
ನವದೆಹಲಿ,ಅ.೧೮- ಮಧ್ಯ ಮೊಜಾಂಬಿಕ್‌ನ ಬೀರಾ ಬಂದರಿನಲ್ಲಿ ದೋಣಿ ಮುಳುಗಿದ ಹಿನ್ನೆಲೆಯಲ್ಲಿ ಕನಿಷ್ಠ ಮೂವರು ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದು ಐದು ಮಂದಿ ಕಾಣೆಯಾಗಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಕಡಲಾಚೆಯಲ್ಲಿ ಲಂಗರು ಹಾಕಲಾದ ಟ್ಯಾಂಕರ್ ಬಳಿಕ ೧೪ ಮಂದಿ ಸಿಬ್ಬಂದಿ ಇದ್ದ ದೋಣಿ ನೀರಿನಲ್ಲಿ ಮುಳುಗಿದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ. ದೋಣಿ ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.ದೋಣಿ ಸಮುದ್ರದಲ್ಲಿ ಮುಳುಗಿದ ಸಮಯದಲ್ಲಿ ೧೪ ಭಾರತೀಯ ಪ್ರಜೆಗಳು ದೋಣಿಯಲ್ಲಿದ್ದರು ಎನ್ನಲಾಗಿದೆ. ಮೂರು ಮಂದಿ ಮೃತಪಟ್ಟಿದ್ದು ಐದು ಮಂದಿ ಕಾಣೆಯಾಗಿದ್ದಾರೆ. ಈ ಸಂಬಂಧ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಐದು ಜನರನ್ನು ರಕ್ಷಿಸಲಾಗಿದೆ ಮತ್ತು ಅವರು ಸುರಕ್ಷಿತರಾಗಿದ್ದಾರೆ ಎಂದು ಹೈಕಮಿಷನ್ ದೃಢಪಡಿಸಿದೆ,ಒಬ್ಬರು ಬೀರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಣೆಯಾದ ಐದು ಭಾರತೀಯರ ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದ್ದಾರೆ.ಮೃತರ ಕುಟುಂಬಗಳಿಗೆ ಬೆಂಬಲ ನೀಡಲಾಗುತ್ತಿದೆ ಮತ್ತು ಜೀವಹಾನಿಯ ಬಗ್ಗೆ ರಾಯಭಾರ ಕಚೇರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಮೃತಪಟ್ಟ ಭಾರತೀಯರ ಸಮಗ್ರ ಮಾಹಿತಿ ಪಡೆದು ಅವರ ಪಾರ್ಥೀವ ಶರೀರವನ್ನು ತಾಯ್ನಾಡಿಗೆ ಕಳುಹಿಸುವ ಎಲ್ಲಾ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ.
“ಬೀರಾ ಬಂದರಿನ ಬಳಿ ದೋಣಿ ಅಪಘಾತದಲ್ಲಿ ಮೂವರು ಭಾರತೀಯ ಪ್ರಜೆಗಳು ಸೇರಿದಂತೆ ಜೀವಹಾನಿಗೆ ತೀವ್ರ ಸಂತಾಪ ಸೂಚಿಸುತ್ತೇವೆ. ಈ ದುರದೃಷ್ಟಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳೊಂದಿಗೆ ರಾಯಬಾರ ಕಛೇರಿ ಸಂಪರ್ಕದಲ್ಲಿದೆ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡಿದೆ.






























