪಯೋಗಿಯಾಗಿ ಬಳಕೆಯಾಗಬಹುದು. ಹಲಸಿನ ತೊಲೆ ಮಾತ್ರವಲ್ಲ ಅದರ ಬೀಜವೂ ಅತ್ಯಂತ ಸ್ವಾಧಿಷ್ಟ ಪದಾರ್ಥವಾಗಿದೆ. ಇದರ ಮೌಲ್ಯವರ್ಧಿತ ಉತ್ಪನ್ನಗಳು ಮಾರುಕಟ್ಟೆ ಪ್ರವೇಶ ಮಾಡಿದರೆ ಹಲಸು ಬೆಳೆಯುವ ರೈತನ ಪಾಲಿಗೆ ಆರ್ಥಿಕ ಭದ್ರತೆಯೂ ದೊರೆಯುವಂತಾಗುತ್ತದೆ. ಈ ನಿಟ್ಟಿನಲ್ಲಿ ಜೀವನೋಪಾಯ ಸೇವಾ ಕೇಂದ್ರಗಳಲ್ಲಿ ಉದ್ಯಮಗಳು ಪ್ರಾರಂಭವಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ನರಿಮೊಗರು ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ಒಣಗಿದ ಹಲಸಿನ ಸೊಲೆ, ಜ್ಯಾಕ್‌ಫ್ರೂಟ್ ಹಿಟ್ಟು, ಫ್ರೋಜನ್ ಜ್ಯಾಕ್‌ಫ್ರೂಟ್ ಮುಂತಾದ ಮೌಲ್ಯವರ್ಧಿತ ಉತ್ಪನ್ನಗಳು ಪರಿಚಯಿಸುವ ಚಿಂತನೆಗಳನ್ನು ರೂಪಿಸಿಕೊಳ್ಳಲಾಗಿದೆ. ಆಹಾರ ಸಂಸ್ಕರಣಾ ಉದ್ಯಮಗಳು ಮತ್ತು ಆಹಾರ ಪ್ರೊಸೆಸಿಂಗ್ ಯೂನಿಟ್‌ಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸ್ಥಿರ ಮಾರುಕಟ್ಟೆ ನಿರ್ಮಾಣದ ಬಗ್ಗೆಯೂ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ತಾಲೂಕಿನ ನಿಡ್ಪಳ್ಳಿಯಲ್ಲಿಯೂ ಅತೀ ಶೀಘ್ರದಲ್ಲಿ ಜೀವನೋಪಾಯ ಸೇವಾ ಕೇಂದ್ರದ ಮೂಲಕ ಉದ್ಯಮವೊಂದು ಪ್ರಾರಂಭವಾಗಲಿದೆ.
ಬೆಲೆ ಏರಿಕೆ, ಇಂಧನ ಕೊರತೆ ಸೇರಿದಂತೆ ಸಂಕಷ್ಟಗಳ ನಡುವೆಯೇ ಬದುಕುತ್ತಿರುವ ಹಳ್ಳಿಯ ಮಹಿಳೆಯರ ಪಾಲಿಗೆ ಈ ಜೀವನೋಪಾಯ ಸೇವಾಕೇಂದ್ರದ ಉದ್ಯಮಗಳು ಸ್ಥಿರ ಆದಾಯ ಮತ್ತು ಆರ್ಥಿಕ ಸ್ವಾವಲಂಬನೆಯ ಹಾದಿಯಾಗಿದೆ. ಗ್ರಾಮೀಣ ಮಹಿಳೆಯರಲ್ಲಿ ಕೌಶಲ್ಯಾಭಿವೃದ್ಧಿ ಯನ್ನು ಬೆಳೆಸುವ ಮೂಲಕ ಈ ಚಿಂತನೆ ಮನೆಯೊಂದಿಗೆ ಕೆಲಸ ನಿರ್ವಹಿಸುವ ಮಹಿಳೆಯರ ಪಾಲಿಗೆ ಜೀವ ತುಂಬುವ ಸಂಜೀವಿನಿಯಾಗಿ ಮಾರ್ಪಡಲಿದೆ.

ಮೇಘಾ ಪಾಲೆತ್ತಾಡಿ