
ಸಂಜೆವಾಣಿ ವಾರ್ತೆ
ತಿ.ನರಸೀಪುರ ಅ.27- ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಕೃತಿ ರಚನೆ, ಸಂದೇಶಗಳ ಮೂಲಕ ಸಂಸ್ಕೃತ, ಸಾಹಿತ್ಯ, ಆಧ್ಯಾತ್ಮಿಕ ಬೋಧನೆಗಳು ಹಾಗೂ ಭಾರತೀಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥನ್ ಹೇಳಿದರು.
ಪಟ್ಟಣದ ಚಿಕ್ಕಮ್ಮ ಯಾತ್ರಿ ಭವನದಲ್ಲಿ ತಾಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ನಾಯಕರ ಸಂಘದ ವತಿಯಿಂದ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಾಮಾಯಣದ ಕರ್ತೃ, ಆದಿ ಕವಿ ಎಂದೇ ಪ್ರಸಿದ್ಧರಾದ ಮಹರ್ಷಿ ವಾಲ್ಮೀಕರ ಆದರ್ಶಗಳು ಸಮಾಜಕ್ಕೆ ಸದಾ ಪ್ರೇರಣೆಯಾಗಿವೆ.
ಅವರ ಜೀವನದ ಸಂದೇಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆ ಮಾನವೀಯತೆ ಹಾಗೂ ಸೌಹಾರ್ದತೆಯನ್ನು ಬೆಳೆಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.
ತಾಲೂಕು ನಾಯಕರ ಸಂಘದ ಅಧ್ಯಕ್ಷ ಮೂಗೂರು ಎಂ.ಡಿ. ಬಸವರಾಜು ಮಾತನಾಡಿ ತಾಲೂಕಿನಲ್ಲಿ ನಾಯಕರ ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವಲ್ಲಿ ಹಲವಾರು ತೊಡಕುಗಳು ಉಂಟಾಗುತ್ತಿವೆ ಈ ಬಗ್ಗೆ ತಾಲೂಕಿನ ಜನತೆ ಸಂಘಕ್ಕೆ ದೂರಿದ್ದಾರೆ, ನಮ್ಮ ಸಮಾಜದ ಬಂಧುಗಳಲ್ಲಿ ವಿದ್ಯಾಭ್ಯಾಸದ ಕೊರತೆ ಹೆಚ್ಚಾಗಿರುವುದರಿಂದ ಅನಗತ್ಯವಾಗಿ ಅವರನ್ನು ಅಲೆಸದೆ ಸರಿಮಾಡಿ ಸರ್ಟಿಫಿಕೇಟ್ ಗಳನ್ನ ವಿತರಣೆ ಮಾಡುವಂತೆ ತಾಸಿಲ್ದಾರ್ ರವರಲ್ಲಿ ಮನವಿ ಮಾಡಿದರು,
ಸಪ್ತಾರ್ಷಿಗಳ ಅನುಗ್ರಹದಿಂದ ಮಹರ್ಷಿಯಾದ ಬುಕ್ಕ, ಕಾಡಿನ ಜನಾಂಗದಲ್ಲಿ ಹುಟ್ಟಿ ಸಿಕ್ಕಸಿಕ್ಕಲ್ಲಿ ಕಳ್ಳತನ ದರೋಡೆ ಮಾಡುತ್ತಾ ಕ್ರೂರ ಜೀವನ ನಡೆಸುತ್ತಿದ್ದ ಬುಕ್ಕ, ವಾಲ್ಮೀಕಿಯಾಗಿ ಪರಿವರ್ತನೆ ಆದಾಗ ತಾನು ಇಂದಿನ ಜನ್ಮದಲ್ಲಿ ಏನಾಗಿದೆ ಎಂಬ ಅರಿವಾಗುತ್ತದೆ, ನಂತರ ಅವರು ರಾಮಾಯಣಅಂತಹ ಪುಸ್ತಕವನ್ನು ಬರೆದರು, ರಾಮಾಯಣ ಮಹಾಕಾವ್ಯವಲ್ಲ ನಮ್ಮ ಬಾಳನ್ನು ಬೆಳಗುವ ಮಹಾ ಬೆಳಕು ಇಂತಹ ದೈವಿ ಕೃತಿಯನ್ನು ಕೊಟ್ಟ ಮಹಾಕವಿ ವಾಲ್ಮೀಕಿ ಮಹರ್ಷಿ ಸದಾ ನೆನೆಯುವಂತಾಗಬೇಕು ಎಂದರು.
ಪ್ರಧಾನ ಭಾಷಣ ಮಾಡಿ ಮಾತನಾಡಿದ ವಿದ್ಯೋದಯ ಕಾಲೇಜಿನ ಉಪನ್ಯಾಸಕ ಡಾ.ಸಿ.ಕೆ.ಚಂದ್ರಪ್ಪ, ಬೇಡ ಜನಾಂಗದ ವಾಲ್ಮೀಕಿ ಮಹರ್ಷಿಗಳಾದದು ಅಪ್ರತಿಮ, ಅದ್ವಿತೀಯ ಸಾಧನೆಯೇ ಸರಿ. ದುಷ್ಟಶಕ್ತಿ ಗಿಂತ ದೈವಶಕ್ತಿ ದೊಡ್ಡದು ಎಂಬಂತೆ ವಾಲ್ಮೀಕಿಯು ದೈವಾನುಗ್ರಹ, ನಾರದಮುನಿಗಳ ಸಹವಾಸದಿಂದ ಸಪ್ತ ಋಷಿಗಳ ದರ್ಶನದಿಂದ, ಜ್ಞಾನದ ಉತ್ತುಂಗ ತಲುಪಿ ರಾಮಾಯಣದಂತಹ ಕೃತಿ ರಚಿಸಿ ಜಗತ್ತಿನ ಮನುಕುಲಕ್ಕೆ ಮಾನವೀಯ ಮೌಲ್ಯಗಳ ಸಂದೇಶ ಸಾರಿದ್ದಾರೆ ಎಂದರು.
ನಮ್ಮ ಮಕ್ಕಳಿಗೆ ಕೈಯಲ್ಲಿ ಪುಸ್ತಕ ನೀಡಿ, ಅವರನ್ನು ಜ್ಞಾನ ವಂತರಾಗಿ ಮಾಡಬೇಕು. ವಾಲ್ಮೀಕಿಯವರ ಆದರ್ಶ, ಚಿಂತನೆಗಳನ್ನು ಮಕ್ಕಳಿಗೆ ಅರಿವು ಮೂಡಿಸಿ ಸಂಸ್ಕಾರ ಬೆಳೆಸಿದರೆ ಜಯಂತಿಯು ಸಾರ್ಥಕತೆ ಕಾಣುತ್ತದೆ ಎಂದು ಅವರು ಹೇಳಿದರು.
ತಹಶೀಲ್ದಾರ್ ಟಿ.ಜಿ. ಸುರೇಶಾಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಯಕ ಜಾತಿ ಪ್ರಮಾಣ ಪತ್ರದ ಬಗ್ಗೆ ಸಾಕಷ್ಟು ಗೊಂದಲಗಳಿವೆ ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವೆ ಗುರುತಿಸಿ ಕೊಳತ್ತೂರು ಕುಮಾರ್, ಮರಡೀಪುರ ನಾಗರಾಜು, ಚಿತ್ರಕಲೆ ವಿಭಾಗದಲ್ಲಿ ಕಲಾವಿದ ಶ್ರೀ ಹರಿ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನಾ ಪಟ್ಟಣದ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯದ ಬಳಿ ಶ್ರೀ ಮಹರ್ಷಿ ವಾಲ್ಮೀಕಿ ಮೆರವಣಿಗೆಯ ಭಾವಚಿತ್ರಕ್ಕೆ ಕ್ಷೇತ್ರದ ಶಾಸಕ ಡಾ. ಎಚ್ ಸಿ. ಮಹದೇವಪ್ಪ ಚಾಲನೆ ನೀಡಿದರು. ಇಪ್ಪತ್ತಕ್ಕೂ ಹೆಚ್ಚು ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಗಳ ಟ್ಯಾಬ್ಲೋ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಹೆಜ್ಜೆ ಹಾಕಿ, ಸಾರ್ವಜನಿಕರ ಗಮನ ಸೆಳೆದರು. ವಿವಿಧ ಜಾನಪದ ಕಲಾತಂಡಗಳಾದ ಡೊಳ್ಳು ಕುಣಿತ, ನಂದಿಕೋಲು ಮತ್ತು ಕಂಸಾಳೆ ಪ್ರದರ್ಶನಗಳು ಮೆರವಣಿಗೆಗೆ ಮೆರುಗು ನೀಡಿದವು.
ತಾ.ಪಂ ಇ.ಒ.ರಂಗಸ್ವಾಮಿ, ಬಿಇಒ ಶಿವಮೂರ್ತಿ, ಬನ್ನೂರು ಪುರಸಭೆ ಮುಖ್ಯ ಅಧಿಕಾರಿ ಸತೀಶ್, ಇನ್ಸ್ ಪೆಕ್ಟರ್ ಧನಂಜಯ್, ಉಪತಹಸೀಲ್ದಾರ್ ರಾಜಕಾಂತ್, ಸಸ್ಕಾಂ ಎ ಇಇ ಕೆ.ವಿ.ವೀರೇಶ್, ತೋಟಗಾರಿಕೆ ಇಲಾಖೆಯ ಶಾಂತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕೋಮಲ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷ ಎಂ.ಡಿ.ಬಸವರಾಜು, ಕಾರ್ಯದರ್ಶಿ ಅಲಗೂಡು ನಾಗರಾಜು, ಖಜಾಂಚಿ ಗೋವಿಂದರಾಜು, ಮಾಜಿ ಜಿ ಪಂ ಸದಸ್ಯರಾದ ಹೊನ್ನ ನಾಯಕ, ರೇಣುಕಾ ನಾಗರಾಜು, ಮಾಜಿ ತಾ ಪಂ ಸದಸ್ಯ ನರಸಿಂಹಮಾದನಾಯಕ, ತಲಕಾಡು ಸುಂದರನಾಯಕ, ಶ್ರೀರಂಗರಾಜಪುರ ರಾಜೇಶ್, ಬೂದಹಳ್ಳಿ ಸಿದ್ದರಾಜು, ಹೆಮ್ಮಿಗೆ ಸೋಮಣ್ಣ, ಹೊನ್ನಯ್ಯ, ಹುಣಸೂರು ನಾಗರಾಜು, ಎ.ಜೆ.ವೆಂಕಟೇಶ್, ನಾಗಲಗೆರೆ ಶಿವಕುಮಾರ್, ಕನ್ನನಾಯಕನಹಳ್ಳಿ ಕುಮಾರ್, ಕರೋಹಟ್ಟಿ ಮಹದೇವಯ್ಯ, ಎಂ.ಬಿ. ಸಾಗರ್, ಕೊತ್ತೆಗಾಲ ಬಸವರಾಜು, ಚಂದ್ರು, ಕೆಂಡನಕೊಪ್ಪಲು ಕುಮಾರ್ ಸೇರಿದಂತೆ ನಾಯಕ ಸಮಾಜದ ಮುಖಂಡರು, ಸಂಘ-ಸಂಸ್ಥೆಯವರು ಉಪಸ್ಥಿತರಿದ್ದರು.
























