
ಸಂಜೆವಾಣಿ ವಾರ್ತೆ
ನಂಜನಗೂಡು.ನ.08:- ಪ್ರತಿ ಟನ್ ಕಬ್ಬಿಗೆ 3500 ರೂ ಬೆಲೆ ನೀಡುವಂತೆ ಆಗ್ರಹಿಸಿ ಬೆಳಗಾವಿಯ ಗರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ರೈತರ ಅನಿರ್ಧಿಷ್ಟಾವಧಿ ಪ್ರತಿಭಟನೆ ಬೆಂಬಲಿಸಿ ನಂಜನಗೂಡಿನಲ್ಲೂ ಶುಕ್ರವಾರ ಕರ್ನಾಟಕ ರಾಜ್ಯರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯ ಸಂಗೋಳ್ಳಿ ರಾಯಣ್ಣ ವೃತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ನೇತೃತ್ವದಲ್ಲಿ ಜಮಾಯಿಸಿದ ನೂರಾರು ರೈತರು,ರಾಷ್ಟ್ರೀಯ ಹೆದ್ದಾರಿ ತಡೆದು, ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಹೆದ್ದಾರಿಯಲ್ಲಿ ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ಮಾತನಾಡಿ, ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ, ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಹಾಗೂ ರಾಜ್ಯದ ಇನ್ನಿತರ ಕಾರ್ಖಾನೆಗಳಿಗೂ ಪೂರೈಕೆ ಆಗುವ ಪ್ರತಿ ಟನ್ ಕಬ್ಬಿಗೆ ಕಟಾವು ಕೂಲಿ ಹಾಗೂ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಲೇ ಭರಿಸಿ, ರೈತರ ಖಾತೆಗೆ 3500 ರೂ ಮುಂಗಡವಾಗಿ ಜಮಾ ಮಾಡಬೇಕು. ರೈತರ ಕಬ್ಬಿನ ಬೆಳೆಗೆ ಇಳುವರಿ ಶೇಕಡ 10.25 ಸಕ್ಕರೆ ಇಳುವರಿ ಆಧಾರದ ಮೇಲೆ ಬೆಲೆ ನಿಗದಿ ಆಗುತ್ತಿರುವುದನ್ನು ರೈತ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಇಳುವರಿಯನ್ನು ಕಾರ್ಖಾನೆಗಳು ರೈತರಿಗೆ ಸುಳ್ಳು ಹೇಳುತ್ತಿರುವುದರಿಂದ ರೈತರು ಇಂತಹ ಮೋಸಗಳನ್ನು ಒಪ್ಪುವುದಿಲ್ಲ ಹಾಗಾಗಿ ಕಬ್ಬು ಬೆಳೆಗಾರರ ರಕ್ಷಣೆಗೆ ಮುಖ್ಯಮಂತ್ರಿಗಳು ಹಾಗೂ ಸಕ್ಕರೆ ಸಚಿವರು ರೈತರ ಹಿತವನ್ನು ಕಾಪಾಡಬೇಕು. ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಮಾಡಬೇಕು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಮೈಸೂರು ಜಿಲ್ಲೆಯಲ್ಲಿ ಭತ್ತದ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆಯಬೇಕು. ಈಗಾಗಲೇ ಕಾಡು ಪ್ರಾಣಿಗಳ ದಾಳಿಯಿಂದ ರೈತರು ಸಾವನ್ನಪ್ಪುತ್ತಿದ್ದಾರೆ. ರೈತರಿಗೆ ಸೂಕ್ತ ಪರಿಹಾರ ನೀಡಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಹೆದ್ದಾರಿಯಲ್ಲಿ ಪ್ರತಿಭಟನೆ ಹಿನ್ನೆಲೆ ಕೆಲಕಾಲ ಮೈಸೂರು ಮತ್ತು ಚಾಮರಾಜನಗರಕ್ಕೆ ತೆರಳುವ ವಾಹನಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಿದ್ದು ಕಂಡುಬಂದಿತು.
ಪ್ರತಿಭಟನೆಯಲ್ಲಿ ರೈತ ಸಂಘದ ದೊಡ್ಡಯ್ಯ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಉಪ್ಪಿನಹಳ್ಳಿ ದೇವರಾಜು, ಶ್ವೇತ,ಮಲ್ಲಹಳ್ಳಿ ರವಿ, ಅಹಲ್ಯ ನಂಜುಂಡ, ಕತ್ತವಾಡಿಪುರ ಶಿವಣ್ಣ ಸವಿತಾ ಶಂಕರ ನಾಯಕ ಮಾದೇಗೌಡ ಹಲ್ಲರೆ ಬಸವರಾಜು, ಸೋಮಣ್ಣ ಸೇರಿದಂತೆ ನೂರಾರು ರೈತ ಭಾಗವಹಿಸಿದ್ದರು.



























