
ಸಂಜೆವಾಣಿ ವಾರ್ತೆ
ಚಾಮರಾಜನಗರ: ಜ.05:- ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ವತಿಯಿಂದ ನಡೆದ ಸಾಮೂಹಿಕ ಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭೆ ಕಾರ್ಯಕ್ರಮವನ್ನು ಮುಡುಕನಪುರ ಹಲವರ ಮಠದ ಶ್ರೀ ಷಡಕ್ಷರ ದೇಶಿಕೇಂದ್ರೀಯ ಮಹಾಸ್ವಾಮಿಗಳು ಉದ್ಘಾಟಿಸಿದರು.
ನಂತರ ಮಾತನಾಡಿದ ಶ್ರೀಗಳು ಅವರು ಬದುಕಿನಲ್ಲಿ ಸಮಸ್ಯೆಗಳು ಬಂದಾಗ ಕುಗ್ಗದೇ, ದೃಢನಂಬಿಕೆ ಮತ್ತು ಆತ್ಮ ವಿಶ್ವಾಸದೊಂದಿಗೆ ಮುನ್ನಡೆದಾಗ ಮಾತ್ರ ಸಮಸ್ಯೆಗಳು ಮಂಜಿನ ತರಹ ಮಾಯವಾಗುತ್ತವೆ, ಎಂಬ ಮಾತುಗಳು ಸರ್ವಕಾಲಕ್ಕೂ ಸತ್ಯ. ನಾವು ಎಷ್ಟೇ ಒಳ್ಳೆಯ ಕಾರ್ಯಗಳನ್ನು ಮಾಡಿದರು ಟೀಕಾಕಾರರು ಇದ್ದೇ ಇರುತ್ತಾರೆ. ಅಂತಹವುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ, ನಮ್ಮ ಗುರಿಯ ಕಡೆಗೆ ನಮ್ಮ ಗಮನವಿರಬೇಕು. ಕೇವಲ ಬೆರಳೆಣಿಕೆಯಷ್ಟು ಜನ ಧರ್ಮಸ್ಥಳ ಹಾಗೂ ಸಂಸ್ಥೆಯ ಹೆಸರು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅದು ಅವರಿಗೆ ಫಲಪ್ರದವಾಗುವುದಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಯಾವುದೇ ಸ್ವಾರ್ಥವಿಲ್ಲದೆ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರು ಎಂದಿಗೂ ಸಂಬಳಕ್ಕಾಗಿ ಕೆಲಸ ಮಾಡುವುದಿಲ್ಲ ಬದಲಾಗಿ ಅವರು ಗ್ರಾಮೀಣ ಭಾಗದ ಬಡ ಕುಟುಂಬದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಜೊತೆಗೆ ಈ ಧರ್ಮಸ್ಥಳ ಸಂಘ ಜಾತ್ಯಾತೀತವಾಗಿ ಯಾವುದೇ ಭೇದವಿಲ್ಲದೆ, ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ಜನರಲ್ಲಿ ನಿರಂತರವಾಗಿ ಸದ್ಭಾವನೆಗಳನ್ನು ಬೆಳೆಸುತ್ತಿದೆ. ದುಶ್ಚಟಗಳಿಗೆ ಬಲಿಯಾಗಿರುವ ಜನರನ್ನು ಬದಲಾಯಿಸಿ ಒಳ್ಳೆಯ ಜೀವನಕ್ಕೆ ಕರೆತರುತ್ತಿದೆ ಎಂದು ತಿಳಿಸಿದರು.
ನಂತರ ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷರು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ ಸರ್ಕಾರ ಮಾಡಲಾಗದ ಕೆಲಸವನ್ನು ಶ್ರೀಕ್ಷೇತ್ರದ ಧರ್ಮಸ್ಥಳದ ಡಾ. ಸಿ.ವಿರೇಂದ್ರಹೆಗಡೆ ಅವರು ಮಾಡುತ್ತಿದ್ದಾರೆ. ಮಹಿಳೆಯರಿಗೆ ಸಾಲ ಸೌಲಭ್ಯ ಕಲ್ಪಿಸಿಕೊಡುವುದಷ್ಟೇ ಇದರ ಉದ್ದೇಶವಲ್ಲ. ಅವರನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕೆಂಬ ಅವರು ಸಂಕಲ್ಪ ಮಾಡಿ, ಅನುಷ್ಠಾನ ಮಾಡಿರುವ ಯೋಜನೆಗಳು ಮನೆ ಮಾತಾಗಿವೆ. ನಮ್ಮ ಹಿಂದುಳಿದ ಜಿಲ್ಲೆಯಾಗಿದೆ. ಕೃಷಿಯನ್ನು ಹೆಚ್ಚು ಅವಲಂಬಿಸಿರುವ ರೈತಾಪಿ ವರ್ಗದವರಿಗೆ ಕೃಷಿಆಧಾರಿತವಾಗಿ ಜೀವನ ನಡೆಸುವ ಕ್ರಮವನ್ನು ಸಹ ಹೇಳಿಕೊಟ್ಟಿದ್ದಾರೆ. ಇಂಥ ಹತ್ತು ಹಲವಾರು ಕಾರ್ಯಕ್ರಮಗಳು ಸಂಸ್ಥೆಯ ವತಿಯಿಂದ ನಡೆಯುತ್ತಿದೆ ಎಂದರು.
ಧಾರ್ಮಿಕ ಉಪನ್ಯಾಸಕರಾಗಿ ಮಾತನಾಡಿದ ಸೋಮವಾರಪೇಟೆ ಶ್ರೀಕಾಂತ್ ಪ್ರತಿ ಮಗುವಿನ ಆರಂಭಿಕ ಜೀವನದಲ್ಲಿ ತಾಯಂದಿರು ಗುರುವಾಗಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ. ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮಕ್ಕಳಿಗೆ ಮೊದಲ ಗುರುವಾಗಿರುತ್ತಾಳೆ. ಮಕ್ಕಳ ಜೀವನದಲ್ಲಿ ಶಿಕ್ಷಣ ನೀಡುವಲ್ಲಿ ತಾಯಿಯ ಪಾತ್ರ ಪ್ರಮುಖವಾಗಿರುತ್ತದೆ. ಅದೇರೀತಿ ಪ್ರತಿಯೊಬ್ಬರ ಜೀವನದಲ್ಲೂ ಸಂಸ್ಕಾರ ಅತ್ಯಂತ ಮುಖ್ಯವಾಗಿರುತ್ತದೆ, ಏಕೆಂದರೆ ಸಂಸ್ಕಾರ ನಮ್ಮನ್ನು ಒಳ್ಳೆಯ ದಾರಿಯಲ್ಲಿ ನಡೆಸುತ್ತವೆ, ಸಮಾಜದಲ್ಲಿ ಉತ್ತಮವಾದ ಮೌಲ್ಯಗಳನ್ನು ಬೆಳೆಸಿ, ಉತ್ತಮ ನಾಗರಿಕರನ್ನಾಗಿ ರೂಪಿಸುತ್ತವೆ. ಸಂಸ್ಕಾರಗಳು ಸಮಾಜ ಮತ್ತು ಶಿಕ್ಷಣದ ಮೂಲಕ ರೂಪುಗೊಳ್ಳುತ್ತವೆ, ನಮ್ಮ ಸಾಮಥ್ರ್ಯಗಳನ್ನು ಹೊರಹಾಕಲು ಸಹಾಯ ಮಾಡುತ್ತವೆ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ಪೂರ್ಣಗೊಳಿಸುತ್ತದೆ, ಆದರಿಂದ ಪ್ರತಿಯೊಬ್ಬ ತಾಯಂದಿರು ಕೂಡ ತಮ್ಮ ತಮ್ಮ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ತಿಳಿಸಬೇಕು ಕಲಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಾವಣ್ಯ ಮಹೇಶ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಎಂ.ಬಸವಣ್ಣ, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶಮಿತ್ ಕುಮಾರ್, ಯೋಜನೆ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಬಿಸಲವಾಡಿ ರವಿ, ಲಕ್ಷ್ಮಿ ಪೂಜೆ ಸಮಿತಿ ಅಧ್ಯಕ್ಷ ಉಮೇಶ್ ಪುಟ್ಟಣ್ಣ, ಗ್ರಾಮದ ಗೌಡಿಕೆ ನಂಜುಂಡಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯರಾದ ಮೆಡಿಕಲ್ ಅಶೋಕ್, ಹೆಚ್.ಆರ್.ಸ್ವಾಮಿ, ಮುಖಂಡರಾದ ಚಿಕ್ಕಮೊಳೆ ಮಹೇಶ್, ನಂಜೇಂದ್ರಪ್ಪ, ಮಹೇಶ್ ಏSಖಖಿಅ, ರಾಜು ಹೊಸೂರು, ಹರದನಹಳ್ಳಿ ವಲಯದ ಮೇಲ್ವಿಚಾರಕರಾದ ಶಶಿಧರ್, ಪ್ರತಿನಿಧಿಗಳಾದ ವೆಂಕಟಯ್ಯನಛತ್ರ ಶಿಲ್ಪ, ಚಾಮುಂಡಮ್ಮ, ಶಿವು ಕುಮಾರ್, ಮಮತ, ನಾಗೇಂದ್ರ, ನಗೀನಾ, ಮಮತಶ್ರೀ, ಪ್ರಜ್ವಲ್, ಪಾರ್ವತಿ, ಜ್ಯೋತಿ ಸೇರಿದಂತೆ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.




























