
ಮೋದಿ ಪ್ರಧಾನಿಯಾದ ಹಿನ್ನಲೆಯಲ್ಲಿ ಕೊರಗಜ್ಜ ದೈವದ ನೇಮ – ಸಭಾ ಕಾರ್ಯಕ್ರಮ
ಸುಳ್ಯ:ನರೇಂದ್ರ ಮೋದಿಯವರು ಯಾವ ರೀತಿಯ ನಾಯಕತ್ವವನ್ನು ದೇಶಕ್ಕೆ ನೀಡಿದೆ ಎಂಬುದನ್ನು ಜಗತ್ತೇ ನೋಡುತಿದೆ. ದೇಶಕ್ಕೆ ದೊಡ್ಡ ಶಕ್ತಿ ಮತ್ತು ದಿಟ್ಟ ನಾಯಕತ್ವ ಕೊಟ್ಟವರು ನರೇಂದ್ರ ಮೋದಿಯವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದ ಹಿನ್ನಲೆಯಲ್ಲಿ ಸುಳ್ಯ ಜಯನಗರದ ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮ ಹಾಗೂ ಪರಿವಾರ ದೈವಗಳಿಗೆ ತಂಬಿಲ ಕಾರ್ಯಕ್ರಮದ ಅಂಗವಾಗಿ ಶನಿವಾರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕರ್ತರ ಪ್ರಾರ್ಥನೆ, ಪ್ರಯತ್ನ ಹಾಗೂ ದೈವ,ದೇವರುಗಳ ಆಶೀರ್ವಾದದಿಂದ ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನಕ್ಕೆ, ಭಯೋತ್ಪಾದನೆಗೆ ದಿಟ್ಟ ಪ್ರತ್ಯುತ್ತರ ನೀಡಿದೆ. ದೇಶದ ಈ ಸಾಧನೆಯ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ತಿರಂಗ ಯಾತ್ರೆ ಹಮ್ಮಿಕೊಂಡಿದೆ. ಸಮಾಜದ ಎಲ್ಲರೂ ಸೇರಿ ತಿರಂಗ ಯಾತ್ರೆಯ ಮೂಲಕ ದೇಶದ ಆಡಳಿತಕ್ಕೆ, ಸೈನಿಕರಿಗೆ ಗೌರವ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಮಾಜಿ ಸಚಿವ ಎಸ್.ಅಂಗಾರ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು, ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ನೇಮೋತ್ಸವ ಸ್ವಾಗತ ಸಮಿತಿ ಸಂಚಾಲಕರಾದ ಎ.ಟಿ. ಕುಸುಮಾಧರ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಂಡಲ ಎಸ್ಸಿ ಮೊರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ನೇಮೋತ್ಸವ ನಿರ್ವಹಣಾ ಸಮಿತಿ ಸಂಚಾಲಕರಾದ ಜಿ. ಜಗನ್ನಾಥ ಜಯನಗರ,ಶ್ರೀ ಕ್ಷೇತ್ರ ಕೋರಂಬಡ್ಕದ ವ್ಯವಸ್ಥಾಪನ ಆಡಳಿತ ಕಾರ್ಯ ಸೇವಾ ಸಮಿತಿಯ ಅಧ್ಯಕ್ಷರಾದ ಕೇಶವ ಸಿ ಎ. ಮತ್ತಿತರರು ಉಪಸ್ಥಿತರಿದ್ದರು. ನೇಮೋತ್ಸವ ಸ್ವಾಗತ ಸಮಿತಿ ಸಂಚಾಲಕರಾದ ಎ.ಟಿ. ಕುಸುಮಾಧರ ಸ್ವಾಗತಿಸಿ, ವಂದಿಸಿದರು.