ಸಂಜೆವಾಣಿ ನ್ಯೂಸ್
ಮೈಸೂರು.ಸೆ.06:- ನಗರದ ವಿವಿಧೆಡೆ ಮುಸ್ಲಿಮರು ಶುಕ್ರ ವಾರ ಪ್ರವಾದಿ ಮುಹಮ್ಮದ್ ಅವರ ಜನ್ಮದಿನ ಈದ್ ಮಿಲಾದ್ ಅನ್ನು ಸಂಭ್ರಮದಿಂದ ಆಚರಿಸಿದರು.
ಈದ್ ಮಿಲಾದ್ ಹಿನ್ನೆಲೆಯಲ್ಲಿ ಸಾಮೂಹಿಕ ಮೆರವಣಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭಂಗಳು ನಡೆದವು. ಹಬ್ಬದ ಆಚರಣೆ ಪ್ರಯುಕ್ತ ಮಸೀದಿಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಮನೆಗಳಲ್ಲಿ ಹಬ್ಬದ ವಾತಾವರಣವಿತ್ತು. ನಗರದ ಬಹುತೇಕ ಮಸೀದಿಗಳಲ್ಲಿ ಸಂಜೆಯ ಮಗ್ರಿಬ್ ನಮಾಜ್ ಬಳಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅಶೋಕ ರಸ್ತೆಯ ಮಸ್ಜಿದ್ ಎ ಆಜಂನಿಂದ ಹೊರಟ ಮೆರವಣಿಗೆ ಸಾಡೇ ರಸ್ತೆ, ಈದಿಗಾ ಮಸೀದಿ ರಸ್ತೆ, ಪುಲಿಕೇಶಿ ರಸ್ತೆ, ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ ರಸ್ತೆಗಳಲ್ಲಿ ಸಾಗಿತು.
ಮಸ್ಜಿದ್ ಎ ಆಜಂನಲ್ಲಿ ಶಂಶದ್ ಹುದಾ ಪ್ರವಚನ ನೀಡಿದರು. ಪ್ರವಾದಿ ಮುಹಮ್ಮದ್ ಅವರ ಸಂದೇಶಗಳು ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. ಪ್ರತಿಯೊಬ್ಬ ಮುಸ್ಲಿಮನೂ ಪ್ರವಾದಿ ಕಲಿಸಿಕೊಟ್ಟ ಮಾರ್ಗದಲ್ಲಿ ತಮ್ಮ ಜೀವನ ರೂಪಿಸಿಕೊಳ್ಳಬೇಕು. ಅವರ ಸಂದೇಶಗಳನ್ನು ಎಲ್ಲರಿಗೂ ತಲುಪಿಸುವ ಕೆಲಸ ಆಗಲಿ. ಮಾನವ ಸಮುದಾಯದ ಮೇಲೆ ಪ್ರೀತಿ ತೋರಬೇಕು ಎಂದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಚಿಣ್ಣರು ಬಾವುಟಗಳನ್ನು ಹಿಡಿದು ಶಾಂತಿ-ಸಹೋದರತ್ವದ ಸಂದೇಶ ಸಾರಿದರು. ಇದೇ ವೇಳೆ ಪ್ರವಾದಿ ಅವರ ಗುಣಗಾನ ಮಾಡುವ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು. ವಿಶೇಷ ಪ್ರಾರ್ಥನೆಯಲ್ಲಿ ಮಕ್ಕಳು, ಹಿರಿಯರು ಪಾಲ್ಗೊಂಡು ಪರಸ್ಪರ ಹಬ್ಬದ ಶುಭಾಶಯ ಕೋರಿದರು. ಮನೆಗಳಲ್ಲಿ ವಿಶೇಷ ಭಕ್ಷ್ಯಗಳನ್ನು ಸಿದ್ಧಪಡಿಸಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೆÇಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.




























