ಪುತ್ತೂರು: ಎ ಗ್ರೇಡ್ ದೇವಸ್ಥಾನಗಳಲ್ಲಿ ಸೇವೆಗಳ ಶುಲ್ಕ ಪರಿಷ್ಕರಣೆಯನ್ನು ಅಲ್ಲಿನ ಆಡಳಿತ ಸಮಿತಿಯವರು ಮಾಡಿದ್ದಾರೆ. ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ. ದೇವಸ್ಥಾನದ ಹಣ ಮುಸ್ಲಿಂ ಕಲ್ಯಾಣ ನಿಧಿಗೆ ಹೋಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವವರಲ್ಲಿ ದೇವಸ್ಥಾನದ ಹಣ ಸರ್ಕಾರಕ್ಕೆ ಹೋಗುವ ಬಗ್ಗೆ ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ. ಅವರು ದಾಖಲೆ ಸಹಿತ ಸಾಬೀತು ಮಾಡಲಿ. ಚರ್ಚೆಗೆ ನಾವು ಸಿದ್ದ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ್ ರೈ ಮೇಗಿನಗುತ್ತು ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎ ಗ್ರೇಡ್ ದೇವಸ್ಥಾನಗಲ್ಲಿ ಸೇವೆಗಳ ದರ ಏರಿಕೆಯಾಗಿದೆ. ಕಟೀಲು ಮತ್ತು ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಏರಿಕೆ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಕಟೀಲು ದೇವಸ್ಥಾನ ಮುಜರಾಯಿ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನವಲ್ಲ. ಅಲ್ಲಿನ ಆಡಳಿತ ಸಮಿತಿ ತೆಗೆದುಕೊಂಡ ನಿರ್ಣಯವಾಗಿದೆ. ಅದು ೧೫ ವರ್ಷಗಳ ಹಿಂದಿನ ದರವನ್ನು ಈಗ ಪರಿಷ್ಕರಣೆ ಮಾಡಲಾಗಿದೆ. ಅದೇ ರೀತಿ ಸುಬ್ರಹ್ಮಣ್ಯದಲ್ಲಿಯೂ ೧೫ ವರ್ಷದ ಬಳಿಕ ದರ ಏರಿಕೆ ಮಾಡಿದ್ದು ಅದು ಆಡಳಿತ ಸಮಿತಿಯ ನಿರ್ಧಾರವಾಗಿದೆ. ಹುಂಡಿಗೆ ಕಾಣಿಕೆ ಹಾಕಬೇಡಿ. ಅರ್ಚಕರ ತಟ್ಟೆಗೆ ಹಾಕಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ದೇವಸ್ಥಾನಗಳಲ್ಲಿ ಸೇವೆ ಮಾಡಿಸುವಂತೆ ಯಾರಿಗೂ ಒತ್ತಡ ಹೇರುತ್ತಿಲ್ಲ. ಭಕ್ತಾದಿಗಳು ಅವರಾಗಿಯೇ ಸೇವೆ ಮಾಡಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅಪಪ್ರಚಾರ ನಡೆಸುವುದು ಹಿಂದು ಧರ್ಮಕ್ಕೆ ಅವಹೇಳನ ಮಾಡಿದಂತೆ ಎಂದು ಅವರು ಹೇಳಿದರು.
ದೇವಳದ ಖರ್ಚು ಕಳೆದು ಉಳಿಕೆ ಹಣದ ಶೇ.೧೦ ರಷ್ಟು ಧಾರ್ಮಿಕ ಪರಿಷತ್ ಆಯುಕ್ತರ ಹೆಸರಲ್ಲಿರುವ ಸಂಗ್ರಹಣಾ ನಿಧಿಗೆ ಹೋಗುತ್ತದೆ. ಇದನ್ನು ಅನಾಥಾಶ್ರಮ, ಗೋಶಾಲೆ ಅರ್ಚಕರ ಸಮಸ್ಯೆಗಳಿಗೆ ವಿನಿಯೋಗ ಮಾಡುತ್ತಾರೆ. ಹಿಂದೆ ದೇವಳಗಳಿಗೆ ೬ ಸಾವಿರ ತಸ್ತೀಕ್ ಬರುತ್ತಿತ್ತು. ಯಡಿಯೂರಪ್ಪ ಇದನ್ನು ೧೨ ಸಾವಿರಕ್ಕೇರಿಸಿದ್ದರು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೂರು ಬಾರಿ ಏರಿಕೆ ಮಾಡಿ ಪ್ರಸ್ತುತ ೬೦ ಸಾವಿರ ತಸ್ತೀಕು ಬರುತ್ತಿದೆ. ಹಾಗಿದ್ದರೂ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದರು.
ಯಡಿಯೂರಪ್ಪ ಕಟ್ಟಿದ್ದು ಹಜ್ ಭವನ..
ರಾಜ್ಯ ಧಾರ್ಮಿಕ ಪರಿಷತ್ ಗೆ ಸ್ವಂತ ಕಟ್ಟಡ ಇಲ್ಲದಿದ್ದರೂ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹಜ್ ಭವನ ನಿರ್ಮಿಸಿದರು. ಆದರೆ ಸಿದ್ದರಾಮಯ್ಯ ೧೦ ಕೋಟಿ ವೆಚ್ಚದಲ್ಲಿ ಧಾರ್ಮಿಕ ಪರಿಷತ್ ಕಟ್ಟಡ ನಿರ್ಮಿಸಲು ಅನುದಾನ ನೀಡಿದ್ದಾರೆ ಎಂದರು. ಈ ಅಪಪ್ರಚಾರದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿಯವರೇ ಅಪಪ್ರಚಾರ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಈ ಬಗ್ಗೆ ನಳಿನ್ ಕುಮಾರ್ ಕಟೀಲ್, ಕಿಶೋರ್ ಬೊಟ್ಯಾಡಿ ಪತ್ರಿಕಾಗೋಷ್ಟಿ ಕರೆದು ಹೇಳಿಕೆ ಕೊಡಲಿ ಎಂದರು.
ಗೋಷ್ಟಿಯಲ್ಲಿ ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧಕ್ಷ ಬಾಲಕೃಷ್ಣ ಕಣ್ಣಾರಾಯ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ಬೆಳ್ಳಿಪ್ಪಾಡಿ, ಕೊಡಿಪ್ಪಾಡಿ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಬ್ರಹ್ಮಣ್ಯ ಗೌಡ ಹನಿಯೂರು, ಕೆಯ್ಯರು ದುರ್ಗಾಪರಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಇದ್ದರು.




























