
ಪುತ್ತೂರು; ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ‘ಜಲಧಾರೆ’ಗೆ ಜನತೆ ಬೆಚ್ಚಿ ಬೀಳುವಂತಾಗಿದೆ. ಜೀವನದಿಗಳಿಂದ ಹಿಡಿದು ರಸ್ತೆಯ ತನಕ ಎಲ್ಲೆಲ್ಲೂ ನೀರರಾಶಿ. ಸಂಗಮ ಕ್ಷೇತ್ರ ಉಪ್ಪಿನಂಗಡಿಯಲ್ಲಿ ಜೀವನದಿಗಳಾದ ಕುಮಾರಧಾರಾ ಮತು ನೇತ್ರಾವತಿ ಜೀವತುಂಬಿ ಹರಿಯುತ್ತಿವೆ. ಪ್ರಸ್ತುತ ಅಪಾಯದ ಮಟ್ಟದಲ್ಲಿ ಇರದಿದ್ದರೂ ಎಡೆಬಿಡದೆ ಸುರಿಯುತ್ತಿರುವ ಹಿನ್ನಲೆಯಲ್ಲಿ ನದೀ ಪಾತ್ರದಲ್ಲಿರುವ ಜನತೆಗೆ ಆತಂಕ ಸೃಷ್ಟಿಯಾಗಿದೆ. ಮಳೆಯ ಆರ್ಭಟ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇದರ ಪರಿಣಾಮ ಗ್ರಾಮೀಣ ಭಾಗದ ತೋಡು, ಹಳ್ಳ, ಗದ್ದೆಗಳಲ್ಲಿ ಜಲವೋ ಜಲ..
ಚರಂಡಿ ಸ್ವಚ್ಛ ‘ನಾಟಕ’ ಕೃತಕನೆರೆ..
ಪುತ್ತೂರು ನಗರದಲ್ಲಿ ಮಳೆಗಾಲದಲ್ಲಿ ಇಲ್ಲಿನ ಚರಂಡಿಗಳ ಬದಲು ರಸ್ತೆಯಲ್ಲಿಯೇ ನೀರು ಹರಿಯುವುದು ಇಲ್ಲಿನ ವಿಶೇಷತೆ.. ನಗರಸಭಾ ವ್ಯಾಪ್ತಿಯಲ್ಲಿರುವ ಬಹುತೇಕ ಚರಂಡಿಗಳು ಹಾಗೂ ರಾಜಕಾಲುವೆ ಈ ಬಾರಿ ದುರಸ್ಥಿಯೇ ಆಗಿಲ್ಲ. ಮಳೆಗಾಲದ ಮೊದಲು ನಗರದ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ನಗರಸಭೆ ಟೆಂಡರ್ ಕರೆದು ಅನುದಾನ ನೀಡುತ್ತದೆ. ಒಂದೆರಡು ಚರಂಡಿ ಸ್ವಚ್ಛಗೊಳಿಸಿದ ನಾಟಕ ಮಾಡಿ ಅಲ್ಲಿಗೆ ಚರಂಡಿ ವಿಚಾರವೇ ಎತ್ತುವವರಿಲ್ಲ. ಇದೀಗ ನಗರದ ಬಹುತೇಕ ರಸ್ತೆಗಳು ಮಳೆರಾಯನ ಆರ್ಭಟಕ್ಕೆ ತೋಡುಗಳಾಗಿ ಪರಿವರ್ತನೆಗೊಂಡಿದೆ. ಪುತ್ತೂರು ನಗರದ ಯಾವ ಚರಂಡಿಗಳಲ್ಲಿಯೂ ಮಳೆ ನೀರು ಹರಿಯುತ್ತಿಲ್ಲ. ಕಾರಣ ಹುಲ್ಲು,ಕಸಕಡ್ಡಿ ತುಂಬಿ ನೀರು ಹರಿಯದಂತಹ ವಾತಾವರಣ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಕೃತಕ ನೆರೆ ಉಂಟಾಗಿದೆ. ಚರಂಡಿ ದುರಸ್ಥಿಗೆ ಹಣ ನೀಡುವ ನಗರಸಭೆ ಆಗದ ಕೆಲಸಗಳ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ. ಈ ಕೃತಕ ನೆರೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ನೆಲ್ಲಿಕಟ್ಟೆ ‘ಚರಂಡಿ’ ಸದಾ ಜೀವಂತ..
ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿನ ನೆಲ್ಲಿಕಟ್ಟೆ ಚರಂಡಿ ಸಮಸ್ಯೆಗೆ ಸುಮಾರು ೧೫ ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಇಲ್ಲಿ ಖಾಸಗಿ ಬಸ್ ನಿಲ್ದಾಣವೂ ಇದೆ. ಸ್ವಲ್ಪ ಮಳೆ ಬಂದರೂ ಸಾಕು. ಇಲ್ಲಿನ ಚರಂಡಿಗಳು ತುಂಬಿ ಕೃತಕ ನೆರೆ ಉಂಟಾಗುತ್ತದೆ. ಈ ಬಾರಿ ಮಳೆಯ ಆರ್ಭಟದಿಂದ ನೆಲ್ಲಿಕಟ್ಟೆಯ ಈ ಭಾಗ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇಲ್ಲಿ ಓಡಾಡುವ ಜನತೆ ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಇಲ್ಲಿನ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ನಗರಸಭೆಯ ಆಡಳಿತಗಳಿಗೂ ಅಧಿಕಾರಿಗಳಿಗೂ ಸಾಧ್ಯವಾಗಿಲ್ಲ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಚರಂಡಿ ವಿಚಾರ ನೂರಕ್ಕೂ ಹೆಚ್ಚು ಸಲ ಪ್ರಸ್ತಾಪವಾಗಿರಬಹುದು. ಆದರೆ ಚರಂಡಿ ಸಮಸ್ಯೆ ಈಗಲೂ ಜೀವಂತವಾಗಿದೆ.
೧೦ ವರ್ಷಗಳಿಂದ ಮುಳುಗಡೆಯಾಗುವ ಅಂಗಡಿ..!
ಪುತ್ತೂರು ಎಪಿಎಂಸಿ ರಸ್ತೆಯ ಸಾಲ್ಮರ ಎಂಬಲ್ಲಿರುವ ಗೂಡಂಗಡಿಯೊಂದು ಕಳೆದ ೧೦ ವರ್ಷಗಳಿಂದ ಮಳೆಗೆ ಮುಳುಗುತ್ತಿದೆ. ಈ ಬಾರಿಯೂ ಮುಳುಗಿದೆ. ರಸ್ತೆಯ ಬದಿಯಲ್ಲಿ ಚರಂಡಿ ಪಕ್ಕದಲ್ಲಿಯೇ ಇರುವ ಈ ಗೂಡಂಗಡಿ ಮಳೆಗಾಲದಲ್ಲಿ ಬಹುತೇಕ ಸುದ್ದಿಯಲ್ಲಿರುತ್ತದೆ. ಆದರೆ ಈ ತನಕ ಗೂಡಂಗಡಿ ಮುಳುಗಡೆಯಾಗದಂತೆ ಮಾಡುವ ಯಾವ ಕೆಲಸಗಳೂ ನಡೆದಿಲ್ಲ. ನಾಡಿನ ನೂರಾರು ಸಮಸ್ಯೆಗಳಿಗೆ ಪರಿಹಾರ ಇದೆ. ಆದರೆ ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿನ ಈ ಗೂಡಂಗಡಿ ಮುಳುಗಡೆಯಾಗದಂತೆ ತಡೆಯುವ ಪರಿಹಾರ ಮಾರ್ಗ ಅಧಿಕಾರಿ ವರ್ಗಕ್ಕೆ ಇನ್ನೂ ಸಿಕ್ಕಿಲ್ಲ.. ನಗರಸಭೆಯ ಎಂಜಿನಿಯರ್ ಗಳಿಗೆ ಈ ಗೂಡಂಗಡಿಯೊಂದು ಸವಾಲಾಗಿದೆ..!
ಸಾವಿರಾರು ಅಡಿಕೆ ಮರಗಳ ನಾಶ
ಕಳೆದ ಎರಡು ದಿನಗಳ ಮಳೆಯ ಆರ್ಭಟದೊಂದಿಗೆ ಬೀಸಿದ ಬಿರುಗಾಳಿಗೆ ತಾಲೂಕಿನ ಹಲವು ಭಾಗದಲ್ಲಿ ಫಲಭರಿತ ಅಡಿಕೆಮರಗಳು ಹಾಗೂ ತೆಂಗಿನಮರಗಳು ಧರಾಶಾಹಿಯಾಗಿವೆ. ಬೆಟ್ಟಂಪಾಡಿ, ಹಿರೇಬಂಡಾಡಿ ಮತ್ತು ಬಜತ್ತೂರು ಗ್ರಾಮಗಳಲ್ಲಿ ಸಾವಿರಾರು ಅಡಿಕೆ ಮರಗಳ ಮುರಿದುಬಿದ್ದು ಪರಿಣಾಮ ರೈತರ ಪಾಲಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ. ಹಿರೆಬಂಡಾಡಿಯ ಮಜಿಕುಡೇಲು ರುಕ್ಮಿಣಿ ಅವರ ೬೦೦ ಅಡಿಕೆ ಮರಗಳು ಹಾಗೂ ಮನೆಗೆ ಹಾನಿಯಾಗಿದೆ.ಧನಂಜಯ ಗೌಡ ಅವರ ೫೦೦ ಅಡಿಕೆ ಮರಗಳು, ಜನಾರ್ಧನ ಗೌಡ ಅವರ ೪೫೦ ಮರಗಳು, ಚಿದಾನಂದ ಅವರ ೩೫ ಮರಗಳು, ದಿನೇಶ್ ಅವರ ೨೫ ಮರಗಳು, ಹೊನ್ನಪ್ಪ ಗೌಡ ಅವರ ೧೦೦ ಮರಗಳು, ವಾಸಪ್ಪ ಗೌಡ ಅವರ ೭೫ ಅಡಿಕೆ ಮರಗಳು ನಾಶವಾಗಿವೆ. ಬಜತ್ತೂರಿನ ಕೆಲ ಭಾಗದಲ್ಲಿ ಭಾನುವಾರ ಮಧ್ಯಾಹ್ನ ಬೀಸಿದ ಬಿರುಗಾಳಿಗೆ ಹಲವು ಅಡಿಕೆ ತೋಟಗಳಲ್ಲಿ ಅಡಿಕೆ ಮರಗಳು ಬಿದ್ದು ನಾಶವಾಗಿದೆ.
ಬಾಕ್ಸ್ ಐಟಂ
ಮೆಸ್ಕಾಂ ತುರ್ತು ನಂಬರ್ ಡೆಡ್..!
‘ಸಂಯುಕ್ತಕರ್ನಾಟಕ’ಭಾನುವಾರ ಮೆಸ್ಕಾಂನಿಂದ ಜನತೆಗೆ ಕತ್ತಲಭಾಗ್ಯ ಎಂದ ವರದಿ ಮಾಡಿತ್ತು. ಈ ವರದಿಯಲ್ಲಿ ಅಧಿಕಾರಿಗಳ ಪೋನ್ ನಾಟ್ ರೀಚೇಬಲ್ ಬಗ್ಗೆ ಗಮನ ಸೆಳೆಯಲಾಗಿತ್ತು. ಈ ಹಿನ್ನಲೆಯಲ್ಲಿ ಮೆಸ್ಕಾಂ ವತಿಯಿಂದ ಕೆಲವೊಂದು ತುರ್ತು ನಂಬರ್ ಗಳನ್ನು ಪ್ರಕಟ ಮಾಡಲಾಗಿತ್ತು. ಇದರಲ್ಲಿ ಉಪ್ಪಿನಂಗಡಿ ಮೆಸ್ಕಾಂ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಯೂ ಒಂದಾಗಿದೆ. ಆದರೆ ಈ ಸ್ಥಿರ ದೂರವಾಣಿಗೆ ಫೋನ್ ಮಾಡಿದರೆ ನಂಬರ್ ಡೆಡ್..!