ದ್ವೇಷ ಭಾಷಣದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ತನ್ವೀರ್ ಸೇಠ್

ಸಂಜೆವಾಣಿ ನ್ಯೂಸ್
ಮೈಸೂರು.ಜೂ.01:-
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಸರಣಿ ಕೊಲೆಗಳ ಬಗ್ಗೆ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಮುಂದೆ ಯಾರೇ ದ್ವೇಷ ಭಾಷಣ ಮಾಡಿದರೂ ಅವರ ವಿರುದ್ಧ ರಾಜ್ಯ ಸರ್ಕಾರ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.


ಮೈಸೂರು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ರಾಘವೇಂದ್ರ ನಗರ ಬಡಾವಣೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ನೀರು ಸರಬರಾಜು ಮತ್ತು ಒಳಚರಂಡಿ (ಪೂ) ವಿಭಾಗದ ವತಿಯಿಂದ 40 ಲಕ್ಷ ರೂ ವೆಚ್ಚದಲ್ಲಿ ಮೈಸೂರು ನಗರದ ವಾರ್ಡ್ ನಂ.37ರ ರಾಘವೇಂದ್ರ ಮಠದ ರಸ್ತೆ 1, 2, 3 ಮತ್ತು 4ನೇ ಕ್ರಾಸ್‍ಗಳಲ್ಲಿ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸರಣಿ ಕೊಲೆಗಳ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಮೃತಪಟ್ಟ ಎರಡೂ ಕೋಮಿನ ಜನರಿಗೆ ಸಾಕಷ್ಟು ನೋವುಂಟಾಗಿರುವುದು ನಿಜ, ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಹಾಗಂತ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸುವ ಅಗತ್ಯವಿರಲಿಲ್ಲ.


ರಾಜೀನಾಮೆ ಕೊಡುವುದು ಸಮಸ್ಯೆಗೆ ಪರಿಹಾರವಲ್ಲ, ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದಾರೆ. ಯಾವುದೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಆಯಾ ಜಿಲ್ಲಾಧಿಕಾರಿಗಳು ಮತ್ತು ಪೆÇಲೀಸ್ ವರಿಷ್ಠರು ಹೊಣೆ ಹೊರಬೇಕಾಗುತ್ತದೆ. ಈಗಾಗಲೇ ಅಧಿಕಾರಿಗಳ ವರ್ಗಾವಣೆಯಾಗಿ ಹೊಸ ಅಧಿಕಾರಿಗಳು ಬಂದಿದ್ದಾರೆ. ಮುಂದೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲಾಗುವುದು ಎಂದರು.


ಈ ಸಂದರ್ಭದಲ್ಲಿ ಮೈಸೂರು ಮಹಾನಗರಪಾಲಿಕೆ ಆಯುಕ್ತ ಷೇಕ್ ತನ್ವೀರ್ ಆಸೀಫ್, ಸಾಹುಕಾರ್ ಚನ್ನಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಎನ್.ಮಂಜುನಾಥ್, ನಗರಪಾಲಿಕೆ ಮಾಜಿ ಸದಸ್ಯರಾದ ಡಿ.ಗೋಪಾಲ್, ರಾಜೇಶ್ವರಿ, ಸತ್ಯರಾಜ್, ಮುಖಂಡರಾದ ಕಮಲಮ್ಮ, ಅನಂತಮೂರ್ತಿ, ಶಶಿಕುಮಾರ್, ಅಣ್ಣಯ್ಯ, ಹರೀಶ್, ರಘು, ಹನುಮಂತು, ಯೋಗೇಶ್ ಮತ್ತಿತರರು ಇದ್ದರು.