(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.29: ಬಿಜೆಪಿ ಮುಖಂಡ ಮಾಜಿ ಸಚಿವ ಜನಾರ್ಧನರೆಡ್ಡಿ ಅವರ ಆಪ್ತ ಮೆಹಫೂಜ್ ಅಲಿಖಾನ್ ಅವರು ಇಂದು ಎಸ್ಪಿ ಡಾ.ಶೋಭಾರಾಣಿ ಅವರಿಗೆ ಬಿಜೆಪಿ ನಿಯೋಗದೊಂದಿಗೆ ತೆರಳಿ.ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಸಹಾಯಕ ಮತ್ತು ಆಪ್ತ ಸತೀಶ್ ರೆಡ್ಡಿ ವಿರುದ್ದ ಜೀವ ಬೆದರಿಕೆ ಕರೆ ಮಾಡಿದ್ದರ ಕುರಿತು ದೂರು ನೀಡಿದ್ದಾರೆ.
ದೂರಿನ ಸಾರಾಂಶ ಈ ರೀತಿ ಇದೆ. ನಾನು ಬೆಂಗಳೂರಿನ ವಸಂತನಗರ ಕಚೇರಿಯಲ್ಲಿ ಇದ್ದಾಗ, ಸಂಜೆ 5:54ಕ್ಕೆ ಮೊಬೈಲ್ ಸಂಖ್ಯೆ 7411033375 ರಿಂದ ಕರೆ ಬಂತು. ಇದು ನನಗೆ ಪರಿಚಿತ. ಯಾಳ್ಪಿ ವಲಿ ಬಾಷಾ ಅವರ ಸಂಖ್ಯೆಯಾಗಿದ್ದು, ಆ ಕರೆಯನ್ನು ಆಗ ಸ್ವೀಕರಿಸಲು ನನಗೆ ಸಾಧ್ಯವಾಗಿರಲಿಲ್ಲ.
ನಂತರ, ಸಂಜೆ 5:57ಕ್ಕೆ ನಾನು ಅದೇ ಸಂಖ್ಯೆಗೆ ಕರೆ ಮಾಡಿದಾಗ ಯಾಳ್ಪಿ ವಲಿ ಬಾಷಾ ಅವರು ಇನ್ನೊಬ್ಬ ವ್ಯಕ್ತಿ (ಸತೀಶ್ ರೆಡ್ಡಿ) ನನ್ನೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿ, ನನಗೆ ಕಾನ್ಪೆರೆನ್ಸ್ ಕರೆಯಲ್ಲಿ ಸಂಪರ್ಕಿಸಿದರು, ಕರೆ ಸಂಪರ್ಕಗೊಳ್ಳುತ್ತಿದ್ದಂತೆಯೇ ಆ ವ್ಯಕ್ತಿ (ಸತೀಶ್ ರೆಡ್ಡಿ) ತೆಲುಗು ಭಾಷೆಯಲ್ಲಿ ನನಗೆ “ನೀನು ಬಳ್ಳಾರಿಗೆ ಕಾಲಿಟ್ಟರೆ ನಿನ್ನ ಜೀವವನ್ನೇ ತೆಗೆಯುತ್ತೇನೆ” ಎಂದು ಬೆದರಿಕೆ ಹಾಕಲು ಪ್ರಾರಂಭಿಸಿದರು. ಆ ವ್ಯಕ್ತಿ ಸಂಭಾಷಣೆಯ ಉದ್ದಕ್ಕೂ ಹಲವು ಬಾರಿ ನನಗೆ ಇದೇ ರೀತಿ ಬೆದರಿಕೆ ಹಾಕುತ್ತಲೇ ಇದ್ದರು. ಈ ಜೀವ ಬೆದರಿಕೆಯ ಆಡಿಯೋವನ್ನು ನಾನು ನನ್ನ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದೇನೆ.
ನಾನು ವಿಚಾರಣೆಯ ಮಾಡಿದ ನಂತರ, ನನಗೆ ಪರಿಚಿತರಾದ ಯಾಳ್ಪಿ ವಲಿ ಬಾಷಾ ಅವರಿಂದ ತಿಳಿದು ಬಂದ ವಿಷಯವೇನೆಂದರೆ, ಆ ಕಾನ್ಪೆರೆನ್ಸ್ ಕರೆಯನ್ನು 9513333339 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲಾಗಿತ್ತು. ಈ ಸಂಖ್ಯೆ ಬಳ್ಳಾರಿ ನಗರದ ಶಾಸಕ ನಾರಾ ಭರತ್ ರೆಡ್ಡಿ ಅವರ ಅಪ್ತ ಸಹಾಯಕ ಮತ್ತು ಸತೀಶ್ ರೆಡ್ಡಿ ಅವರ ಅಪ್ತ ಚಾನಾಳ್ ಶೇಖರ್ ಅವರಿಗೆ ಸೇರಿದ್ದಾಗಿದೆ.
ದೂರವಾಣಿ ಕರೆಯ ಸಮಯದಲ್ಲಿ, ಆ ವ್ಯಕ್ತಿ ನನ್ನನ್ನು ಬೆದರಿಸುವ ಉದ್ದೇಶದಿಂದ ಅತ್ಯಂತ ಜೋರಾದ ಮತ್ತು ನಿಂದನಾತ್ಮಕ ಧ್ವನಿಯಲ್ಲಿ ಬೆದರಿಕೆ ಹಾಕಿದರು. ಆ ಬೆದರಿಕೆಗಳು ಬಹಳ ಗಂಭೀರ ಸ್ವರೂಪದವು ಆಗಿದ್ದವು. ಅಲ್ಲದೆ, ಬೆದರಿಕೆ ಹಾಕಿದ ಸತೀಶ್ ರೆಡ್ಡಿ ಅವರು ಬಳ್ಳಾರಿ ನಗರದ ಹಾಲಿ ಶಾಸಕ ನಾರಾ ಭರತ್ ರೆಡ್ಡಿ ಅವರ ಅಪ್ತ ಸಹಾಯಕ ಆಗಿರುವುದರಿಂದ, ಅವರು ರಾಜಕೀಯವಾಗಿ ಪ್ರಭಾವಿಗಳಾಗಿದ್ದು, ಆ ಬೆದರಿಕೆಯನ್ನು ಕಾರ್ಯಗತಗೊಳಿಸಲು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದಾರೆ. ಸತೀಶ್ ರೆಡ್ಡಿ ಮಾಡಿದ ಈ ಬೆದರಿಕೆಗಳ ಸ್ವರೂಪದಿಂದಾಗಿ ನನ್ನ ಜೀವ ಮತ್ತು ದೇಹಕ್ಕೆ ಗಂಭೀರ ಅಪಾಯವಿದೆ ಎಂದು ನಾನು ಭಾವಿಸುತ್ತೇನೆ.
ಆದ್ದರಿಂದ ಸತೀಶ್ ರೆಡ್ಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ನನಗೆ ಭದ್ರತೆಯನ್ನು ಒದಗಿಸಬೇಕೆಂದು ಮೆಹಫೂಜ್ ಅಲಿ ಖಾನ್ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅಲಿಖಾನ್ ಪತ್ರಕರ್ತ ಯಾಳ್ಪಿ ವಲಿಭಾಷಾ ಪೋನ್ ಮಾಡಿಕೊಟ್ಟಿದ್ದು. ಅವರು ಕಾನ್ಫರೆನ್ಸ್ ಕಾಲ್ ಮಾಡಿದ್ದರು. ಸತೀಶ್ ರೆಡ್ಡಿ ಎಂಬುವರು ನನಗೆ ತೆಲುಗು ಭಾಷೆಯಲ್ಲಿ ಅವಾಚ್ಯವಾಗಿ ಬೈದ್ರು. ನಾನು ಬೈದೆ. ಆತ ನೀನು ಬಳ್ಳಾರಿಗೆ ಬಾ ಜೀವ ತೆಗೆಯುತ್ತೇನೆ ಎಂದರು.
ಬರುತ್ತೇನೆ ಎಂದು ನಿನ್ನೆ ಬಂದೆ. ಬಂದ ಮೇಲೆ ವಲಿಬಾಷಾಗೆ ಪೋನ್ ಮಾಡಿ ತಿಳಿಸಿರುವೆ. ಸತೀಶ್ ರೆಡ್ಡಿ ಯನ್ನು ನಾನು ಈ ವರೆಗೆ ಭೇಟಿ ಮಾಡಿಲ್ಲ, ಆತನ ಮುಖನೂ ನೋಡಿಲ್ಲ. ಇಂತಹವುದಕ್ಕೆ ನಾನು ಹೆದರುವುದಿಲ್ಲ. ಕಾಲ್ ರೆಕಾರ್ಡ್ ಸಮೇತ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿರುವೆ ಎಂದರು.
ನಗರದ ಶಾಂತಿ ಹಾಳಾಗಬಾರದು
ಮನವಿ ನೀಡುವ ವೇಳೆ ಹಾಜರಿದ್ದ ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮಾಧ್ಯಮಗಳ ಜೊತೆ ಮಾತಮಾಡಿ. ನಗರ ಶಾಸಕರ ಆಪ್ತ ಸತೀಶ್ ರೆಡ್ಡಿ ಅಲಿಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಅವರು ನಮ್ಮ ಬಿಜೆಪಿ ಕಾರ್ಯಕರ್ತರು, ಅವರ ಬೆಂಬಲಕ್ಕೆ ಪಕ್ಷ ಇದೆ. ಈ ರೀತಿ ಜೀವ ಬೆದರಿಕೆ ಹಾಕಿ ನಗರದ ಜನರ ಶಾಂತಿ ಹಾಳು ಮಾಡುವುದು ಬೇಡ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಕ್ರಮ ತೆಗೆದುಕೊಳ್ಳಿ ಎಂದು ಎಸ್ಪಿಯವರಿಗೆ ಹೇಳಿದೆಂದರು.
ನಾವೇನು ಹೆದರಲ್ಲ
ಬಿಜೆಪಿಯ ನಗರ ಅಧ್ಯಕ್ಷ ಗುರ್ರಂ ವೆಂಕಟರಮಣ ಮಾತನಾಡಿ, ನಗರದಲ್ಲಿ ಈಗಾಗಲೇ ವ್ಯಾಪಾರಿಗಳು ಸೇರಿದಂತೆ ನಾಲ್ಕೈದು ಜನರಿಗೆ ಶಾಸಕರ ಆಪ್ತರು ಬೆದರಿಕೆ ಹಾಕಿ ಬಯ ಬೀಳಿಸಿದ್ದಾರೆ. ಒಬ್ಬರು ಊರನ್ನೇ ಬಿಟ್ಟು ಹೋಗಿದ್ದಾರೆ ಇವರ ಬೆದರಿಕೆ. ಜನಾರ್ಧನರೆಡ್ಡಿ ಅವರ ಆಪ್ತನಿಗೇ ಬೆದರಿಸಿದರೆ ನಗರದಲ್ಲಿ ಎಲ್ಲರೂ ಭಯಗೊಳ್ಳುತ್ತಾರೆ ಎಂದು ಕೊಂಡಂತೆ ಇದೆ. ಇಂತಹ ದೌರ್ಜನ್ಯ ಬಳ್ಳಾರಿಯಲ್ಲಿ ನಡೆಯಲ್ಲ. ನಮಗೇ ಯಾರ ಭಯ ಇಲ್ಲ. ಜನರಿಗೆ ಇದು ಗೊತ್ತಾಗಲಿ ಎಂದು ದೂರು ನೀಡಿದೆ ಎಂದರು.

























