
ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.08-ಪಶು ಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ನಗರದಲ್ಲಿಂದು ವಿವಿಧ ಸರ್ಕಾರಿ ಕಚೇರಿಗಳ ನೂತನ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿದರು.
ಸರ್ಕಾರಿ ಕಾರ್ಯಕ್ರಮಗಳ ನಿಮಿತ್ತ ಇಂದು ಬೆಳಿಗ್ಗೆಯೇ ನಗರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಮೊದಲಿಗೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ವಿಶ್ವಗುರು ಬಸವಣ್ಣನವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಬಳಿಕ ಚಾಮರಾಜನಗರದ ಪ್ರಗತಿ ನಗರ ಬಡಾವಣೆಯಲ್ಲಿ 4 ಕೋಟಿ 11 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಕಟ್ಟಡವನ್ನು ಟೇಪು ಕತ್ತರಿಸುವ ಮೂಲಕ ಉದ್ಘಾಟಿಸಿದರು.
ನಂತರ ನಗರದ ಗಾಳೀಪುರ ರಿಂಗ್ ರಸ್ತೆಯಲ್ಲಿರುವ ವಿದ್ಯುತ್ ಸ್ಟೇಷನ್ ಹತ್ತಿರ ಅಂದಾಜು 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಶು ಆಸ್ಪತ್ರೆಯ ಪಾಲಿ ಕ್ಲಿನಿಕ್ ಕೇಂದ್ರವನ್ನು ಚಾಲನೆಗೊಳಿಸಿದರು.
ಪಾಲಿ ಕ್ಲಿನಿಕ್ ಕೇಂದ್ರದಲ್ಲಿ ಕೊಠಡಿಗಳನ್ನು ವೀಕ್ಷಿಸಿ ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ತದನಂತರ ನಗರದ ಹೊರವಲಯದ ಯಡಬೆಟ್ಟದ ಬಳಿ 80 ಎಕರೆ ಪ್ರದೇಶದಲ್ಲಿ 30 ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಕೃಷಿ ಮಹಾವಿದ್ಯಾಲಯದ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯ ಮತ್ತು ಗ್ರಂಥಾಲಯ ಕಟ್ಟಡಗಳನ್ನು ಉದ್ಘಾಟನೆ ಮಾಡಿದರು.
ಬಳಿಕ ಅಲ್ಲಿಯೇ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಚಾಮರಾಜನಗರದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ನಬಾರ್ಡ್‍ಗೆ ಸರ್ಕಾರ ನೀಡಿರುವ 40 ಕೋಟಿ ರೂ. ಅನುದಾನದ ಪೈಕಿ ಪ್ರಸ್ತುತ 30 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಲಯ ಹಾಗೂ ಗ್ರಂಥಾಲಯಗಳು ಚಾಲನೆಗೊಂಡಿವೆ. ಉಳಿದಂತೆ ವಿಶ್ವವಿದ್ಯಾಲಯ ಆಡಳಿತ ಕೇಂದ್ರ ಹಾಗೂ ಕೃಷಿ ತರಬೇತಿ ಕೇಂದ್ರಗಳ ಕಾಮಗಾರಿ ಆರಂಭವಾಗುತ್ತಿದೆ. ಅಧಿಕಾರಿ. ಸಿಬ್ಬಂದಿ ನೇಮಕಾತಿಗೂ ಸರ್ಕಾರದಿಂದ ಮಂಜೂರಾತಿ ನೀಡಬೇಕಾಗಿದೆ ಎಂದರು.
ಹಿಂದುಳಿದ ವರ್ಗಗಳ ಜನರು ಈ ಭಾಗದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರವು ಬಡವರ, ಹಿಂದುಳಿದವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಕೃಷಿ ಬಗ್ಗೆ ಹೆಚ್ಚಿನ ಜ್ಞಾನ, ತರಬೇತಿ ಪಡೆಯಲು ಈ ವಿಶ್ವವಿದ್ಯಾಲಯ ಸ್ಥಾಪನೆ ಅನುವು ಮಾಡಿಕೊಟ್ಟಿದೆ. ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರಪ್ರದೇಶದ ಮಕ್ಕಳಿಗೆ ಎಲ್ಲಾ ವಿಭಾಗಗಳಲ್ಲಿಯೂ ಹೆಚ್ಚಿನ ಸ್ಪರ್ಧೆ ಒಡ್ಡುತ್ತಿದ್ದಾರೆ.
ಅದಕ್ಕೆ ಶಿಕ್ಷಕರ ಉತ್ತಮ ಪಾಠ, ಪ್ರವಚನ ಕಾರಣವಾಗಿದೆ. ಗ್ರಾಮೀಣ ಭಾಗದ ಮಕ್ಕಳು ದಿನೇದಿನೇ ಹೆಚ್ಚೆಚ್ಚು ವಿದ್ಯಾವಂತರಾಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಮುಂದಿದ್ದಾರೆ. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ವಿವಿಧತೆಯಲ್ಲಿ ಏಕತೆ ಹೊಂದಿರುವ ಚಾಮರಾಜನಗರ ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಜಿಲ್ಲೆಗೆ ಕೃಷಿ ವಿ.ವಿ. ತರಲು ಹಿಂದೆ ಸಚಿವರಾಗಿದ್ದ ದಿ. ಎಚ್.ಎಸ್. ಮಹದೇವಪ್ರಸಾದ್ ಹಾಗೂ ಸಂಸದರಾಗಿದ್ದ ದಿ. ಆರ್. ಧ್ರುವನಾರಾಯಣ್ ಅವರೊಂದಿಗೆ ಶ್ರಮಿಸಿದ್ದೇವೆ. 2017-18ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ವಿ.ವಿ ಗೆ ಅನುಮೋದನೆ ನೀಡಿದ್ದರು. ಈಗ ಅದು ಫಲಪ್ರಧವಾಗಿದೆ. ಇದರಿಂದ ಈ ಭಾಗದ ರೈತರಿಗೆ ಮಣ್ಣು ಪರೀಕ್ಷೆ, ವಿವಿಧ ಬಗೆಯ ಕೃಷಿ ಬೆಳೆಗಳನ್ನು ಬೆಳೆಯಲು ಅನುಕೂಲವಾಗಲಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಉತ್ತಮ ಸಾಧನೆ ಮಾಡಿ ವಿದ್ಯಾರ್ಥಿಗಳು ಈ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.
ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಅಮಚವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತೇಜಸ್ವಿನಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಕೃಷಿ ವಿವಿ. ವಿಶೇಷಾಧಿಕಾರಿ ಡಾ. ಸಿ. ದೊರೆಸ್ವಾಮಿ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಹಿತಾ ಜಿ. ಸುವರ್ಣಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಸೋಮೇಶ್ವರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






























