ಕೆಂಗೇರಿ, ಸೆ. ೨೭: ದಸರಾ ವೈಭವ ೨೦೨೫ ಕಾರ್ಯಕ್ರಮದಲ್ಲಿ ಸಾವಿರಾರು ಸುಮಂಗಲಿಯರು, ಹೆಣ್ಣುಮಕ್ಕಳು, ತಾಯಂದಿರು ಪಾಲ್ಗೊಂಡು ದಸರಾ ವೈಭವ ಉತ್ಸವಕ್ಕೆ ಮೆರಗು ನೀಡಿದರು.
ವೈದ್ಯಕೀಯ, ಶಿಕ್ಷಣ, ಸಾಮಾಜಿಕ, ಅಂಗನವಾಡಿ, ಎಂಜಿನಿಯರ್, ವಿಜ್ಞಾನಿ ಪೊಲೀಸ್ ಕಾರ್ಯಾಂಗ, ನ್ಯಾಯಾಂಗ, ಸಂಗೀತ, ಸಾಹಿತ್ಯ, ಸಾರಿಗೆ, ಬಿಬಿಎಂಪಿ ಪತ್ರಿಕಾರಂಗ, ಪರಿಸರ, ನೈರ್ಮಲ್ಯ, ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸುತ್ತಿರುವ ೧೦೦ಕ್ಕೂ ಹೆಚ್ಚು ಸಾಧಕಿಯರನ್ನು ಗುರುತಿಸಿ ಸತ್ಕಾರ, ಅಭಿನಂದನೆ, ಸನ್ಮಾನ ಕಾರ್ಯಕ್ರಮ, ಮತ್ತು ೫೦೦೦ ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಬಾಗೀನವನ್ನು ನೀಡುವ ಮೂಲಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಸಡಗರ ಸಂಭ್ರಮದಿಂದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿಯಲ್ಲಿ ನಡೆಯಿತು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಗಾಂಗ್ರೆಸ್ ನಾಯಕಿ ಎಚ್.ಕುಸುಮಾ ಅವರು ಪ್ರತಿವರ್ಷದಂತೆ ಈ ವರ್ಷವೂ ಕ್ಷೇತ್ರದ ಹೆಣ್ಣುಮಕ್ಕಳಿಗಾಗಿ ಹಮ್ಮಿಕೊಂಡಿದ ಕಾರ್ಯಕ್ರಮ ಜಾತ್ರೆ, ದಸರಾ ಉತ್ಸವದ ವೈಭವ ಕಂಡು ಬಂದಿತು. ಎತ್ತ ನೋಡಿದರೂ ಸುಮಂಗಿಲಿಯರು ವಿಶೇಷ ಅಲಂಕಾರ ಮಾಡಿಕೊಂಡು ಬಂದು ಶಿಸ್ತು, ಸಂಯಮ, ಸಡಗರದಿಂದ ಭಾಗವಹಿಸಿ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶನ ನೀಡುವ ಮೂಲಕ ದಸರಾ ವೈಭವ ಉತ್ಸವಕ್ಕೆ ಮೆರಗನು ತಂದರು.
ಕೆಪಿಸಿಸಿ ವಕ್ತಾರರಾದ ಎಚ್.ಕುಸುಮಾ ಅವರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕಿಯರನ್ನು ಸನ್ಮಾನಿಸಿ ಮಾತನಾಡಿ ನೂರಾರು ತಾಯಂದಿರನ್ನು ಒಂದೇಡೆ ಸೇರಿಸಿ ಅವರನ್ನು ಸತ್ಕರಿಸುವ ಮೂಲಕ ನಾಡ ದೇವತೆ ಹೆಸರಿನಲ್ಲಿ ದಸರಾ ವೈಭವ ಆಚರಿಸಲಾಗುತ್ತಿದೆ ಎಂದರು.ಮಾಜಿ ಸಂಸದ ಡಿ.ಕೆ. ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪಾಲಿಕೆ ಚುನಾವಣೆಯಲ್ಲಿ ಸ್ಪರ್ದಿಸಲು ಹೆಣ್ಣು ಮಕ್ಕಳಿಗೆ ಶೇ ೫೦ ರಷ್ಟು ನೀಡಲು ನಮ್ಮ ಸರ್ಕಾರ ಬದ್ದವಾಗಿದ್ದು, ಹೆಣ್ಣು ಮಕ್ಕಳು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ತಮ ಸೇವೆ ಮಾಡಲು ಮುಂದಾಗುವಂತೆ ಕರೆ ನೀಡಿದರು.
ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ ತಾಯಿ ಚಾಮುಂಡೇಶ್ವರಿ, ದುರ್ಗಾಮಾತೆ, ಸರಸ್ವತಿ, ಲಕ್ಷ್ಮಿ, ಎಲ್ಲರಿಗೂ ಒಳ್ಳೆಯದನು ಮಾಡಲಿ ಎಂದು ಪ್ರಾರ್ಥಿಸಿದರು. ಎಚ್.ಮೋನಿಕಾ, ಬೈರಮ್ಮ ಬಿಬಿಎಂಪಿ ಮಾಜಿ ಸದಸ್ಯೆ ರೂಪಲಿಂಗೇಶ್ವರ ಅವರು ಸಾವಿರಾರು ಹೆಣ್ಣು ಮಕ್ಕಳಿಗೆ ಮಡಿಲುತುಂಬಿ, ಬಾಗೀನ ನೀಡಿ ಹಬ್ಬದ ಮಾದರಿಯಲ್ಲಿ ಉತ್ಸವ ನಡೆಸಿಕೊಟ್ಟರು.

























