ದೇಸಿ ಬೀಜೋತ್ಸವಕ್ಕೆ ಅದ್ಧೂರಿ ಚಾಲನೆ

ಸಂಜೆವಾಣಿ ನ್ಯೂಸ್
ಮೈಸೂರು:ಜು.06:-
ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ, ಸಹಜ ಸಮೃದ್ಧ ಮತ್ತು ಸಹಜ ಸೀಡ್ಸ ಸಹಯೋಗದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ `ದೇಸಿ ಬೀಜೋತ್ಸವ’ಕ್ಕೆ ಶನಿವಾರ ಚಾಲನೆ ದೊರೆಯಿತು.


ಪಿರಿಯಾಪಟ್ಟಣದ ತಾಲ್ಲೂಕಿನ ಕಣಗಾಲಿನ ಬೀಜಮಾತೆ ಪದ್ಮಮ್ಮ ಬೀಜೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ತಲೆತಲಾಂತರದಿಂದ ಉಳಿಸಿಕೊಂಡು ಬಂದಿರುವ ದೇಸಿ ಬೀಜ ವೈವಿಧ್ಯವನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಹಿರಿದು. ಸರ್ಕಾರ ಅನುಷ್ಟಾನಗೊಳಿಸುತ್ತಿರುವ ಸಮುದಾಯ ಬೀಜ ಬ್ಯಾಂಕ್ ಯೋಜನೆಯ ನಾಯಕತ್ವವನ್ನು ಮಹಿಳಾ ಗುಂಪುಗಳಿಗೆ ನೀಡಬೇಕು. ಕಳೆದ ಹತ್ತು ವರ್ಷಗಳಿಂದ ನಾನು 100 ಕ್ಕೂ ಹೆಚ್ಚು ನಾಟಿ ಬೀಜಗಳನ್ನು ಉಳಿಸಿದ್ದೇನೆ. ಪ್ರತಿವರ್ಷ ಬೆಳೆಸಿ, ಜಾಸ್ತಿ ಮಾಡಿ ಆಸಕ್ತರಿಗೆ ಹಂಚುತ್ತಿದ್ದೇನೆ. ಬಂಗಾರ ಕಳಕೊಂಡರೆ ತರಬಹುದು; ನಾಟಿ ಬೀಜ ಕಳೆದೋದರೆ ತರೋಕೆ ಆಗುತ್ತಾ?. ಮಹಿಳೆಯರು ಬೀಜ ಸ್ವಾತಂತ್ರ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.


ಉಪ ಕೃಷಿ ನಿರ್ದೇಶಕ ಬಿ.ಎನ್. ಧನಂಜಯ ಮಾತನಾಡಿ, ರೈತ ಕಂಪನಿಗಳು ಸಕ್ರಿಯವಾಗಿ ವೈವಿಧ್ಯಮಯ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಿ ಲಾಭಗಳಿಸಬಹುದು. ಮೈಸೂರಿಗೆ ಬರುವ ಪ್ರವಾಸಿಗರನ್ನು ಸೆಳೆದು ಸ್ಥಳೀಯ ಕೃಷಿ ವೈವಿಧ್ಯದ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಇದರಿಂದ ಮುಂದಿನ ಪೀಳಿಗೆಗೆ ಜೀವ ವೈವಿಧ್ಯದ ಉಳಿಯುತ್ತದೆ ಮತ್ತು ಪರಿಸರ ಸಮತೋಲ ಕಾಪಾಡಬಹುದು ಎಂದು ಕಿವಿ ಮಾತು ಹೇಳಿದರು.


ಸುತ್ತೂರಿನ ಜೆ.ಎಸ್.ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜ್ಞಾನೇಶ್, ಹೊಳೆನರಸೀಪುರ ತಾಲ್ಲೂಕಿನ ಉಣ್ಣೇನಹಳ್ಳಿಯ ಅಪ್ಪಾಜಿ, ದೇಸಿ ಸೀಡ್ ಪ್ರಡ್ಯೂಸರ್ ಕಂಪನಿಯ ಕಾರ್ಯನಿರ್ವಹಣಾಧಿಕಾರಿ ರವಿ.ಕೆ.ಮಾಗಲ್, ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣ ಪ್ರಸಾದ್ ಮಾತನಾಡಿದರು. ಕೃಷಿ ತಜ್ಞ ಸಾಹಿಲ್ ವಾಸು ಉಪಸ್ಥಿತರಿದ್ದರು. ಕೇಶವಮೂರ್ತಿ ಸಿ.ಎನ್ ಕಾರ್ಯಕ್ರವನ್ನು ನಿರೂಪಿಸಿದರು. ಎರಡು ದಿನಗಳ ಬೀಜೋತ್ಸವದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಬಂದಿರುವ ಇಪ್ಪತ್ತಕ್ಕೂ ಹೆಚ್ಚಿನ ಬೀಜ ಸಂರಕ್ಷಕರು ವಿವಿಧ ಬಗೆಯ ಬೀಜ, ಹಣ್ಣು, ತರಕಾರಿ ಮತ್ತು ಕಾಳುಗಳನ್ನು ಪ್ರದರ್ಶನದಲ್ಲಿ ಕಂಡು ಬಂದಿತು.


ಹುರುಳಿ ಕಾಳಿನಿಂದ ಮಾಡಿದ ವೈವಿಧ್ಯಮಯ ತಿನಿಸುಗಳು,ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಮತ್ತು ನಿರ್ಲಕ್ಷಿತ ಹಣ್ಣುಗಳ ಪಾನೀಯ, ರಾಗಿ ಮಾಲ್ಟ ಮೇಳಕ್ಕೆ ಬಂದವರ ಮೆಚ್ಚುಗೆ ಗಳಿಸಿದವು. ಮೈಸೂರಿನ ‘ಕೃಷಿ ಕಲಾ’ ಸೋರೆ ಕಾಯಿಯಿಂದ ಮಾಡಿದ ಕಲಾತ್ಮಕ ಲ್ಯಾಂಪ್, ಹೂದಾನಿ, ಬೀಜದ ರಾಕಿ ಮೇಳಕ್ಕೆ ಬಂದವರನ್ನು ಆಕರ್ಷಿಸಿತು. ಹೆಗ್ಗಡದೇವನಕೋಟೆಯ ಹುಲಿಕಾಡು ರೈತ ಉತ್ಪಾದಕರ ಕಂಪನಿ ಹಲಸು, ತರಕಾರಿ, ಅಪರೂಪದ ಬೀಜ ಮತ್ತು ವಿವಿಧ ಜಾತಿಯ ಬಾಳೆ ಕಂದುಗಳನ್ನು ಮಾರಾಟ ಮಾಡಿತು. ಹೊಳೆನರಸೀಪುರದ ರೇಖಾ ಅಪ್ಪಾಜಿಯವರ ತೋಟದ್ಲಿ ನೈಸರ್ಗಿಕವಾಗಿ ಬೆಳೆದ ದಶೇರಿ, ಲಂಗಡಾ, ಮಲ್ಲಿಕಾ, ಅಮ್ರಪಾಲಿ ಮಾವಿನ ಹಣ್ಣಿನ ರುಚಿಗೆ ಗ್ರಾಹಕರು ಮನಸೂರೆಗೊಂಡರು.