ನಮ್ಮ ಮೂಲ ಅಸ್ಮಿತೆ ತಿಳಿದುಕೊಳ್ಳಬೇಕು

ಸಂಜೆವಾಣಿ ನ್ಯೂಸ್
ಮೈಸೂರು: ಡಿ.16:-
ಯಾಂತ್ರೀಕರಣ, ತಂತ್ರಜ್ಞಾನ ವಿಚಾರಕ್ಕೆ ಮಾತ್ರ ಜೋತು ಬೀಳದೆ ಇತಿಹಾಸ ಓದುವುದರ ಮೂಲಕ ನಮ್ಮ ಅಸ್ಮಿತೆಯ ಮೂಲ ತಿಳಿದುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮೈಸೂರು ಉಪನಿರ್ದೇಶಕಿ ಎಂ.ಪಿ.ನಾಗಮ್ಮ ತಿಳಿಸಿದರು.


ನಗರದ ಹೆಬ್ಬಾಳ ಮಂಚೇಗೌಡನಕೊಪ್ಪಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮೈಸೂರು ಹಾಗೂ ಜಿಲ್ಲಾ ಇತಿಹಾಸ ವೇದಿಕೆ ಮೈಸೂರು ವತಿಯಿಂದ ಆಯೋಜಿಸಿದ್ದ ಇತಿಹಾಸೋತ್ಸವ-ಕರ್ನಾಟಕ ಚರಿತ್ರೆ ವೈಭವದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನದ ವಿಭಾಗದ ವಿದ್ಯಾರ್ಥಿಗಳು ಸಹ ನಮ್ಮ ಪರಂಪರೆ, ಸಂಸ್ಕೃತಿ, ನಾಗರೀಕತೆ, ಆಡಳಿತ, ವ್ಯವಸ್ಥೆ, ಜೀವನಕ್ರಮ, ಸಂಪ್ರದಾಯಗಳ ವಿಚಾರ ತಿಳಿದುಕೊಳ್ಳಲೇಬೇಕು. ಇತಿಹಾಸ ಮರೆತವನು, ಇತಿಹಾಸ ಸೃಷ್ಟಿಸಲಾರ ಎಂಬ ಮಾತಿನಂತೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ಇತಿಹಾಸ ವಿಷಯ ಓದಬೇಕು ಎಂದು ತಿಳಿಸಿದರು.


ಒಂದರ ಹೊಸ ಆವಿಷ್ಕಾರ ಮತ್ತೊಂದರ ಅದಃಪಥನಕ್ಕೆ ಕಾರಣವಾಗಿ, ಅದು ಇತಿಹಾಸ ಸೇರುತ್ತದೆ. ಅಂತಹವುಗಳನ್ನು ಸಂರಕ್ಷಿಸಿ ಭವಿಷ್ಯಕ್ಕೆ ಪರಿಚಯಿಸಬೇಕು. ಸ್ವಾತಂತ್ರ್ಯಾ ನಂತರದಿಂದಲೇ ನಮ್ಮ ಕಣ್ಣ ಮುಂದೆಯೇ, ಹಲವಾರು ವಸ್ತುಗಳು ಕಣ್ಮರೆಯಾಗಿವೆ. ಇವತ್ತಿಗೆ ಮಕ್ಕಳಿಗೆ ಹಲವಾರು ಪೈಸೆಯಂತಹ ನಾಣ್ಯಗಳು ಇತಿಹಾಸದ ವಸ್ತುಗಳಾಗಿವೆ. ಹೊಸ ತಂತ್ರಜ್ಞಾನಗಳಿಂದ ಯುಪಿಐ ಬ್ಯಾಂಕಿಂಗ್ ವ್ಯವಸ್ಥೆಗಳಿಂದಾಗಿ ಮುಂದೆ ಎಟಿಎಂ ಮಷೀನ್‍ಗಳು ಇಲ್ಲದಂತಾಗುತ್ತವೆ ಎಂದು ಹೇಳಿದರು.


ಕರೋನ ಸಂದರ್ಭದಲ್ಲಿ ಲಾಕ್‍ಡೌನ್‍ನಿಂದಾಗಿ ಯಾವುದೇ ಸಂಚಾರವಿಲ್ಲದೇ, ಹಿಂದಿನ ಕಾಲಕ್ಕೆ ಹೋದಂತೆ ಭಾಸವಾಗುತಿತ್ತು. ಅವತ್ತಿನ ಕಾಲದ ಅಂಚೆ ಪತ್ರಗಳ ಸಂದೇಶಗಳು ಕಣ್ಮರೆಯಾಗಿವೆ. ಯಾವುದೇ, ಹೊಸ ಆವಿಷ್ಕಾರ, ಸಮಾಜದಲ್ಲಿ ಬದಲಾವಣೆಗಳಾದರೂ, ಬದುಕಿನಲ್ಲಿ ಎಲ್ಲವೂ ಹಳೆಯದಾದಷ್ಟು ಅವು ಅಮೂಲ್ಯವಾಗುತ್ತವೆ ಎಂದು ತಿಳಿಸಿದರು.


ನೋಟು, ನಾಣ್ಯ ಪ್ರದರ್ಶನ: ಕಾಲೇಜಿನಲ್ಲಿ ಇತಿಹಾಸೋತ್ಸವ ಅಂಗವಾಗಿ ಹಲವಾರು ಪ್ರದರ್ಶನ ಆಯೋಜಿಸಲಾಗಿತ್ತು. ಭಾರತ ಸ್ವಾತಂತ್ರ್ಯ ನಂತರದ ನಾಣ್ಯಗಳು ಮತ್ತು ನೋಟುಗಳು ಮಾತ್ರವಲ್ಲದೆ ಚಲಾವಣೆಯಿಂದ ಕಣ್ಮರೆಯಾದ ನಾಣ್ಯ, ನೋಟುಗಳು, ಸ್ವಾತಂತ್ರ್ಯ ಪೂರ್ವದ ನಾಣ್ಯ, ನೋಟುಗಳು, ಲೋಹದ ನಾಣ್ಯಗಳು, ವಿದೇಶಿ ನಾಣ್ಯ, ನೋಟುಗಳು, ಬೆಂಕಿಪಟ್ಟಣದ ಸಾವಿರಾರೂ ರೀತಿಯ ಟಿಕ್ಕಿಗಳು, ಇತಿಹಾಸ ಸಾರುವ ವಾಸ್ತುಶಿಲ್ಪಕಲೆಗಳು, ಸ್ಮಾರಕ, ಶಾಸನಗಳ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟು ವಿದ್ಯಾರ್ಥಿಗಳಿಗಳಿಗೆ ಅವುಗಳ ಬಗ್ಗೆ ಮಾಹಿತಿ ನೀಡಲಾಯಿತು.


ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ, ಜಿಲ್ಲಾ ಇತಿಹಾಸ ವೇದಿಕೆ ಮೈಸೂರು ಗೌರವಾಧ್ಯಕ್ಷ ಎಂ.ಸಿ.ಚಂದ್ರಶೇಖರ್, ಅಧ್ಯಕ್ಷ ಎಚ್.ಬಿ.ವಾಸು, ಪ್ರಧಾನ ಕಾರ್ಯದರ್ಶಿ ಮಹದೇವಯ್ಯ, ಕಾರ್ಯಾಧ್ಯಕ್ಷ ಎ.ಎಲ್.ಉಮೇಶ್, ಮಂಚೇಗೌಡನಕೊಪ್ಪಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿ.ಸಿ.ಶಿವಮಲ್ಲು, ಜಿ.ವಿ.ಗೌಡ ಪದವಿ ಪೂರ್ವ ಕಾಲೇಜು ಬನ್ನೂರು ಪ್ರಾಂಶುಪಾಲ ಎಂ.ಭಾಸ್ಕರೇಗೌಡ, ವಾಣಿವಿಲಾಸ ಅರಸು ಬಾಲಿಕಾ ಪದವಿಪೂರ್ವ ಕಾಲೇಜು ಮೈಸೂರು ಜೆ.ಸಿ.ಅನಿತ, ಬೋಧಿಸತ್ವ ಪದವಿಪೂರ್ವ ಕಾಲೇಜು ಮೈಸೂರು ಪ್ರಾಂಶುಪಾಲ ಎಸ್.ನಂಜುಂಡಸ್ವಾಮಿ, ಹಿರಿಯ ಪ್ರಾಧ್ಯಾಪಕ ರೇವಣ್ಣ ಮತ್ತಿತರರು ಭಾಗವಹಿಸಿದ್ದರು.