
ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.21:- ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸೇವಾ ಕಾರ್ಯಕ್ರಮದೊಂದಿಗೆ ನಿರ್ಗತಿಕರಿಗೆ ಮನೆಗಳನ್ನು ನಿರ್ಮಿಸಿಕೊಡುವ ಮಾನವೀಯ ಕೆಲಸಗಳನ್ನು ಮಾಡುತ್ತಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಹೇಳಿದರು.
ತಾಲೂಕಿನ ಅರಳೀಪುರ ಗ್ರಾಮದಲ್ಲಿ ನಿರ್ಗತಿಕ ರತ್ನಮ್ಮ ಅವರಿಗೆ ನಿರ್ಮಿಸಿರುವ ವಾತ್ಸಲ್ಯ ಮನೆಯನ್ನು ಹಸ್ತಾಂತರ ಮಾಡಿ ಮಾತನಾಡಿದರು.
ಶ್ರೀ ವೀರೇಂದ್ರಹೆಗ್ಗಡೆಯವರ ಕಾಳಜಿ ಫಲವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರು ಮುಖ್ಯವಾಹಿನಿಗೆ ಬರಲು ಶ್ರಮಿಸುತ್ತಿದೆ. ಅದೇ ಬಗೆಯಲ್ಲಿ ನಿರ್ಗತಿಕರನ್ನು ಗುರುತಿಸಿ, ಮಾಶಾಸನ ನೀಡುವ ಜತೆಗೆ, ಹಂತ ಹಂತವಾಗಿ ವಾತ್ಸಲ್ಯ ಮನೆಗಳನ್ನು ನಿರ್ಮಿಸಿಕೊಡುತ್ತಿರುವುದು ಮಾದರಿಯಾಗಿದೆ ಎಂದರು.
ಸಂಸ್ಥೆಯು ಜಿಲ್ಲೆಯಲ್ಲಿ ಇಂಥ ಸಾಕಷ್ಟು ಮನೆಗಳನ್ನು ನಿರ್ಮಿಸಿ ಅಗತ್ಯವುಳ್ಳವರಿಗೆ ನೀಡಿದೆ. ಜೊತೆಗೆ ಮಾಸಾಶನವನ್ನು ಸಹ ದುರ್ಬಲರಿಗೆ ನೀಡುತ್ತಿದೆ ಎಂದು ಹೇಳಿದರು.ಸಮಾಜದ ದುರ್ಬಲ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ದೂರದೃಷ್ಟಿ ಹೊಂದಿರುವ ಶ್ರೀ ವೀರೇಂದ್ರ ಹೆಗ್ಗಡೆ ಯವರ ಕಾರ್ಯ ಶ್ಲಾಘನೀಯವಾದದ್ದು ಎಂದರು.
ಇದೇ ವೇಳೆ ಮನೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್. ಸಿದ್ದಲಿಂಗಸ್ವಾಮಿ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ದೀಪ ಬೆಳಗಿಸಿದರು. ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ದಿನೇಶ್, ಚಾಮರಾಜನಗರ ತಾಲೂಕು ಯೋಜನಾಧಿಕಾರಿ ಹರೀಶ್‍ಕುಮಾರ್, ಗ್ರಾ.ಪಂ. ಸದಸ್ಯೆ ವಸಂತಾ, ಗ್ರಾಮದ ಮುಖಂಡ ಮೊಕ್ತಾಮ್ ಗೋವಿಂದರಾಜು, ಪತ್ರಕರ್ತ ಪಾಲಲೊಚನಾರಾದ್ಯ ಇತರರು ಹಾಜರಿದ್ದರು.




























