
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.25: ಒಂದು ಸರ್ಕಾರ ವ್ಯವಸ್ಥಿತವಾಗಿ ಮಾಡಲಾಗದ ಎಲ್ಲಾ ಅಭಿವೃದ್ದಿ ಯೋಜನೆಗಳನ್ನು ರೂಪಿಸಿ ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಜನ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ಶಾಸಕ ಹೆಚ್.ಟಿ.ಮಂಜು ಅವರ ಪತ್ನಿ ರಮಾಮಂಜು ಶ್ಲಾಘಿಸಿದರು.
ಅವರು ತಾಲೂಕಿನ ಕಾಪನಹಳ್ಳಿ ಗವೀಮಠದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಸಬಾ ವಲಯದ ಸಾಧನ ಸಮಾವೇಶ ಮತ್ತು ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.
ಗ್ರಾಮೀಣ ಅಭಿವೃದ್ದಿಗೆ ಮತ್ತು ನಮ್ಮ ನಾಡಿನ ಸಾಂಸ್ಕೃತಿಕ ವಿಕಸನಕ್ಕೆ ಧರ್ಮಸ್ಥಳ ಸಂಸ್ಥೆ ಕೆಲಸ ಮಾಡುತ್ತಿದ್ದು ಜನರ ಪ್ರೀತಿ ಗಳಿಸಿದೆ. ಮಹಿಳಾ ಸ್ವಸಹಾಯ ಗುಂಪುಗಳನ್ನು ರಚಿಸಿ ಮಹಿಳೆಯ ಆರ್ಥಿಕ ಪ್ರಗತಿಗೆ ಸಂಸ್ಥೆ ಹೆಗಲುಕೊಟ್ಟು ದುಡಿಯುತ್ತಿದೆ. ಮಹಿಳೆಯ ಸ್ವಯಂ ಉದ್ಯೋಗಕ್ಕೆ ಸಂಸ್ಥೆ ವೇದಿಕೆ ನಿರ್ಮಿಸಿದ್ದು ವೃತ್ತಿ ಕೌಶಲ್ಯದ ಜೊತೆಗೆ ಅಗತ್ಯ ಮಾರ್ಗದರ್ಶನ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಮಾಡುತ್ತಿದೆ. ಇದರಿಂದಾಗಿ ಸಾಮಾಜಿಕವಾಗಿ ಮಹಿಳೆಯರು ಸಬಲರಾಗುತ್ತಿದ್ದಾರೆ. ಜಾತಿ, ಮತ, ಪಂಥ ಮತ್ತು ಧರ್ಮದ ತಾರತಮ್ಯವಿಲ್ಲದೆ ಧರ್ಮಸ್ಥಳ ಸಂಸ್ಥೆ ಸರ್ವ ಸಮುದಾಯ ಜನರ ಪ್ರಗತಿಗೆ ಶ್ರಮಿಸುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆ ಅವರು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳ ಲಾಭ ಪಡೆದು ಎಲ್ಲರೂ ಪ್ರಗತಿ ಪಥಕ್ಕೆ ಬರುವಂತೆ ರಮಾಮಂಜು ಕರೆ ನೀಡಿದರು.
ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೀಶ್ ಮಾತನಾಡಿ ಯೋಜನೆಯು ಕೆ.ಆರ್.ಪೇಟೆ ತಾಲೂಕಿನಲ್ಲಿ ಸುಮಾರು 14 ವರ್ಷಗಳ ಹಿಂದೆ ಪ್ರಾರಂಭಗೊಂಡು ಉತ್ತಮ ಸಮಾಜಸೇವೆಯನ್ನು ಮಾಡುತ್ತಿದೆ. ಕಸಬಾ ವಲಯದಲ್ಲಿ 314 ತಂಡಗಳಿದ್ದು ಎಲ್ಲವೂ ಎ ಶ್ರೇಣಿ ಯಲ್ಲಿ ಇರುತ್ತದೆ. ಸುಜ್ಞಾನ ನಿಧಿ ಶಿಷ್ಯ ವೇತನ, ಸಾಲಾ ಮಕ್ಕಳಿಗೆ ಉಚಿತ ಟ್ಯೂಷನ್ ಕ್ಲಾಸ್, ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ, ಮಧ್ಯವರ್ಜನಾ ಶಿಬಿರ, ಅರೋಗ್ಯ ಶಿಬಿರ, ಸಮುದಾಯ ಅಭಿವೃದ್ಧಿ, ದೇವಸ್ಥಾನಗಳ ಪುನಶ್ಚೇತನಕ್ಕೆ ಅನುದಾನ, ಕೆರೆಗಳ ಪುನಶ್ಚೇತನ, ಹಾಲು ಉತ್ಪಾದಕರ ಸಹಕಾರ ಸಂಘ ಗಳಿಗೆ ಅನುದಾನ, ಶಾಲೆಗಳಿಗೆ ಅಗತ್ಯವಿರುವಕಡೆ ಅತಿಥಿ ಶಿಕ್ಷಕರ ನೇಮಕ, ಪೀಠೋಪಕರಣಗಳ ಕೊಡುಗೆ ಸೇರಿದಂತೆ ಹಲವಾರು ಸಮುದಾಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ. ಸಮುದಾಯ ಸಹಕಾರದಿಂದ ನಮ್ಮ ಸಂಸ್ಥೆ ಧರ್ಮಾಧಿಕಾರಿಗಳ ಎಲ್ಲಾ ಬಗೆಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಿ ಜನರಿಗೆ ತಲುಪಿಸುತ್ತಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅತ್ಯುತ್ತಮ ಒಕ್ಕೂಟಗಳಿಗೆ ಬಹುಮಾನ ವಿತರಿಸಿ ಹೆಣ್ಣು ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ಸಂದರ್ಭದಲ್ಲಿ ಸಾಮಾಜಿಕವಾಗಿ ಎದುರಿಸಬೇಕಾದ ಸವಾಲುಗಳ ಬಗ್ಗೆ ಅರಿವು ಮೂಡಿಸಿದರು. ಕಾಪನಹಳ್ಳಿ ಗವೀಮಠದ ಸ್ವತಂತ್ರ ಸಿದ್ದಲಿಂಗ ಚನ್ನವೀರ ಸ್ವಾಮೀಜಿಗಳು ಆರ್ಶಿವಚನ ನೀಡಿ ಶುಭಕೋರಿದರು.
ಗ್ರಾಮಂತರ ಪೆÇಲೀಸ್ ಠಾಣೆಯ ನಿರೀಕ್ಷಕ ಆನಂದೇಗೌಡ, ತಾಲೂಕು ಯೋಜನಾ ಅಧಿಕಾರಿ ಪ್ರಸಾದ್, ವಲಯ ಮೇಲ್ವಿಚಾರಕಿ ಗುಣಶ್ರೀ, ಗ್ರಾ.ಪಂ. ಅಧ್ಯಕ್ಷ ಕುಮಾರ್, ಪ್ರಥಮ ದರ್ಜೆ ಗುತ್ತಿಗೆದಾರ ವಿ.ಡಿ.ಮೋಹನ್, ಕುಶಾಲ್ ಪಟೇಲ್, ಸಾವಿತ್ರಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಧಾ ಹರೀಶ್, ನಾಗೇಶ್ ಕಾಪನಹಳ್ಳಿ, ರವಿ ಕಾಳೇಗೌಡನ ಕೊಪ್ಪಲು, ಪುಟ್ಟರಾಜು ಕಾಪನಹಳ್ಳಿ, ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷೆ ನಳಿನ, ಜನಜಾಗೃತಿ ಸಮತಿಯ ಸದಸ್ಯ ಕುಮಾರ್, ವಲಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.




























