ಸಂಜೆವಾಣಿ ನ್ಯೂಸ್
ಮೈಸೂರು : ಸೆ.23:- ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ರಾಜ್ಯಮಟ್ಟದ ದಸರಾ ಮುಖ್ಯಮಂತ್ರಿ ಕಪ್ ಕ್ರೀಡಾಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ದೀಪ ಬೆಳಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂದು ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದೆ. ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಮನೋಭಾವ ಮೆರೆಯುವುದು ಅವಶ್ಯ. ವಿನೀಶ್ ಪೋಗಟ್ ಅವರು ಕುಸ್ತಿ ಪಟುವಾಗಿ ಹೆಸರುವಾಸಿಯಾಗಿದ್ದಾರೆ. ಕುಸ್ತಿ ಒಂದು ಕಾಲದಲ್ಲಿ ಪುರುಷರ ಕ್ರಿಡೆಯಾಗಿತದ್ತಯ. ಆದರೆ, ಇಂದು ಮಹಿಳೆಯರು ಹೆಚ್ಚು ಭಾಗವಹಿಸುತ್ತಿರುವುದು ಸಂತಸದ ವಿಚಾರ. ಪೋಗಟ್ ಅವರು ಅಂತಾರಾಷ್ಟ್ರೀಯ ಕುಸ್ತಿಪಟುವಾಗಿದ್ದು, ದೇಶಕ್ಕೆ ಕೀರ್ತಿ ತಂದಿದ್ದಾರೆ. ಈಗ ರಾಜಕಾರಣಿಯೂ ಆಗಿದ್ದಾರೆ ಎಂದರು.
ನಮ್ಮ ಸರ್ಕಾರ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸಹಾಯ ಮಾಡುವ ಕೆಲಸ ಮಾಡುತ್ತಿದೆ. ಒಲಂಪಿಕ್ಸ್‍ನಲ್ಲಿ ಭಾಗವಹಿಸುವ ರಾಜ್ಯದ 60 ಕ್ರೀಡಾಪಟುಗಳಿಗೆ 10 ಲಕ್ಷ ಅನುದಾನ ನೀಡಿ ತರಬೇತಿ ನೀಡಲಾಗುತ್ತಿದೆ. ಅವರು ಪದಕ ಗೆದ್ದರೆ ಬಹುಮಾನವನ್ನೂ ನೀಡಲಾಗುತ್ತದೆ. ಉದ್ಯೋಗದಲ್ಲಿ ಎಲ್ಲಾ ಇಲಾಖೆಯಲ್ಲಿ ಶೇ.3 ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಕ್ರೀಡೆ ಹಾಗೂ ಶಿಕ್ಷಣದಲ್ಲಿ ಹೆಚ್ಚು ತರಬೇತಿ ಪಡೆದುಕೊಳ್ಳಬೇಕು. ಆಗ ವ್ಯಕ್ತಿತ್ವದೊಂದಿಗೆ ದೈಹಿಕ, ಮಾನಸಿಕ ವಿಕಾಸವಾಗುತ್ತದೆ. ಪ್ರತಿಯೊಬ್ಬರೂ ಆರೋಗ್ಯದಿಂದಿರಲು ಕ್ರೀಡೆಯಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು.
ಚಾಮುಂಡಿ ವಿಹಾರ ಕ್ರೀಡಾಂಗಣ, ಡಿ.ದೇವರಾಜ ಅರಸು ಕುಸ್ತಿ ಅಖಾಡ, ಮೈಸೂರು ವಿವಿ ವಿವಿಧ ಕ್ರೀಡಾಂಗಣ ಸೇರಿದಂತೆ 13 ಸ್ಥಳಗಳಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್‍ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಕಬಡ್ಡಿ, ಖೋ-ಖೋ, ಈಜು, ವಾಲಿಬಾಲ್, ಥ್ರೋಬಾಲ್, ಹ್ಯಾಂಡ್‍ಬಾಲ್, ಭಾರ ಎತ್ತುವುದು, ಚೆಸ್, ದೇಹದಾರ್ಢ್ಯ, ಬಾಕ್ಸಿಂಗ್, ಬಾಲ್ ಬ್ಯಾಡ್ಮಿಂಟನ್, ಕುಸ್ತಿ, ಟೆನಿಸ್, ಯೋಗಾ, ನೆಟ್‍ಬಾಲ್, ಆರ್ಚರಿ, ವುಶು, ಟೇಬಲ್ ಟೆನಿಸ್ ಸೇರಿದಂತೆ 26 ಕ್ರೀಡೆಗಳು ನಡೆಯಲಿವೆ. ಈ ಬಾರಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಮೈಸೂರು, ಬೆಳಗಾವಿ ಎಂಬ 5 ವಿಭಾಗಗಳನ್ನು ರಚಿಸಲಾಗಿದೆ. ವಿಭಾಗ ಮಟ್ಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ.
ಕ್ರೀಡಾಕೂಟದಲ್ಲಿ ಒಂದು ವಿಭಾಗದಿಂದ 646 ಕ್ರೀಡಾಪಟುಗಳಂತೆ ಐದು ವಿಭಾಗಗಳಿಂದ 3230 ಕ್ರೀಡಾಪಟುಗಳು, 800 ತಾಂತ್ರಿಕ ಸಿಬ್ಬಂದಿ ಭಾಗವಹಿಸಿದ್ದಾರೆ. ಎಲ್ಲ ಕ್ರೀಡಾಪಟುಗಳಿಗೂ 54 ವಸತಿ ಗೃಹಗಳಕಲ್ಲಿ ವಸತಿ, ನಂಜರಾಜ ಬಹುದ್ದೂರ್ ಛತ್ರದಲ್ಲಿ ಊಟೋಪಹಾರ, ಸಾರಿಗೆ, ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ.
ನಗದು ಬಹುಮಾನ: ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗುವ ಕ್ರಿಡಾಪಟುಗಳಿಗೆ 2000ಕ್ಕೂ ಹೆಚ್ಚು ಪದಕ, ಪಾರಿತೋಷಕ, ಪ್ರಮಾಣ ಪತ್ರ ನೀಡಲಾಗುವುದು ಜತೆಗೆ ವೈಯಕ್ತಿಕ ವಿಭಾಗದ ವಿಜೇತರಿಗೆ ಪ್ರಥಮ ಬಹುಮಾನ 8 ಸಾವಿರ, ದ್ವಿತೀಯ 5 ಸಾವಿರ, ತೃತೀಯ ಬಹುಮಾನವಾಗಿ 2500 ನೀಡಲಾಗುವುದು. ಗುಂಪು ವಿಭಾಗದಲ್ಲಿ 7 ಜನರನ್ನೊಳಗೊಂಡ ತಂಡಕ್ಕೆ 4 ಸಾವಿರ (ಪ್ರ), 3 ಸಾವಿರ (ದ್ವಿ), ಹಾಗೂ 2 ಸಾವಿರ (ತೃ), ಬಹುಮಾನ ನಿಗದಿ ಮಾಡಲಾಗಿದೆ. 8ಕ್ಕಿಂತ ಹೆಚ್ಚು ಆಟಗಾರನ್ನೊಳಗೊಂಡ ತಂಡಕ್ಕೆ 3 ಸಾವಿರ (ಪ್ರ), 2 ಸಾವಿರ (ದ್ವಿ), ಹಾಗೂ 1 ಸಾವಿರ (ತೃ) ನೀಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಕುಸ್ತಿಪಟು ವಿನೀಶ್ ಪೋಗಟ್, ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕರಾದ ತನ್ವೀರ್‍ಸೇಠ್, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಡಾ.ಪುಷ್ಪಾ ಅಮರನಾಥ್, ಎಂಎಲ್‍ಸಿ ಡಾ.ಡಿ.ತಿಮ್ಮಯ್ಯ, ಗೋವಿಂದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಸೇರಿದಂತೆ ಹಲವರು ಭಾಗವಹಿಸಿದ್ದರು.


























