
ಪುತ್ತೂರು; ಮಹತ್ವಾಕಾಂಕ್ಷಿ ಯೋಜನೆಯಾದ ಪುತ್ತೂರು ನಗರದ ಡ್ರೈನೇಜ್ ವ್ಯವಸ್ಥೆಗೆ ಸ್ವಿಜರ್‌ಲ್ಯಾಂಡ್ ಕ್ಯೂಯಾಕ್ಸ್ ಕಂಪೆನಿಯೊಂದಿಗೆ ಒಡಬಂಡಿಕೆ ಮಾಡಿಕೊಂಡು ಇಲ್ಲಿನ ದ್ರವವ್ಯಾಜ್ಯ ವನ್ನು ವ್ಯಾಕ್ಯೂಮ್ ಸಿಸ್ಟಂ ಮೂಲಕ ವಿಲೇವಾರಿ ಮಾಡುವ ನೂತನ ತಂತ್ರಜ್ಞಾನವನ್ನು ದೇಶದಲ್ಲೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಪರಿಚಯ ಮಾಡಲಾಗುವುದು. ಈ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದ್ದು, ಸರ್ಕಾರದ ಅನುಮತಿಯೊಂದಿಗೆ ಈ ಹೊಸ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಅಶೋಕ್ ರೈ ಹೇಳಿದರು.
ಸ್ವಿಜರ್‌ಲ್ಯಾಂಡಿನ ಈ ಕಂಪೆನಿ ವ್ಯವಸ್ಥಿತ ಪೈಪುಗಳನ್ನು ಅಳವಡಿಕೆ ಮಾಡುವ ಮೂಲಕ ನಗರದ ದ್ರವತ್ಯಾಜ್ಯಗಳ ವಿಲೇವಾರಿ ಮಾಡಲಿದೆ. ನಿಗದಿತ ಪ್ರದೇಶಗಳಲ್ಲಿ ಚೇಂಬರ್ ನಿರ್ಮಿಸಿ ಅಲ್ಲಿಂದ ವ್ಯಾಕ್ಯೂಮ್ ಮೂಲಕ ತ್ಯಾಜ್ಯಗಳನ್ನು ಹೀರುವ ವ್ಯವಸ್ಥೆ ಮಾಡಲಾಗುವುದು. ಕಂಪೆನಿ ಇದಕ್ಕೆ ರೂ.೮೫ ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ರಾಜ್ಯ ಸರ್ಕಾರ ರೂ.೧೫ ಕೋಟಿ ನೀಡಲಿದೆ. ಒಟ್ಟು ೧೦೦ ಕೋಟಿ ವ್ಯವಸ್ಥೆಯಲ್ಲಿ ದೇಶದ ಮೊದಲ ಆಧುನಿಕ ತಂತ್ರಜ್ಞಾನದ ಮೂಲಕ ದ್ರವತ್ಯಾಜ್ಯ ವಿಲೇವಾರಿ ವ್ಯವಸ್ಥೆಯೊಂದು ಜಾರಿಗೆ ಬರಲಿದೆ.
ಆ ಮೂಲಕ ‘ಪುತ್ತೂರು ಮಾದರಿ’ ದೇಶದ ವಿವಿಧ ನಗರಗಳಲ್ಲಿನ ದ್ರವತ್ಯಾಜ್ಯದ ವಿಲೇವಾರಿಯ ಆಧುನಿಕ ತಂತ್ರಜ್ಞಾನ ಕ್ಕೊಂದು ಪ್ರತ್ಯಕ್ಷ ಸಾಕ್ಷಿಯಾಗಲಿದೆ. ಈ ಬಗ್ಗೆ ಪುತ್ತೂರಿನಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ಡಿಪಿಆರ್ ಕೂಡಾ ಮಾಡಲಾಗಿದೆ. ಸರ್ಕಾರದ ಜತೆಗೆ ಮಾತುಕತೆ ನಡೆಸುವ ಮೂಲಕ ಈ ನೂತನ ವ್ಯವಸ್ಥೆಯನ್ನು ಅನುಷ್ಟಾನ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಪುತ್ತೂರು ನಗರದಲ್ಲಿ ಕಳೆದ ಕೆಲ ವರ್ಷಗಳಿಂದ ಒಳಚರಂಡಿ ವ್ಯವಸ್ಥೆ ಅತ್ಯಂತ ಮಾರಕವಾಗಿ ಪರಿಣಮಿಸಿದೆ. ನಗರದ ರಾಜಕಾಲುವೆಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿ ಪರಿವರ್ತಿತಗೊಂಡಿದೆ. ರಸ್ತೆ ಬದಿಯ ಚರಂಡಿಗಳಲ್ಲಿಯೂ ಕೊಳಚೆ ನೀರು ಹರಿಯುತ್ತಿದ್ದು, ಇದರ ನಿವಾರಣೆಯಲ್ಲಿ ನಗರಸಭೆ ಸಂಪೂರ್ಣ ವಿಫಲಗೊಂಡಿದೆ. ಸಂಜೆ ಹೊತ್ತು ಆಗುತ್ತಿದ್ದಂತೆ ಸೈನಿಕರೋಪಾದಿಯಲ್ಲಿ ಧಾಳಿ ನಡೆಸುವ ಸೊಳ್ಳೆ ಕಾಟಕ್ಕೆ ಪುತ್ತೂರು ಕಂಗಾಲಾಗಿದೆ. ಈ ನಿಟ್ಟಿನಲ್ಲಿ ಪುತ್ತೂರಿಗೆ ನೂತನ ಡ್ರೈನೇಜ್ ವ್ಯವಸ್ಥೆಯೊಂದರ ಅಗತ್ಯತೆ ಹೆಚ್ಚಾಗಿದೆ. ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಲು ಪರದಾಡುತ್ತಿರುವ ಸ್ಥಳೀಯಾಡಳಿತಕ್ಕೆ ಈ ಹೊಸ ವ್ಯವಸ್ಥೆ ಸಮರ್ಪಕವಾಗಿ ಅನುಷ್ಟಾನಗೊಂಡರೆ ನಿಟ್ಟುಸಿರು ಬಿಡುವಂತಾಗುತ್ತದೆ.
ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಹೋಟೆಲ್ ಗಳು ಉದ್ಯಮಗಳು ಕಾರ್ಯಾಚರಿಸುತ್ತಿವೆ. ಇದರಲ್ಲಿನ ದ್ರವತ್ಯಾಜ್ಯಗಳನ್ನು ನೇರವಾಗಿ ರಾಜಕಾಲುವೆಗಳಿಗೆ ಬಿಡಲಾಗುತ್ತಿದೆ. ಆಸ್ಪತ್ರೆಗಳ ದ್ರವತ್ಯಾಜ್ಯಗಳೂ ಈ ರಾಜಕಾಲುವೆಯ ಹೊಟ್ಟೆಗೇ ಸೇರುತ್ತಿವೆ. ವಸತಿಗೃಹಗಳೂ ಸೇರಿದಂತೆ ಬಹುತೇಕ ಮನೆಗಳ ದ್ರವತ್ಯಾಜ್ಯವೂ ರಾಜಕಾಲುವೆಗೆ ಆಹಾರವಾಗುತ್ತಿದೆ. ಹಾಗಾಗಿ ಈ ಬಿದಿರುಹಳ್ಳದಂತಹ ರಾಜಕಾಲುವೆ ಕೊಳಚೆ ಕಾಲುವೆಯಾಗಿ ಬದಲಾವಣೆಯಾಗಿದೆ. ನಗರಸಭೆ ನಿರ್ಮಿಸಿದ ರಸ್ತೆ ಬದಿಯ ಚರಂಡಿಗಳಲ್ಲಿಯೂ ಕೊಳಚೆ ನೀರು ನಿಂತು ಸಮಸ್ಯೆಯನ್ನು ಮತ್ತಷ್ಟು ಭೀಕರಗೊಳಿಸಿದೆ. ಜನಾರೋಗ್ಯಕ್ಕೆ ಮಾರಕವಾಗಿರುವ ಸುತ್ತಮುತ್ತಲ ಕೊಳಚೆ ವ್ಯವಸ್ಥೆಯನ್ನು ತಡೆಯಲು ಅಸಾಧ್ಯವಾಗಿರುವುದೇ ಇಲ್ಲಿನ ದೊಡ್ಡ ಸಮಸ್ಯೆಯಾಗಿದೆ.
ಈ ನಿಟ್ಟಿನಲ್ಲಿ ಇದೀಗ ಶಾಸಕರ ಮಹತ್ವಕಾಂಕ್ಷಿ ಯೋಜನೆಯ ಅನುಷ್ಟಾನ ಪುತ್ತೂರಿನ ಸಮಸ್ಯೆಯ ಪರಿಹಾರಕ್ಕೆ ಪೂರಕವಾಗಿದೆ. ಇಂತಹದ್ದೊಂದು ಕಾರ್ಯಯೋಜನೆಗೆ ಸರ್ಕಾರದ ಮಟ್ಟದಲ್ಲಿಯೂ ಒಪ್ಪಿಗೆ ಸಿಗಬೇಕಾಗಿದೆ. ವಿದೇಶಿ ಕಂಪೆನಿಯೊಂದು ೮೫ ಕೋಟಿ ಹಣವನ್ನು ಈ ವ್ಯವಸ್ಥೆಯಲ್ಲಿ ಬಳಕೆ ಮಾಡುವುದು ಮುಂದೆ ಸಾಕಷ್ಟು ನಗರಗಳಲ್ಲಿ ಇಂತಹ ಯೋಜನೆಯ ಅನುಷ್ಟಾನದ ಚಿಂತನೆ ಅಡಗಿದೆ.



























