ಧರ್ಮಸ್ಥಳ ಯೋಜನೆಯ ಮಾವಿನಕಟ್ಟೆ ಒಕ್ಕೂಟದಿಂದ ಆಟಿದ ಕೂಟ ಮತ್ತು ಕ್ರೀಡಾಕೂಟ

ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ಮಾವಿನಕಟ್ಟೆ ಒಕ್ಕೂಟದಲ್ಲಿ ಆಟಿದ ಕೂಟ ಮತ್ತು ಕ್ರೀಡಾಕೂಟವು ಮಾವಿನ ಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಸಭಾಭವನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೇಜಿ ನೆಡುವುದರ ಮೂಲಕ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಬಾಬು ಮಾಸ್ತರ್ ಅಚ್ರಪ್ಪಾಡಿ ಚಾಲನೆ ನೀಡಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮಾವಿನಕಟ್ಟೆ ಒಕ್ಕೂಟದ ಅಧ್ಯಕ್ಷ ಭಾನುಪ್ರಕಾಶ್ ತಳೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಅವರು ಆಟಿ ತಿಂಗಳ ಮಹತ್ವ ಧಾರ್ಮಿಕ ಆಚಾರ ವಿಚಾರಗಳು, ನಮ್ಮ ನಂಬಿಕೆ ಸಂಸ್ಕೃತಿ ಹಾಗೂ ಗ್ರಾಮಾಭಿವೃದ್ಧಿ ಬಗ್ಗೆ ಮಾತನಾಡಿದರು.
ಗುತ್ತಿಗಾರು ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರಾದ ಬಿ ಪೂರ್ಣಚಂದ್ರ ಬೊಮ್ಮದೇರೆ, ಪ್ರಗತಿಬಂಧು ಮತ್ತು ಸ್ವಸಹಾಯ ಸಂಘದ ಗುತ್ತಿಗಾರು ಒಕ್ಕೂಟದ ಅಧ್ಯಕ್ಷ ಯೋಗೀಶ ದೇವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘಗಳ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಟ ವೇತನ ಮತ್ತು ವಿದ್ಯಾನಿಧಿಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ೯ ವರ್ಷಗಳಿಂದ ಸೇವಾಪ್ರತಿನಿಧಿಯಾಗಿ ಸೇವೆಗೈದ ಉಷಾಲತರವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು.
ಸಾನ್ವಿ ಹೆಚ್ ತಳೂರು ಪ್ರಾರ್ಥಿಸಿದರು. ವಲಯದ ಮೇಲ್ವಿಚಾರಕ ರಾಜೇಶ್ ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಗಿರೀಶ್ ಟಿ. ಪಿ. ವಂದಿಸಿದರು. ಗುತ್ತಿಗಾರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಲೋಕೇಶ್ವರ ಡಿ. ಆರ್ ಕಾರ್ಯಕ್ರಮ ನಿರೂಪಿಸಿದರು.