Home ಜಿಲ್ಲೆ ಮೈಸೂರು ನಗರದಲ್ಲಿ ಮೊದಲ ದಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುಗಮ

ನಗರದಲ್ಲಿ ಮೊದಲ ದಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುಗಮ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.20:-
ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ ಎಸ್‍ಎಸ್‍ಎಲ್ಸಿ ಪರೀಕ್ಷೆ ಬುಧವಾರದಿಂದ ಆರಂಭವಾಗಿದ್ದು, ಮೊದಲ ದಿನ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆಯಿತು.


ಮೈಸೂರು ನಗರ ಸೇರಿದಂತೆ ಜಿಲ್ಲೆಯ 136 ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ಭಾಷೆಯ ನೆರವೇರಿದ್ದು, 35,596 ವಿದ್ಯಾರ್ಥಿಗಳು ಹಾಜರಾಗಿ 398 ವಿದ್ಯಾರ್ಥಿಗಳು ಗೈರು ಹಾಜರಾದರು. ಪರೀಕ್ಷೆ ಬರೆಯಲು 35,994 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 35,596 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 398 ವಿದ್ಯಾರ್ಥಿಗಳು ಗೈರು ಹಾಜರಾಗಿದರು. ಮೈಸೂರಿನ 43 ಹಾಗೂ ಗ್ರಾಮಾಂತರ ಪ್ರದೇಶದ 93 ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭವಾದ ಪ್ರಥಮ ಭಾಷೆಯ ಪರೀಕ್ಷೆ ಮಧ್ಯಾಹ್ನ 1.15ರವರೆಗೂ ನಡೆಯಿತು. ಎಲ್ಲಾ ಕೇಂದ್ರಗಳಲ್ಲೂ ವಿದ್ಯಾರ್ಥಿಗಳು ಶಿಸ್ತಿನಿಂದ ಪರೀಕ್ಷೆ ಬರೆದರೆ, ನಕಲು ಮಾಡುವ ಯಾವುದೇ ಪ್ರಕರಣ ಕಂಡು ಬರದೆ, ಎಲ್ಲಾ ವಿದ್ಯಾರ್ಥಿಗಳು ನಿಗಧಿತ ಸಮಯದಲ್ಲಿ ಪರೀಕ್ಷೆ ಬರೆದು ಭರವಸೆ ಮೂಡಿಸಿದರು.


ಮೈಸೂರು ಉತ್ತರ ಬ್ಲಾಕ್‍ನಲ್ಲಿ ಹೆಚ್ಚು ಗೈರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುಗಮವಾಗಿ ನಡೆಸುವ ಉದ್ದೇಶದಿಂದ 7 ತಾಲೂಕು ಹಾಗೂ ಮೈಸೂರು ನಗರದಲ್ಲಿ ಒಟ್ಟು 9 ಬ್ಲಾಕ್‍ಗಳಾಗಿ ವಿಂಗಡಿಸಲಾಗಿತ್ತು. ಮೈಸೂರು ಉತ್ತರ ಬ್ಲಾಕ್‍ನಲ್ಲಿ 19 ಪರೀಕ್ಷಾ ಕೇಂದ್ರಗಳಲ್ಲಿ 5960 ವಿದ್ಯಾರ್ಥಿಗಳಲ್ಲಿ 5855 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 105 ವಿದ್ಯಾರ್ಥಿಗಳು ಗೈರು ಹಾಜರಾದರು. ಮೈಸೂರು ದಕ್ಷಿಣ ಬ್ಲಾಕ್‍ನಲ್ಲಿ 16 ಕೇಂದ್ರದಲ್ಲಿ 4473 ವಿದ್ಯಾರ್ಥಿಗಳಲ್ಲಿ 4407 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 66 ವಿದ್ಯಾರ್ಥಿಗಳು ಗೈರು ಹಾಜರಾದರು. ಮೈಸೂರು ಗ್ರಾಮಾಂತರ ಬ್ಲಾಕ್‍ನಲ್ಲಿ 17 ಕೇಂದ್ರದಲ್ಲಿ 4758 ವಿದ್ಯಾರ್ಥಿಗಳಲ್ಲಿ 4721 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ, 37 ವಿದ್ಯಾರ್ಥಿಗಳು ಗೈರು ಹಾಜರಾದರು. ಹೆಚ್.ಡಿ.ಕೋಟೆ ಬ್ಲಾಕ್‍ನಲ್ಲಿ 13 ಕೇಂದ್ರದಲ್ಲಿ 3113 ವಿದ್ಯಾರ್ಥಿಗಳಲ್ಲಿ 3063 ವಿದ್ಯಾರ್ಥಿಗಳು ಹಾಜರಾಗಿ 50 ವಿದ್ಯಾರ್ಥಿಗಳು ಗೈರಾದರು. ಹುಣಸೂರು ಬ್ಲಾಕ್‍ನಲ್ಲಿ 15 ಕೇಂದ್ರದಲ್ಲಿ 3984 ವಿದ್ಯಾರ್ಥಿಗಳಲ್ಲಿ 3948 ಪರೀಕ್ಷೆ ಬರೆದರೆ, 36 ವಿದ್ಯಾರ್ಥಿಗಳು ಗೈರಾದರು. ಕೆ.ಆರ್.ನಗರ ಬ್ಲಾಕ್‍ನಲ್ಲಿ 11 ಪರೀಕ್ಷಾ ಕೇಂದ್ರದಲ್ಲಿ 2786 ವಿದ್ಯಾರ್ಥಿಗಳಲ್ಲಿ 2773 ವಿದ್ಯಾರ್ಥಿಗಳು ಹಾಜರಾದರೆ, 13 ವಿದ್ಯಾರ್ಥಿಗಳು ಗೈರಾದರು. ನಂಜನೂಡು ಬ್ಲಾಕ್‍ನಲ್ಲಿ 19 ಕೇಂದ್ರದಿಂದ 4787 ವಿದ್ಯಾರ್ಥಿಗಳಲ್ಲಿ 4550 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 37 ಮಂದಿ ಗೈರು ಹಾಜರಾಗಿದ್ದಾರೆ. ಪಿರಿಯಾಪಟ್ಟಣ ಬ್ಲಾಕ್‍ನಲ್ಲಿ 13 ಕೇಂದ್ರದಲ್ಲಿ 2873 ವಿದ್ಯಾರ್ಥಿಗಳಲ್ಲಿ 2851 ವಿದ್ಯಾರ್ಥಿ ಪರೀಕ್ಷೆ ಬರೆದರೆ, 22 ಗೈರು ಹಾಜರಾದರು. ತಿ.ನರಸೀಪುರ ಬ್ಲಾಕ್‍ನಲ್ಲಿ 13 ಪರೀಕ್ಷಾ ಕೇಂದ್ರಗಳಲ್ಲಿ 3460 ವಿದ್ಯಾರ್ಥಿಗಳಲ್ಲಿ 3428 ಮಂದಿ ಪರೀಕ್ಷೆ ಬರೆದರೆ, 32 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.


ಪ್ರತಿಯೊಬ್ಬರನ್ನು ತಪಾಸಣೆ ಮಾಡಲು ಕ್ರಮ: ಜಿಲ್ಲೆಯಲ್ಲಿನ ಪರೀಕ್ಷಾ ಕೇಂದ್ರಗಳನ್ನು ಬೆಳಗ್ಗೆ 9 ಗಂಟೆಗೆ ತೆರೆಯಲಾಯಿತು. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳ ಪ್ರವೇಶ ಪತ್ರ ಪರಿಶೀಲಿಸಿದ ಬಳಿಕ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಬೇಕಾದ ಆರೋಗ್ಯ ಸೇವೆ ಒದಗಿಸಲು ಸಜ್ಜಾಗಿದ್ದರು.


ಜಿಲ್ಲಾಧಿಕಾರಿ ಕಚೇರಿಯಿಂದಲೇ ನಿಗಾ: 136 ಪರೀಕ್ಷಾ ಕೇಂದ್ರಗಳ 2080 ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸಿಸಿ ಕ್ಯಾಮರ ಕಣ್ಗಾವಲು ಇಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಸಿಸಿ ಕ್ಯಾಮರಾ ಲೈವ್ ದೃಶ್ಯಾವಳಿ ಪರಿಶೀಲನೆಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿತ್ತು.
ಪರೀಕ್ಷಾ ಕೊಠಡಿಯಲ್ಲಿನ ಮೇಲ್ವಿಚಾರಕರ ಮೊಬೈಲ್ ನಂಬರ್‍ಗಳನ್ನು ಪಟ್ಟಿಮಾಡಿಕೊಂಡಿದ್ದ ಸಿಬ್ಬಂದಿ, ಆಯಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಚಲನವಲನದ ಮೇಲೆ ಅನುಮಾನ ಬಂದರೆ ಜಿಲ್ಲಾಧಿಕಾರಿ ಕಚೇರಿ ವೆಬ್ ಕಾಸ್ಟಿಂಗ್ ಕೊಠಡಿಯಿಂದ ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗೆ ಕರೆ ಮಾಡಿ ಮಾಹಿತಿ ನೀಡಲಾಗುತ್ತಿತ್ತು.