
ಬೆಂಗಳೂರು,ಜೂ.೨೯- ಐತಿಹಾಸಿಕ ಪ್ರಸಿದ್ಧಿ ಪಡೆದ ನಂದಿ ಗಿರಿಧಾಮದಲ್ಲಿ ಜು.೨ ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ನಾಳೆ(ಜೂ.೩೦) ಬೆಳಿಗ್ಗೆ ೬ ಗಂಟೆಯಿಂದ ಜುಲೈ ೩ರ ಮಧ್ಯಾಹ್ನ ೨ ಗಂಟೆವರೆಗೂ ನಂದಿ ಬೆಟ್ಟ ಹಾಗೂ ಸ್ಕಂದಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ.
೨೦೨೫ನೇ ಸಾಲಿನ ೧೪ನೇ ಸಚಿವ ಸಂಪುಟ ಸಭೆಯು ಜುಲೈ ೨ ರಂದು ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ.
ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರುಗಳು ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಹೀಗಾಗಿ, ಮುಂಜಾಗೃತಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಜೂನ್ ೩೦ರ ಬೆಳಿಗ್ಗೆ ೬ ಗಂಟೆಯಿಂದ ಜುಲೈ ೩ರ ಮಧ್ಯಾಹ್ನ ೨ ಗಂಟೆವರೆಗೂ ನಂದಿ ಬೆಟ್ಟ ಹಾಗೂ ಸ್ಕಂದಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಿದ್ದಾರೆ.
ನಂದಿ ಬೆಟ್ಟದ ಮೇಲೆ ಇರುವ ಅತಿಥಿಗೃಹಗಳನ್ನು ಬಂದ್ ಮಾಡಲಾಗಿದೆ. ನಂದಿ ಬೆಟ್ಟಕ್ಕೆ ಹೋಗಲು ಹಾಗೂ ಬರಲು ಒಂದೇ ರಸ್ತೆ ಇದ್ದು ವಾಹನ ದಟ್ಟಣೆ ಹೆಚ್ಚಾಗುತ್ತದೆ. ಬೆಟ್ಟಕ್ಕೆ ತೆರಳುವ ರಸ್ತೆ ಸಂಪೂರ್ಣ ತಿರುವಿನಿಂದ ಕೂಡಿದೆ.
ಈ ರಸ್ತೆಗಳಲ್ಲಿ ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಕಷ್ಟ ಸಾದ್ಯ, ಈ ಹಿನ್ನೆಲೆಯಲ್ಲಿ ಪೊಲೀಸರು ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ, ನಿರ್ಬಂಧ ವಿಧಿಸಲಾಗಿದೆ.
ಇನ್ನು ಪ್ರವಾಸಿಗರ ಮತ್ತೊಂದು ನೆಚ್ಚಿನ ತಾಣ ಸ್ಕಂದಗಿರಿಗೂ ಈ ನಿಯಮ ಅನ್ವಯವಾಗುತ್ತದೆ. ಸಂಪುಟ ಸಭೆ ಇರುವುದರಿಂದ ಬಹುನಂದೀಶ್ವರ ದೇವಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನೀಡಲಾಗುತ್ತಿಲ್ಲ.