ದೇಶ ಮತ್ತು ಸಂಸ್ಕೃತಿಗೆ ಹಾಕಿರುವ ಸವಾಲಿಗೆ ಮುಟ್ಟಿ ನೋಡುವಂತೆ ಉತ್ತರ ಕೊಡಲಿದ್ದೇವೆ: ಬಿ.ಎಲ್ ಸಂತೋಷ್

ಉಡುಪಿ- ಹಿಂದೂಗಳ ಶ್ರದ್ದೆಯ ವಿಚಾರ ಮತ್ತು ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಗೋವು, ಕುಟುಂಬ ವ್ಯವಸ್ಥೆ, ಮೌಲ್ಯಗಳು, ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳು ಅವರ ಟಾರ್ಗೆಟ್. ಈ ಸವಾಲನ್ನು ಎದುರಿಸಲು ನಮ್ಮ ಸಮಾಜ ಸಶಕ್ತವಾಗಿದೆ. ದೇಶ ಮತ್ತು ಸಂಸ್ಕೃತಿಗೆ ಹಾಕಿರುವ ಸವಾಲಿಗೆ ಮುಟ್ಟಿ ನೋಡುವಂತೆ ಉತ್ತರ ಕೊಡಲಿದ್ದೇವೆ ಎಂದು ಬಿಜೆಪಿ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಉಡುಪಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ. ಮೂರು ವರ್ಷದ ಹಿಂದೆ ಉಡುಪಿ ಶ್ರೀ ಕೃಷ್ಣಮಠದ ಮೇಲೂ ಇದೇ ರೀತಿಯ ಆಕ್ರಮಣ ನಡೆದಿತ್ತು. ಸ್ವಲ್ಪ ದಿನದಲ್ಲಿ ಮೂಡುಬಿದರೆಯ ಮೇಲೂ ಆಕ್ರಮಣ ನಡೆಯಬಹುದು. ಹುಲಿಗೆ ರಕ್ತದ ರುಚಿ ಸಿಕ್ಕಿದೆ. ವೈಚಾರಿಕ ರಾಜಕೀಯದ ಮೂಲಕ ಶಬರಿಮಲೆಯಲ್ಲಿ ಸ್ವಲ್ಪ ರಕ್ತದ ರುಚಿ ನೋಡಿದ್ದರು. ಈಶಾ ಫೌಂಡೇಶನ್ನ ಆಶ್ರಮ, ಶನಿ ಸಿಂಗಾಪುರದಲ್ಲೂ ರಕ್ತದ ರುಚಿ ನೋಡಿದ್ದರು. ಈಗ ಧರ್ಮಸ್ಥಳದಲ್ಲಿ ರಕ್ತದ ರುಚಿ ನೋಡುವ ಕೆಲಸ ಮಾಡುತ್ತಲೇ ಇದ್ದಾರೆ. ನಡೆದಿರುವ ಆಕ್ರಮಣಕ್ಕೆ ಶಿಕ್ಷೆ ಆಗಬೇಕು. ಮಾಡುತ್ತಿರುವ ಅಪಪ್ರಚಾರಕ್ಕೂ ಶಾಸ್ತಿ ಆಗಲೇಬೇಕು ಎಂದರು.
ಇದು ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ನಡೆದ ಆಕ್ರಮಣವಲ್ಲ. ನಮ್ಮ ಶ್ರದ್ದೆ, ನಂಬಿಕೆಯ ವಿಷಯದ ಮೇಲೆ ಮಾಡಿರುವ ಅಕ್ರಮಣ. ಉಡುಪಿ ಮೇಲೆ ಆಕ್ರಮಣ ಈಗ ಬಿಟ್ಟಿರಬಹುದು. ಆದರೆ ಪುನಃ ಆಕ್ರಮಣ ಮಾಡಲುಬಹುದು ಅಥವಾ ಮಾಡದೇ ಇರಬಹುದು. ಕುಂಭಮೇಳದ ಆಯೋಜನೆ ವಿಷಯವಾಗಿ ಮತ್ತು ಅಲ್ಲಿನ ತೀರ್ಥಸ್ನಾನದ ಕುರಿತು ನಿರಂತರ ಅಪಪ್ರಚಾರ ನಡೆಯಿತು. ಕುಂಭಮೇಳಕ್ಕೆ ಹೋದರೆ ಜಗತ್ತಿನಲ್ಲಿ ಇಲ್ಲದ ಕಾಯಿಲೆಗಳು ಬರಲಿದೆ ಎಂದು ಹೇಳಲು ಆರಂಭಿಸಿದ್ದರು. ಆದರೆ ದೇಶದ ಜನರ ನಂಬಿಕೆ ಬಹಳ ಗಟ್ಟಿಯಾಗಿತ್ತು. ಆರೋಪ ಬಂದ ಮೇಲೆ ಕೋಟ್ಯಂತರ ಭಕ್ತರು ಸಾಗರೋಪಾದಿಯಲ್ಲಿ ಕುಂಭಮೇಳಕ್ಕೆ ಹೋಗಿದ್ದಾರೆ. ಹೀಗಾಗಿ ಹಿಂದೂಗಳ ಶ್ರದ್ದೆಯ ವಿಚಾರ ಮತ್ತು ಕೇಂದ್ರದ ಮೇಲೆ ಅವರು ದಾಳಿ ಮಾಡುತ್ತಿದ್ದಾರೆ. ಗೋವು, ಕುಟುಂಬ ವ್ಯವಸ್ಥೆ, ಮೌಲ್ಯಗಳು, ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳನ್ನು ಅವರೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ದೇಶ ಮತ್ತು ಸಂಸ್ಕೃತಿಗೆ ಹಾಕಿರುವ ಈ ಸವಾಲಿಗೆ ಸಂಘಟಿತರಾಗಿ ಉತ್ತರ ಕೊಡಬೇಕು ಎಂದು ಹೇಳಿದರು.