ನಮ್ಮಲ್ಲಿ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ: ಸಚಿವ ಜಿ.ಪರಮೇಶ್ವರ್

ಸಂಜೆವಾಣಿ ನ್ಯೂಸ್
ಮೈಸೂರು:ಅ.16:
– ರಾಜ್ಯದಲ್ಲಿ ನವೆಂಬರ್ ಕ್ರಾಂತಿಯಾಗುತ್ತದೆ ಎಂದು ಬಿಜೆಪಿಯವರು ಜಪ ಮಾಡುತ್ತಿದ್ದಾರೆ. ಅವರ ಜಪ ಅವರು ಮಾಡಿಕೊಳ್ಳಲಿ ಆದರೆ, ನಮ್ಮಲ್ಲಿ ಅಂತಹ ಯಾವ ಬೆಳವಣಿಗೆಗಳೂ ನಡೆದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.


ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರನ್ನು ಜಪ ಮಾಡಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ, ನಮ್ಮ ಪಕ್ಷದಲ್ಲಿ ಯಾವುದೇ ಬೆಳವಣಿಗೆ ನಡೆಯುತ್ತಿಲ್ಲ. ಮುಂದೆ ನಿಮಗೇ ಗೊತ್ತಾಗಲಿದೆ ಎಂದರು. ಅನುದಾನ ಹಂಚಿಕೆಯಲ್ಲಿ ತಾರತಮ್ಯದ ಕುರಿತು ಪ್ರತಿಕ್ರಿಯಿಸಿ, ಶಾಸಕರಿಗೆ ಅನುದಾನ ನೀಡುತ್ತಿದ್ದೇವೆ. ಪ್ರತಿಪಕ್ಷಗಳ ಶಾಸಕರಿಗೂ 25 ಕೋಟಿ ಕೊಡಲಾಗಿದೆ. ಆದರೆ, ಹಿಂದೆ ಬಿಜೆಪಿಯವರು ಏನು ಮಾಡಿದ್ದರು? ನಮಗೆ ಎಷ್ಟು ಕೊಟ್ಟಿದ್ದರು. ಅವರಂತೆ ನಾವು ತಾರತಮ್ಯ ಮಾಡುವುದಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದೇವೆ ಎಂದರು.


ಬೆದರಿಕೆ ಹಾಕಿದವರ ವಿರುದ್ಧ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಯಾವ ಯಾವ ನಂಬರ್‍ಗಳಿಂದ ಬೆದರಿಕೆ ಬಂದಿದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ. ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಬೆದರಿಕೆ ಹಾಕುವವರಿಗೆ ಅವರದೇ ಆದ ಕಾರಣ, ಮನಸ್ಥಿತಿ ಇರುತ್ತದೆ. ಅವರನ್ನು ಶಿಕ್ಷಿಸುವವರೆಗೆ ಈ ಮನಸ್ಥಿತಿ ಹೋಗುವುದಿಲ್ಲ.
ರಸ್ತೆ ಗುಂಡಿ ಕಾರಣವಲ್ಲ: ಬೆಂಗಳೂರಿನ ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾರೋ ಒಬ್ಬರು ಇಬ್ಬರು ಏನೋ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಗುಂಡಿಮುಚ್ಚುವ ಕೆಲಸ ಮಾಡುತ್ತಿದ್ದೆ. ರಾಜ್ಯಕ್ಕೆ ಬರುವ ಕೈಗಾರಿಕೆಗಳನ್ನು ಆಹ್ವಾನ ಮಾಡಿ ಬಂಡವಾಳ ಹೂಡಲು ಸಹಾಯ ಮಾಡುತ್ತೇವೆ. ಈಗಾಗಲೇ ಕೋಲಾರ, ತುಮಕೂರಿಗೆ ಹಲವು ಕೈಗಾರಿಕೆಗಳು ಬಂದಿವೆ. ಗೂಗಲ್ ಆಂಧ್ರಪ್ರದೇಶಕ್ಕೆ ಹೋಗಿರುವುದಕ್ಕೆ ಅವರದೇ ಆದ ಕಾರಣವಿರಬಹುದು. ಇದಕ್ಕೆ ರಸ್ತೆ ಗುಂಡಿಯೇ ಕಾರಣವಲ್ಲ ಎಂದರು.


ಬೆಂಗಳೂರಿಗೆ ಯಾರೇ ಕೆಟ್ಟ ಹೆಸರು ತರಲು ಪ್ರಯತ್ನಿಸಿದರೂ ಆಗುವುದಿಲ್ಲ. ಬೆಂಗಳೂರು, ಕರ್ನಾಟಕಕ್ಕೆ ತನ್ನದೇ ಆದ ಎಕೋ ಸಿಸ್ಟಂ ಇದೆ. ಇಲ್ಲಿನ ಮಾನವ ಸಂಪನ್ಮೂಲ, ಮೂಲ ಸೌಕರ್ಯ, ತಂತ್ರಜ್ಞಾನ ನೋಡಿ ಕೈಗಾಗಿಕೆಗಳು ಬರುತ್ತವೆಯೇ ಹೊರತು ರಸ್ತೆಗಳನ್ನು ನೋಡಿ ಬರುವುದಿಲ್ಲ. ಉದ್ಯಮಿಗಳು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ಹೂಡಿಕೆ ಮಾಡಲು ಸಹಿ ಹಾಕಿದ್ದಾರೆ. ಬೆಂಗಳೂರು ಕೈಗಾರಿಕೆಗಳಿಗೆ ಸೂಕ್ತವಲ್ಲದಿದ್ದರೆ ಇಷ್ಟು ದೊಡ್ಡ ಮಟ್ಟದ ಹೂಡಿಕೆ ಆಗುತ್ತಿರಲಿಲ್ಲ. ರಸ್ತೆ ಹಾಳಾಗಿರುವುದು ನಿಜ. ಕೆಲ ಸಮಸ್ಯೆಗಳೂ ಇವೆ. ಸಿಎಂ, ಡಿಸಿಎಂ ಪ್ರದಕ್ಷಿಣೆ ಮಾಡಿ ರಿಪೇರಿ ಮಾಡಲು ಹಣ ಬಿಡುಗಡೆ ಮಾಡಿದ್ದಾರೆ. ಕೆಲಸವೂ ನಡೆಯುತ್ತಿದೆ. ಯಾರು ಪ್ರತಿಕ್ರಿಯೆ ನೀಡುತ್ತಾರೆ ಅವರಿಗೆ ಕರ್ನಾಟಕದಿಂದ ಕೈಗಾರಿಕೆಗಳು ಹೋಗಬಾರದು ಎಂಬ ಅರಿವಿರಬೇಕು ಎಂದರು.