ನಗರದಲ್ಲಿ ಬಿದಿರಿನ ಮೊರಕ್ಕೆ ಬೇಡಿಕೆ

ಸಂಜೆವಾಣಿ ವಾರ್ತೆ
ಮೈಸೂರು: ಆ.25:-
ಗೌರಿಗಣೇಶ ಹಬ್ಬವನ್ನು ದೇಶಾದ್ಯಂತ ವಿಭಿನ್ನವಾಗಿ ಆಚರಿಸುತ್ತಾರೆ. ಅದೇ ರೀತಿ ಹಳೇ ಮೈಸೂರು ಭಾಗದಲ್ಲಿ ಗೌರಿಗಣೇಶವನ್ನು ಸಾಂಪ್ರದಾಯಿಕವಾಗಿ ಆಚರಿಸುವುದು ಪದ್ಧತಿ. ಅದರಲ್ಲಿ ಗೌರಿ ಹಬ್ಬದ ದಿನ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಗೌರಿ ಬಾಗಿನ ಅರ್ಪಿಸುವುದು ಸಂಪ್ರದಾಯ. ಇಂತಹ ಬಾಗಿನಕ್ಕೆ ಉಪಯೋಗಿಸುವ ಬಿದಿರಿನ ಮೊರಕ್ಕೆ ಬೇಡಿಕೆ ಹೆಚ್ಚಾಗಿದ್ದು, ವರ್ಷದಲ್ಲಿ ಈ ಸಂದರ್ಭದಲ್ಲಿ ಮಾತ್ರ ಬಿದಿರಿನ ಮೊರಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ.


ಗೌರಿ ಗಣೇಶ ಹಬ್ಬ ಬಂದರೆ ಮನೆಯಲ್ಲಿ ಇರುವ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ ಮತ್ತು ಸಡಗರ. ಅದರಲ್ಲೂ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ತವರುಮನೆಯಿಂದ ಬರುವ ಬಾಗಿನವನ್ನು ಎದುರು ನೋಡುವ ಸಂಭ್ರಮ. ಗೌರಿ ಹಬ್ಬಕ್ಕೆ ತವರುಮನೆಯಿಂದ ಬಿದಿರಿನ ಮೊರದಲ್ಲಿ ಮಗಳಿಗೆ ಅರಿಶಿಣ, ಕುಂಕುಮ, ಹಸಿರು ಬಳೆ, ಸೀರೆ ಸೇರಿದಂತೆ ಮಗಳಿಗೆ ವಿಶೇಷ ಉಡುಗೆಯನ್ನು ಸಹ ಗೌರಿ ಬಾಗಿನದಲ್ಲಿ ಕೊಡುವುದು ಸಂಪ್ರದಾಯ. ಈ ಸಂಪ್ರದಾಯಕ್ಕೆ ಬಳಸುವ ಬಿದಿರಿನ ಮೊರಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ.


ನಗರದ ನೂರೊಂದು ಗಣಪತಿ ದೇವಸ್ಥಾನದ ಆವರಣದಲ್ಲಿ ಕಳೆದ ಒಂದು ವಾರದಿಂದ ಬಿದಿರಿನ ಬಾಗಿನದ ಮೊರವನ್ನು ಹೆಣೆಯುತ್ತಿದ್ದು, ತಮ್ಮ ಹೆಣ್ಣು ಮಕ್ಕಳಿಗೆ ಬಾಗಿನ ಕೊಡಲು ಬಿದಿರಿನ ಮೊರ ಖರೀದಿಗೆ ನಗರದ ಹಾಗೂ ಗ್ರಾಮೀಣ ಭಾಗದ ಜನರು ಇಲ್ಲಿಗೆ ಬಂದು ಖರೀದಿ ಮಾಡುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಮಾತ್ರ ಈ ಬಿದಿರಿನ ಮೊರಕ್ಕೆ ಬೇಡಿಕೆ. ಬೇರೆ ದಿನಗಳಲ್ಲಿ ಕಡಿಮೆ. ಈಗ ಒಂದು ಜೊತೆ ಮೊರಕ್ಕೆ 180-200 ರೂಪಾಯಿ. ದೊಡ್ಡ ಮೊರಕ್ಕೆ ಬೆಲೆಯಿದ್ದು, ಚಿಕ್ಕ ಚಿಕ್ಕ ಮೊರಕ್ಕೆ ಬೆಲೆ ಕಡಿಮೆಯಿದೆ.


ಗೌರಿ ಬಾಗಿನದ ಮೊರಗಳ ಜೊತೆಗೆ ಚಿಕ್ಕ ಮೊರ, ಬಾಗಿನದ ಮೊರ, ಏಳಡಿ ಮೊರ, ಚಿಬ್ಳು, ಅಕ್ಕಿ ಮೊರ, ಗೂಡೆ ಮೊರ ಸೇರಿದಂತೆ ವಿವಿಧ ಮೊರಗಳನ್ನು ಕುಶಲಕರ್ಮಿಗಳು ವರ್ಷದ ಇತರ ದಿನಗಳಲ್ಲಿ ಹೆಣೆಯುತ್ತಾರೆ. ಆದರೆ ಗೌರಿ ಹಬ್ಬದ ಸಂದರ್ಭದಲ್ಲಿ ಬಾಗಿನದ ಮೊರವನ್ನು ಮಾತ್ರ ಹೆಣೆಯುವುದು ಇವರ ಕೆಲಸ. ಇದರ ಜೊತೆಗೆ ಮದುವೆಯ ಸಂದರ್ಭದಲ್ಲಿ ಶುಭಕಾರ್ಯಗಳಿಗೆ ವಿವಿಧ ರೀತಿಯ ಮೊರ ಹಾಗೂ ಇತರ ವಸ್ತುಗಳನ್ನು ಬಿದಿರಿನಲ್ಲಿ ಹೆಣೆದುಕೊಡುವುದು ಇವರ ಕಾಯಕ.