Home ಜಿಲ್ಲೆ ಮಂಗಳೂರು ದೈವನರ್ತಕ ಸುಬ್ಬಣ್ಣ ಪಂಡಿತರಿಗೊಳಿದ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ

ದೈವನರ್ತಕ ಸುಬ್ಬಣ್ಣ ಪಂಡಿತರಿಗೊಳಿದ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ

ಉಪ್ಪಿನಂಗಡಿ; ಬೆಂಗಳೂರು ಜಾನಪದ ಅಕಾಡೆಮಿ ೨೦೨೬-೨೭ನೇ ಸಾಲಿನ ಜಾನಪದ ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ ಹಾಗೂ ಇಬ್ಬರಿಗೆ ಜಾಣಪದ ವಿದ್ವಾಂಸ ತಜ್ಞ ಪ್ರಶಸ್ತಿ ಘೋಷಣೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ವಾರ್ಷಿಕ ಗೌರವ ಪ್ರಶಸ್ತಿ ಬಜತ್ತೂರು ಗ್ರಾಮದ ಕಾಂಚನ ಕುಡ್ತಡ್ಕ ನಿವಾಸಿ ದೈವನರ್ತಕ ಸುಬ್ಬಣ್ಣ ಪಂಡಿತರ ಪಾಲಿಗೆ ದೊರಕಿದೆ.
ಸುಮಾರು ೪೫ ವರ್ಷಗಳಿಂದ ತುಳುನಾಡಿನಲ್ಲಿ ದೈವನರ್ತಕರಾಗಿ ಸೇವೆ ಮಾಡುತ್ತಿರುವ ಸುಬ್ಬಣ್ಣ ಪಂಡಿತರು ವಿಶೇಷವಾಗಿ ತನ್ನ ೨೦ನೇ ವರ್ಷದಿಂದಲ್ಲೇ ಕಲ್ಲುರ್ಟಿ, ಗುಳಿಗ ಮತ್ತಿತರ ದೈವಗಳಿಗೆ ನರ್ತನಸೇವೆ ನಡೆಸುವ ಮೂಲಕ ತನ್ನನ್ನು ತೊಡಗಿಸಿಕೊಂಡವರು. ತನ್ನ ತಂದೆ ದುಗ್ಗಣ್ಣ ಪಂಡಿತರ ನಿಧನಾನಂತರ ಪ್ರಧಾನದೈವಗಳಾದ ಶಿರಾಡಿ, ಬಸ್ತಿನಾಯ್ಕ, ರಕ್ತೇಶ್ವರಿ ಮತ್ತಿತರ ದೈವಗಳ ನರ್ತನ ಸೇವೆಯನ್ನು ಆರಂಭಿಸಿದರು. ಪುತ್ತೂರು ಹಾಗೂ ಕಡಬ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಸರುವಾಸಿಯಾಗಿರುವ ಅವರ ನರ್ತನಸೇವೆ ವಿಶೇಷವಾಗಿ ಬೆಳ್ತಂಗಡಿ ತಾಲೂಕಿನ ಮುಗೇರಡ್ಕ, ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಪಡ್ಪು, ಮಣಿಕ್ಕಳ, ನಾಗೋಜಿ, ಕಣಿಯ, ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿ, ಪುತ್ತೂರಿನ ಪಾಂಗ್ಲಾಯಿ ಸಹಿತ ಹಲವಾರು ಕಡೆಗಳಲ್ಲಿ ನಿತ್ಯನಿರಂತರ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ತುಳುನಾಡನ್ನು ಹೊರತು ಪಡಿಸಿ ಶ್ರವಣಬೆಳಗೊಳದಲ್ಲಿ ನಡೆಯುವ ನೇಮೋತ್ಸವದಲ್ಲಿ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳಿಗೆ ಸುಬ್ಬಣ್ಣ ಪಂಡಿತರಿಂದಲೇ ನರ್ತನ ಸೇವೆ ನಡೆಯುತ್ತಿದೆ. ಸಕಲೇಪುರ ಭಾಗದಲ್ಲಿಯೂ ಇವರ ದೈವಗಳ ನರ್ತನಸೇವೆ ನಡೆಸುವ ಮೂಲಕ ತುಳುನಾಡನ್ನು ಮೀರಿ ಬೆಳೆದ ಜಾನಪದ ಕಲಾವಿದರಾಗಿ ಅವರು ಗುರುತಿಸಿಕೊಂಡಿದ್ದಾರೆ.
ಬೆಂಗಳೂರಿನ ಜಾನಪದ ಅಕಾಡೆಮಿ ೨೦೨೬-೨೭ರ ಸಾಲಿನಲ್ಲಿ ೩೦ ಮಂದಿಗೆ ವಾರ್ಷಿಕ ಪ್ರಶಸ್ತಿ ಹಾಗೂ ಇಬ್ಬರು ಜಾನಪದ ವಿದ್ವಾಂಸರಿಗೆ ತಜ್ಞ ಪ್ರಶಸ್ತಿ ಘೋಷಣೆ ಮಾಡಿದೆ. ವಾರ್ಷಿಕ ಪ್ರಶಸ್ತಿ ರೂ.೨೫ ಸಾವಿರ ನಗದು ಹಾಗೂ ತಜ್ಞ ಪ್ರಶಸ್ತಿ ರೂ.೫೦ಸಾವಿರ ನಗದು ಹೊಂದಿದೆ. ಜತೆಗೆ ಸ್ಮರಣಿಕೆ, ಶಾಲು, ಫಲತಾಂಬೂಲ ನೀಡಿ ಕಲಾವಿದರನ್ನು ಗೌರವಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರು ಗೊಲ್ಲ ಪ್ರಸಾದ್ ಅಕಾಡೆಮಿ ರಿಜಿಸ್ಟಾರ್ ಶೃತಿ ಎಂ ಅವರು ತಮ್ಮ ಪ್ರಶಸ್ತಿ ಘೋಷಣಾ ಆದೇಶದಲ್ಲಿ ತಿಳಿಸಿದ್ದಾರೆ.