
ಸಂಜೆವಾಣಿ ವಾರ್ತೆ
ತಿ.ನರಸೀಪುರ ನ.26- ತಾಲೂಕಿನ ಬನ್ನೂರು ಹೋಬಳಿಯ ದೊಡ್ಡಮುಲಗೂಡು ಗ್ರಾಮ ಸಂಪೂರ್ಣ ವಿಮಾ ಗ್ರಾಮವಾದ ಹಿನ್ನೆಲೆಯಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗೆ ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಬಳುವಳಿಯಾಗಿ ನೀಡಲಾಯಿತು.
ತಾಲೂಕಿನ ಗಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾರತೀಯ ಜೀವ ವಿಮಾ ನಿಗಮ ಮೈಸೂರು ವಿಭಾಗದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ದೊಡ್ಡಮುಲಗೂಡು ಗ್ರಾಮವನ್ನು 2024-2025 ನೇ ಸಾಲಿನ ಸಂಪೂರ್ಣ ವಿಮಾಗ್ರಾಮ ಘೋಷಣೆ ಕಾರ್ಯಕ್ರಮದಲ್ಲಿ ಎರಡು ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸಲಾಯಿತು.
ಮೈಸೂರು ವಿಭಾಗದ ಹಿರಿಯ ವಿಭಾಗ ಪ್ರಬಂಧಕಿ ಎಂ.ಕೃಷ್ಣವೇಣಿ ಅವರು ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ ಬಳಿಕ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬೇಕು. ನಿಗಮದಿಂದ 2047ರ ವೇಳೆಗೆ ರಾಷ್ಟ್ರದ ಎಲ್ಲಾ ನಾಗರಿಕರಿಗೆ ಜೀವವಿಮಾಸೌಲಭ್ಯ ಒದಗಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಮೈಸೂರು ವಿಭಾಗದ ಮಾರುಕಟ್ಟೆ ಪ್ರಬಂಧಕ ಜೀವನ್ ಕುಮಾರ್ ಮಾತನಾಡಿ, ರಾಷ್ಟ್ರದ ಅಭಿವೃದ್ಧಿಯಲ್ಲಿ ನಿಗಮವು ಹಲವು ಯೋಜನೆಗಳಿಗೆ ಹೂಡಿಕೆ ಮಾಡುತ್ತಿವೆ. ಗ್ರಾಮೀಣ ಪ್ರದೇಶದ ಜನರು ಇನ್ನೂ ಹೆಚ್ಚಿನ ಜೀವವಿಮಾ ಸೌಲಭ್ಯಕ್ಕೆ ನೋಂದಣಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ರಮ ಪ್ರಬಂಧಕ ಗುರುರಾಜರಾವ್ ರವರು ವಿಮಾ ಗ್ರಾಮ ಮತ್ತು ವಿಮಾ ಶಾಲೆಯ ಬಗ್ಗೆ ತಿಳಿಸಿದರು. ಸಂಪೂರ್ಣ ವಿಮಾ ಗ್ರಾಮಕ್ಕೆ ಶ್ರಮಿಸಿದ ಜೀವವಿಮಾ ಪ್ರತಿನಿಧಿಗಳಾದ ಎಂ.ಎಂ. ಮಹದೇವ ಹಾಗೂ ಪಿ.ಸುಮಾ ಅವರನ್ನ ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ವಿಕ್ರಮ ಪ್ರಬಂಧಕರಾದ ಎಸ್.ಎ.ಮಂಜುನಾಥ, ಉಮಾಶಂಕರ್, ಕೊಳ್ಳೇಗಾಲ ಮುಖ್ಯ ಶಾಖೆಯ ಹಿರಿಯ ಶಾಖಾಧಿಕಾರಿ ಜಿ.ಎನ್. ಮಹದೇವಸ್ವಾಮಿ, ಟಿ. ನರಸೀಪುರ ಶಾಖೆಯ ಅಧಿಕಾರಿ ಕೆ.ಎನ್. ಕಾಂತರಾಜಪ್ಪ, ಉಪ ಶಾಖಾಧಿಕಾರಿ ವೆಂಕಟೇಶ್, ಮುಖಂಡರಾದ ಸ್ವಾಮಿಗೌಡ, ಶಿನೇಗೌಡ, ರಾಮಕೃಷ್ಣ, ಮಲ್ಲೇಶ, ಡಿ.ಎಂ. ಸೋಮಶೇಖರ್, ಗಿರೀಶ್, ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್.ಪ್ರಕಾಶ್, ಮಲ್ಲಿಕಾರ್ಜುನ್ ಹಾಗೂ ಗ್ರಾಮಸ್ಥರು ಇದ್ದರು.



























