ನಿತಿನ್ ನಬಿನ್ ಪದಗ್ರಹಣ

ಪ್ರಧಾನಿ ಮೋದಿ, ಶಾ.ಉಪಸ್ಥಿತಿ


ನವದೆಹಲಿ, ಜ. ೨೦-
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಬಿಹಾರದ ಶಾಸಕ ನಿತಿನ್ ನಬಿನ್ ಇಂದು ಪದಗ್ರಹಣ ಮಾಡಿದರು.


ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಿತಿನ್ ನಬಿನ್ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡರು.


ಬಿಜೆಪಿಯ ಸಾಂಸ್ಥಿಕ ಚುನಾವಣೆಯ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ನಿತಿನ್ ನಬಿನ್ ಅವರ ಆಯ್ಕೆಯನ್ನು ಘೋಷಿಸಿ ಪ್ರಮಾಣ ಪತ್ರವನ್ನು ನೀಡಿದರು.
೧೯೮೦ ರಲ್ಲಿ ಸ್ಥಾಪನೆಯಾದ ಬಿಜೆಪಿಯ ೧೨ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.


ಇದಕ್ಕೂ ಮೊದಲು ಡಿ. ೧೪ ರಂದು ನಿತಿನ್ ನಬಿನ್ ಅವರು ಮೊದಲು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ನಿನ್ನೆ ನಡೆದ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು.


ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿತಿನ್ ನಬಿನ್ ಅವರು ಬಿಹಾರ ಸರ್ಕಾರದಲ್ಲಿ ಕಾನೂನು ಮತ್ತು ನ್ಯಾಯ ವಸತಿ ಸಚಿವರಾಗಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.


ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಈ ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್‌ಸಿಂಗ್, ನಿರ್ಗಮಿತ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಕೇಂದ್ರದ ಹಲವು ಸಚಿವರು, ಸಂಸದರು, ವಿವಿಧ ರಾಜ್ಯಗಳ ರಾಜ್ಯಾಧ್ಯಕ್ಷರುಗಳು ಹಾಗೂ ಹಿರಿಯ ಮುಖಂಡರುಗಳು ಉಪಸ್ಥಿತರಿದ್ದರು.


ಈ ಹುದ್ದೆಗೇರಿದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ನಿತಿನ್ ನಬಿನ್ ಪಾತ್ರವಾಗಿದ್ದು, ನಿತಿನ್ ನಬಿನ್ ಅವರು ೧೯೮೦ ರಲ್ಲಿ ಜನಿಸಿದ್ದು, ಈಗ ಅವರಿಗೆ ೪೫ ವರ್ಷ. ತಮ್ಮ ೨೬ನೇ ವಯಸ್ಸಿನಲ್ಲಿ ಬಿಜೆಪಿ ಶಾಸಕರಾಗಿ ರಾಜಕೀಯ ಜೀವನ

ಆರಂಭಿಸಿದ ನಿತಿನ್ ನಬಿನ್ ಸತತ ೫ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಮತ್ತು ಬಿಹಾರದಲ್ಲಿ ಲೋಕೋಪಯೋಗಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ನಿತಿನ್ ನಬಿನ್ ಅವರ ತಂದೆ ನಬಿನ್ ಕಿಶೋರ್ ಸಿನ್ಹಾ ಅವರು ಆರ್‌ಎಸ್‌ಎಸ್ ಜತೆ ನಿಕಟ ಬಾಂಧವ್ಯ ಹೊಂದಿದ್ದರು. ತಂದೆಯ ಮರಣ ನಂತರ ನಿತಿನ್ ನಬಿನ್ ಅವರು ಪಟ್ನಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ೨೦೦೬ ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ಇವರು ಸತತ ೫ ಅವಧಿಗೆ ಬಿಹಾರ ಶಾಸಕರಾಗಿ ಕಾರ್ಯನಿರ್ವಹಿಸಿ, ಸಚಿವರಾಗಿಯೂ ಕೆಲಸ ಮಾಡಿದ್ದಾರೆ.


ಸಂಘಟನಾ ಚತುರರೆಂದೇ ಗುರುತಿಸಿಕೊಂಡಿರುವ ನಿತಿನ್ ನಬಿನ್ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಗ ಅವರಿಗೆ ಮುಂಬರುವ ತಮಿಳುನಾಡು, ಕೇರಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಪ್ರಮುಖ ಸವಾಲು ಇದೆ.


ದೇವಾಲಯ ಭೇಟಿ


ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ನಿತಿನ್ ನಬಿನ್ ಅವರು ದೇವಾಲಯ ಮತ್ತು ಗುರುದ್ವಾರಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ಮೊದಲಿಗೆ ದೆಹಲಿಯ ಜೆಂಡೇವಾಲಾ ದೇವಾಲಯದಲ್ಲಿ ನಿತಿನ್ ಅವರು ಪ್ರಾರ್ಥನೆ ಸಲ್ಲಿಸಿದರು. ನಂತರ ಮಂದಿರ್ ಮಾರ್ಗದಲ್ಲಿರುವ ವಾಲ್ಮೀಕಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾನೌಟ್‌ನಲ್ಲಿರುವ ಪ್ರಾಚೀನ ಹನುಮಾನ್ ಮಂದಿರ ಹಾಗೂ ಬಾಂಗ್ಲಾ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್, ದೆಹಲಿ ಸಚಿವರಾದ ಪರ್ವೇಶ್ ಸಾಹೀಬ್ ಸಿಂಗ್ ಮತ್ತು ಮಂಜಿಂದರ್ ಸಿಂಗ್ ಸಿರಸ ಇದ್ದರು.


ರಾಜ್ಯ ನಾಯಕರ ಅಭಿನಂದನೆ


ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿರುವ ನಿತಿನ್ ನಬಿನ್ ಅವರನ್ನು ಕೇಂದ್ರ ಸಚಿವರಾದ ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಶೋಭಕರಂದ್ಲಾಜೆ ಸೇರಿದಂತೆ ರಾಜ್ಯದ ಪ್ರಮುಖ ಬಿಜೆಪಿ ನಾಯಕರುಗಳು ಅಭಿನಂದಿಸಿದ್ದಾರೆ.


ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿ, ಕಿರಿಯ ವಯಸ್ಸಿನಲ್ಲೇ ಶಾಸಕರಾಗಿ ಸತತವಾಗಿ ಜನಮನ್ನಣೆ ಪಡೆದು ಸಚಿವರಾಗಿ ಕರ್ತವ್ಯ ನಿರ್ವಹಿಸಿ, ಅನೇಕ ರಾಜ್ಯಗಳಲ್ಲಿ ಪಕ್ಷ ಸಂಘಟನೆ ನಡೆಸಿ ಇದೀಗ ಬಿಜೆಪಿ ಇತಿಹಾಸದಲ್ಲೇ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರು ಎಂಬ ಖ್ಯಾತಿಗೆ ನಿತಿನ್ ನಬಿನ್ ಅವರು ಪಾತ್ರರಾಗಿದ್ದಾರೆ. ಇವರ ಕಾರ್ಯಾವಧಿಯಲ್ಲಿ ಬಿಜೆಪಿ ಪಕ್ಷವು ಸಂಘಟನಾತ್ಮಕವಾಗಿ ಇನ್ನಷ್ಟು ಬಲಿಷ್ಠವಾಗಿ ಎಂದು ಆಶಿಸುತ್ತೇನೆ ಎಂದಿದ್ದಾರೆ.


ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ನಿತಿನ್ ನಬಿನ್ ಅವರ ಸಂಘಟನಾ ಚಾತುರ್ಯ, ರಾಜಕೀಯ ಅನುಭವ ಮತ್ತು ಶುದ್ಧ ಸಾರ್ವಜನಿಕ ಜೀವನದ ಬದ್ಧತೆಯು ಎನ್‌ಡಿಎ ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ರಾಷ್ಟ್ರೀಯ ರಾಜಕಾರಣಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮ ಅಭಿನಂದನಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.