ನವದೆಹಲಿ, ನ.3:- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ `ತುಂಬಾ ಕಳಪೆ’ ವರ್ಗದಲ್ಲಿಯೇ ಮುಂದುವರಿದಿದ್ದು ಜನರು ಉಸಿರಾಟದ ಸಮಸ್ಯೆ ಎದುರಿಸುವಂತಾಗಿದೆ.
ಬೆಳಿಗ್ಗೆ 10 ಗಂಟೆಗೆ ಗರಿಷ್ಠ 388 ರಷ್ಟು ವಾಯು ಮಾಲಿನ್ಯ ಸೂಚ್ಯಂಕ ತಲುಪಿದ್ದು ಸಂಜೆಯ ವೇಳೆಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ, ಹೀಗಾಗಿ ದೇಹಲಿಯಲ್ಲಿ ಜನರು ಮನೆಯಿಂದ ಹೊರಬರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಜೆ 4 ಗಂಟೆಗೆ, ಗಾಳಿಯ ವೇಗ ಹೆಚ್ಚಾದಂತೆ ಸರಾಸರಿ ವಾಯು ಗುಣಮಟ್ಟದ ಸೂಚ್ಯಂಕ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೈನಂದಿನ ರಾಷ್ಟ್ರೀಯ ಬುಲೆಟಿನ್‍ನಲ್ಲಿಮಾಹಿತಿ ನೀಡಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿದ್ದೂ ಸೇರಿದಂತೆ ಪಂಜಾಬ್, ಹರಿಯಾಣ ಸೇರಿದಂತೆ ದೆಹಲಿಗೆ ಹೊಂದಿಕೊಂಡದಂತಿರುವ ರಾಜ್ಯಗಳಲ್ಲಿ ಕೊಯ್ಲು ನಂತರ ಬೆಳೆಗಳ ಕಳೆಗೆ ಬೆಂಕಿ ಹಚ್ಚುವ ಹಿನ್ನೆಲೆಯಲ್ಲಿ ಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ' ವರ್ಗದಲ್ಲಿ ಮುಂದುವರಿದಿದ್ದು ಮತ್ತೊಮ್ಮೆತೀವ್ರ’ತರ ರೀತಿಯಲ್ಲಿ ಮುಂದುವರಿಯುವ ಎಲ್ಲಾ ಸಾಧ್ಯತೆ ಇದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ 0 ಯಿಂದ 50 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕವನ್ನು “ಉತ್ತಮ”, 51 ಮತ್ತು 100 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕವನ್ನು “ತೃಪ್ತಿದಾಯಕ”, 101 ಮತ್ತು 200 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕ “ಮಧ್ಯಮ”, 201 ಮತ್ತು 300 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕವನ್ನು “ಕಳಪೆ”, 301 ಮತ್ತು 400 ರ ನಡುವಿನ ವಾಯು ಗುಣಮಟ್ಟ ಸೂಚಕವನ್ನು “ತುಂಬಾ ಕಳಪೆ” ಮತ್ತು 400 ಕ್ಕಿಂತ ಹೆಚ್ಚು “ತೀವ್ರ” ಎಂದು ವರ್ಗೀಕರಿಸಿದೆ.
ಈ ವರ್ಷ ಇಲ್ಲಿಯವರೆಗೆ ರಾಜಧಾನಿ ಅಧಿಕೃತವಾಗಿ `ತೀವ್ರ’ ವಾಯು ದಿನ ದಾಖಲಿಸಿಲ್ಲ. ಕೊನೆಯ ಬಾರಿಗೆ 2024ರ ಡಿಸೆಂಬರ್ 23 ರಂದು ವಾಯು ಗುಣಮಟ್ಟ ಸೂಚಕ 406 ಕ್ಕೆ ದಾಖಲಿಸಲಾಗಿತ್ತು ಎಂದು ಹೇಳಲಾಗಿದೆ.
ದೀರ್ಘಕಾಲೀನ ವಾಯು ಗುಣಮಟ್ಟ ಸೂಚಕ ಪ್ರವೃತ್ತಿಗಳು ರಾಜಧಾನಿ ಈಗ ವರ್ಷದ ಅತ್ಯಂತ ಕಲುಷಿತವಾಗಿದ್ದು ಜನರು ಸಮಸ್ಯೆ ಎದುರಿಸುವಂತಾಗಿದೆ.























