
ಸಂಜೆವಾಣಿ ನ್ಯೂಸ್
ಮೈಸೂರು: ಮೇ.25:– ನಗರದಲ್ಲಿನ ಹದಗೆಟ್ಟ ರಸ್ತೆಗಳನ್ನು ಸಂಪೂರ್ಣ ಡಾಂಬರೀಕರಣ ಮಾಡುವ ಬದಲು, ತಾತ್ಕಾಲಿಕ ಪ್ಯಾಚ್ ವರ್ಕ್ ಮೂಲಕ ದುರಸ್ತಿ ನಡೆಸುತ್ತಿರುವ ಮಹಾನಗರ ಪಾಲಿಕೆ ಕ್ರಮ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಹಿಂದೆ ಮಳೆಯ ಕಾರಣದಿಂದ ಹಾನಿಗೊಳಗಾದ ರಸ್ತೆಗಳನ್ನು ಪಾಲಿಕೆ ನಿಯಮಿತವಾಗಿ ಡಾಂಬರೀಕರಣ ಮಾಡುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ದಸರಾ ಸಂದರ್ಭದಲ್ಲಿ ಮಾತ್ರ ಕೆಲ ಪ್ರಮುಖ ರಸ್ತೆಗಳಿಗೆ ಡಾಂಬರು ಹಾಕಲಾಗುತ್ತಿದೆ. ಉಳಿದ ರಸ್ತೆಗಳಿಗೆ ತಾತ್ಕಾಲಿಕ ಪ್ಯಾಚ್ ವರ್ಕ್ ಮಾಡಲಾಗುತ್ತಿದೆ.
ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಮೈಸೂರು ಅರಮನೆ ಸುತ್ತಮುತ್ತಲಿನ ರಸ್ತೆಗಳಿಗೆ ಹಿಂದೆ ವಿಶೇಷ ಆದ್ಯತೆ ನೀಡಲಾಗುತ್ತಿತ್ತು. ಆದರೆ ಇದೀಗ ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ಅಗ್ರಹಾರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಹ ಕೇವಲ ಪ್ಯಾಚ್ ವರ್ಕ್ ಮಾತ್ರ ನಡೆಯುತ್ತಿದೆ. ಸ್ಥಳೀಯ ಬಡಾವಣೆಗಳ ರಸ್ತೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ನಗರದ ಅನೇಕ ಬಡಾವಣೆಗಳ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ವಿಶೇಷವಾಗಿ ರಿಂಗ್‍ರೋಡ್ ಸುತ್ತಲಿನ ಲೇಔಟ್‍ಗಳ ರಸ್ತೆಗಳ ಸ್ಥಿತಿ ಅತ್ಯಂತ ಹದಗೆಟ್ಟಿದೆ. ಹಲವು ವರ್ಷಗಳಿಂದ ಈ ರಸ್ತೆಗಳಿಗೆ ಮರುಡಾಂಬರೀಕರಣ ನಡೆದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಇನ್ನೊಂದೆಡೆ, ನಗರದ ಒಳರಸ್ತೆಗಳ ದುರಸ್ಥಿಗೆ ಗಮನಹರಿಸದೇ, ಸುಮಾರು 46 ಕಿ.ಮೀ. ಉದ್ದದ ರಸ್ತೆಗಳಿಗೆ 460 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಪಾಲಿಕೆ ಕೈಗೊಂಡಿದೆ. ಪ್ರಸ್ತುತ ಈ ಕಾಮಗಾರಿ ನಗರದ ಮೂಲಕ ಹಾದುಹೋಗುವ ಅಂತರರಾಜ್ಯ ಹೆದ್ದಾರಿಗಳಲ್ಲೇ ನಡೆಯುತ್ತಿದೆ.
ಈ ನಡುವೆ ರಸ್ತೆ ಕಾಮಗಾರಿಗಳಿಗೆ ಅಗತ್ಯವಿರುವ ಬಿಟುಮಿನ್ (ಡಾಂಬರ್) ಕೊರತೆಯೂ ಎದುರಾಗಿದೆ. ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿಯಿಂದ ಸರಬರಾಜು ಸರಪಳಿ ವ್ಯತ್ಯಯಗೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇರಾನ್, ಯುಎಇ, ಅಮೆರಿಕಾ, ಸೋಮಾಲಿಯಾ ಹಾಗೂ ಕೊಲಂಬಿಯಾ ದೇಶಗಳು ಭಾರತಕ್ಕೆ ಪ್ರಮುಖ ಬಿಟುಮಿನ್ ಪೂರೈಕೆದಾರ ರಾಷ್ಟ್ರಗಳಾಗಿವೆ.
ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಪರಿಣಾಮ ಜಾಗತಿಕ ಸರಬರಾಜು ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದ್ದು, ಬಿಟುಮಿನ್ ಕೊರತೆ ಹಾಗೂ ಬೆಲೆ ಏರಿಕೆಗೆ ಕಾರಣವಾಗಿದೆ. ಭಾರತ ಪ್ರತಿವರ್ಷ ಸುಮಾರು 2.5 ರಿಂದ 3.2 ಮಿಲಿಯನ್ ಮೆಟ್ರಿಕ್ ಟನ್ ಬಿಟುಮಿನ್ ಆಮದು ಮಾಡಿಕೊಳ್ಳುತ್ತಿದ್ದು, ಕಳೆದ ಕೆಲವು ತಿಂಗಳುಗಳಿಂದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.





























