
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.02:- ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತ್ಯೋತ್ಸವದ ಅಂಗವಾಗಿ ನಗರದ ವಿವಿದೆಡೆ ವಿಜೃಂಭಣೆಯಿಂದ ಆಚರಿಸಲಾಯಿತು.
ನಗರದ ಜೋಡಿ ರಸ್ತೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮುಂಭಾಗದ ನಂದಿನಿ ಪಾರ್ಲರ್‍ನಲ್ಲಿ ತ್ರಿವಿಧ ದಾಸೋಹಿಗಳ ಸ್ಮರಣಾರ್ಥವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರವಿಟ್ಟು ವಿಶೇಷ ಹೂವಿನ ಅಲಂಕಾರ ಮಾಡಿ, ರಾಮಸಮುದ್ರ ಭಿಕ್ಷದ ಮಠದ ಮಹದೇವಸ್ವಾಮಿಜೀ. ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರಿಗೆ ಮಜ್ಜಿಗೆ ಪಾನಕ, ಹಾಗೂ ರೈಸ್‍ಬಾತ್ ಅನ್ನು ವಿತರಣೆ ಮಾಡಿದರು.
ಅನ್ನದಾಸೋಹ, ವಿದ್ಯಾದಾಸೋಹ ಹಾಗೂ ಆಶ್ರಯದಾಸೋಹಗಳ ಮಹತ್ವವನ್ನು ಪ್ರಸ್ತಾಪಿಸಲಾಯಿತು. ಸ್ವಾಮೀಜಿಯವರು ಜೀವನಪೂರ್ಣವಾಗಿ ನಡೆಸಿದ ಸೇವಾ ಕಾರ್ಯಗಳು, ವಿಶೇಷವಾಗಿ ಶಿಕ್ಷಣ ಹಾಗೂ ದಾಸೋಹ ಪರಂಪರೆಯಲ್ಲಿ ನೀಡಿದ ಕೊಡುಗೆಗಳನ್ನು ಗಣ್ಯರು ಸ್ಮರಿಸಿದರು.
ಬಳಿಕ ಮಾತನಾಡಿದ ಮುಖಂಡರು ಸಿದ್ದಗಂಗಾ ಶ್ರೀಗಳು ಕಾಯಕದ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ. ಅವರ ಜಯಂತಿಯನ್ನು ಸೇವಾ ಕಾರ್ಯದ ಮೂಲಕ ಜನ್ಮ ದಿನ ಅಚರಣೆ ಪುಣ್ಯದ ಕೆಲಸವಾಗಿದೆ . ತುಮಕೂರಿನಲ್ಲಿ ಶ್ರೀಕ್ಷೇತ್ರದಲ್ಲಿ ಯಾವುದೇ ಸದ್ದುಗದ್ದಲವಿಲ್ಲದೇ ತಮ್ಮ ಕಾಯಕದ ಮೂಲಕ ಪ್ರಪಂಚದ ಗಮನ ಸೆಳೆದರು. ದಿನನಿತ್ಯ ಸಾವಿರಾರು ಮಕ್ಕಳಿಗೆ ಅನ್ನ, ಶಿಕ್ಷಣ ದಾಸೋಹ ನೀಡಿ, ಶ್ರೀ ಮಠವನ್ನು ಮುನ್ನಡೆಸಿದ ಕಾಯಕ ತಪಸ್ವಿಗಳು. 111 ವರ್ಷಗಳ ಕಾಲ ನಮ್ಮೇಲ್ಲರ ಮಧ್ಯೆ ಇದ್ದು, ಸಾಧನೆ ಮಾಡುವ ಜೊತೆಗೆ 21ನೇ ಶತಮಾನದ ಬಸವಣ್ಣ ಎಂಬ, ನಡೆದಾಡುವ ದೇವರು ಎಂಬ ಕೀರ್ತಿಗೆ ಪಾತ್ರರಾಗಿದ್ದು. ಅವರ ಹೆಸರು ಹೇಳಿದರೆ ಸಾಕು ಒಂದು ರೀತಿಯ ಪ್ರೇರಣೆ ಮತ್ತು ಶಕ್ತಿ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಮಸಮುದ್ರ ಮಠದ ಶ್ರೀ ಮಹದೇವಸ್ವಾಮೀಜಿ, ಜೆಡಿಎಸ್ ಮುಖಂಡ ಅಲೂರು ಮಲ್ಲು, ನಂದಿನಿ ಪಾರ್ಲರ್‍ನ ಕೆ.ವಿ. ಪ್ರಸಾಸ್, ಕೆ.ವಿ. ಪ್ರಮೋದ್, ಚಂದನ್, ಮಂಜುನಾಥ್, ಪುನೀತ್, ನವೀನ್, ಅಭಿ, ಸಚಿನ್, ಶಿವಕುಮಾರಸ್ವಾಮಿ ಸ್ವ ಸಹಾಯ ಸಂಘದ ಸದಸ್ಯರು ಮೊದಲಾದವರು ಇದ್ದರು.
ಕಾರ್ಯಕ್ರಮದ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಗಿದ್ದು, ಬಡವರಿಗೆ ಆಹಾರ ವಿತರಣೆ ಮಾಡಲಾಯಿತು. ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಆದರ್ಶಗಳನ್ನು ಅನುಸರಿಸುವ ಸಂಕಲ್ಪ ಕೈಗೊಳ್ಳಲಾಯಿತು.
ಶಿವು ಜನಸ್ನೇಹಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ : ಶಿವು ಜನಸ್ನೇಹಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಅಂಗವಾಗಿ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಅನ್ನಪ್ರಸಾದ ವಿತರಣೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಶಿವು ಜನಸ್ನೇಹಿ ಹಾಗೂ ಸಂಘದ ಪದಾಧಿಕಾರಿಗಳು, ಜಿಲ್ಲಾ ವೀರಶೈವ ಲಿಂಗಾಯಿತ ಸಂಘದ ಅಧ್ಯಕ್ಷ ಮೂಡಲಪುರ ನಂದೀಶ್, ಮೂಡಲ ಅಗ್ರಹಾರದ ರವಿ ಸೇರಿದಂತೆ ಅನೇಕ ಸಾರ್ವಜನಿಕರು ಭಾಗವಹಿಸಿ ಸೇವಾ ಕಾರ್ಯಕ್ಕೆ ಕೈಜೋಡಿಸಿದರು.
ಈ ಕಾರ್ಯಕ್ರಮವು ಸಮಾಜ ಸೇವೆಯ ಮನೋಭಾವವನ್ನು ಪ್ರತಿಬಿಂಬಿಸುವುದರ ಜೊತೆಗೆ, ಸ್ವಾಮೀಜಿಯವರ ಆದರ್ಶಗಳನ್ನು ನೆನಪಿಸುವಂತಾಗಿತ್ತು.
ಸಿದ್ದಗಂಗಾ ಯುವಕರ ಬಳಗದಿಂದ ಅನ್ನದಾಸೋಹ :
ನಗರದ ಚಿಕ್ಕ ಅಂಗಡಿ ಬೀದಿಯಲ್ಲಿ ಶ್ರೀ ಸಿದ್ದಗಂಗಾ ಯುವಕರ ಬಳಗ ವತಿಯಿಂದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತ್ಯೋತ್ಸವವನ್ನು ಭಕ್ತಿ ಭಾವದಿಂದ ಆಚರಿಸಲಾಯಿತು.
ತ್ರಿವಿಧ ದಾಸೋಹಗಳ ಸ್ಮರಣಾರ್ಥವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರ ಮಾನವೀಯ ಸೇವಾ ಪರಂಪರೆಯನ್ನು ಸ್ಮರಿಸಿ, ಅವರ ಆದರ್ಶಗಳನ್ನು ಜನರಿಗೆ ಪರಿಚಯಿಸಲಾಯಿತು. “ನಡೆಯುವ ದೇವರು” ಎಂದೇ ಖ್ಯಾತರಾದ ಶಿವಕುಮಾರ ಸ್ವಾಮೀಜಿಯವರು ಅನ್ನ, ವಿದ್ಯೆ ಮತ್ತು ಆಶ್ರಯದ ಮೂಲಕ ಸಮಾಜ ಸೇವೆಗೆ ನೀಡಿದ ಕೊಡುಗೆಗಳನ್ನು ಈ ವೇಳೆ ನೆನಪಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸಲಾಗಿದ್ದು, ಅನೇಕರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಬಡ ಮತ್ತು ಅಗತ್ಯವಿರುವವರಿಗೆ ವಿಶೇಷವಾಗಿ ಆಹಾರ ವಿತರಣೆ ಮಾಡಲಾಗಿದ್ದು, ಸೇವಾ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತವಾಯಿತು.





















