ದಾರಿದ್ರ್ಯ ನಿವಾರಣೆಯ ಪಣ ತೊಟ್ಟು ಹೋರಾಡಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದ


ಸಂಜೆವಾಣಿ ವಾರ್ತೆ

ಬಳ್ಳಾರಿ,ಜ,13- ದೇಶವನ್ನು ಪೀಡಿಸುತ್ತಿರುವ ಬಡತನ ಮತ್ತು ಮೌಢ್ಯತೆಯ ನಿವಾರಣೆ ವೈಜ್ಞಾನಿಕ ಚಿಂತನೆ ಮತ್ತು ಹೃದಯವಂತಿಕೆ ಅಳವಡಿಸಿಕೊಂಡವರಿಂದ ಸಾಧ್ಯವಿದೆ ಎಂಬುದನ್ನು ಸ್ವಾಮಿ ವಿವೇಕಾನಂದರು ನುಡಿದಿದ್ದರು ಎಂದು ಡಾ.ಬಿ.ಆರ್. ಗದಗಿನ ಅಭಿಮತಪಟ್ಟರು.


ಸ್ಥಳೀಯ ಗುರುದೇವ ನರ್ಸಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ ಸ್ವಾಮಿ ವಿವೇಕಾನಂದರ 164 ನೇ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ವಿವೇಕಾನಂದರು ಹೇಳಿದಂತೆ ಯುವಕರು ನಿಶ್ಚಿತ ಗುರಿ ದೃಢ ಸಂಕಲ್ಪ ಹಾಗೂ ಕಠಿಣ ಪ್ರರಿಶ್ರಮದೊಂದಿಗೆ ಕಾಯಕ ಮಾಡಿದರೆ ಬಡತನ ಮತ್ತು ನಿರುದ್ಯೋಗ ನಿವಾರಣೆಯಾಗಿ ಬಲಿಷ್ಟ ಸಂಪತಭರಿತ ಭಾರತ ನಿರ್ಮಾಣವಾಗುತ್ತದೆ ಎಂದರು. ಜೀವನದ ಹೋರಾಟದಲ್ಲಿ ಸೋತಾಗ ಹತಾಶರಾಗದೇ ಮರಳಿ ಯತ್ನ ಮಾಡಿದರೆ ಯಶಸ್ಸು ಲಭಿಸುವುದು ಖಚಿತ. ಅಸಾಧ್ಯ ಎನ್ನುವುದನ್ನು ಸಾಧ್ಯವಾಗಿಸುವ ಶಕ್ತಿ ಧೈರ್ಯ ಯುವಕರು ಬೆಳಸಿಕೊಳ್ಳಬೇಕು.

ವಿವೇಕಾನಂದರು ಹೇಳಿದಂತೆ ಯುವಕರು ಅದೃಷ್ಟವನ್ನು ನಂಬಿ ಅವಕಾಶಗಳಿಂದ ವಂಚಿತರಾಗದೆ ಪರಿಶ್ರಮ ಮತ್ತು ತಮ್ಮಲ್ಲಿಯ ಅಂತ:ಶಕ್ತಿಯನ್ನು ನೆಚ್ಚಿ ಧ್ಯತಿ ಗೆಡದೆ ಪ್ರಯತ್ನ ಶೀಲರಾಗಬೇಕು. ಇಂದಿನ ಪೀಳಿಗೆ ಮಾನಸಿಕ ಬಡತನದಿಂದ ಹೊರಬಂದು ಸಕಾರಾತ್ಮಕ ಆಲೋಚನೆಗಳನ್ನು ರೂಢಿಸಿಕೊಂಡು ವಿವೇಕಾನಂದರು ಕನಸು ಕಂಡ ಸಮಾನತೆಯ ಶಕ್ತಿಶಾಲಿ ಪ್ರಭುದ್ಧ ಭಾರತದ ರಚನೆಗೆ ಕೈಜೋಡಿಸಲು ಕರೆಕೊಟ್ಟರು.


ಅಧ್ಯಾಪಕಿ ಮೀನು ಮನೋಜ್ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಅನ್ನಪೂರ್ಣ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಶರಣಪ್ಪ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಭುಶರಾ ಸಾನಾ ವಂದನಾರ್ಪಣೆ ಮಾಡಿದರು