
ಸಂಜೆವಾಣಿ ನ್ಯೂಸ್
ಮೈಸೂರು: ಜು.03:- ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಇನ್ನು ಎರಡು ತಿಂಗಳಿದ್ದು, ಅರಣ್ಯ ಇಲಾಖೆ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ.
ಆ.4ರಂದು ವೀರನಹೊಸಹಳ್ಳಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ತಂಡದ ಗಜಪಯಣ ನಡೆಯಲಿದ್ದು, ಸಿಎಫ್ ಡಾ.ಮಾಲತಿಪ್ರಿಯ.ಎಂ, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮತ್ತು ತಂಡ ಮೈಸೂರು, ಕೊಡಗು, ಚಾಮರಾಜನಗರದ 8 ಆನೆ ಶಿಬಿರಗಳಿಗೆ ಭೇಟಿ ನೀಡಿ, ಆನೆಗಳ ಆರೋಗ್ಯ ಪರೀಕ್ಷೆ ಮಾಡಿ, ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಬಾರಿಯೂ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದು, ಉಳಿದ ಆನೆಗಳ ಶಾರ್ಟ್‍ಲಿಸ್ಟ್ ಮಾಡಿಕೊಳ್ಳಲಿದ್ದಾರೆ.
ಆರೋಗ್ಯ ಪರಿಶೀಲನೆ: ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಆರೋಗ್ಯ ಪರೀಕ್ಷೆ ನಡೆಸಿದ್ದು, ಆನೆಗಳ ವರ್ತನೆ, ಸ್ವಭಾವ ದೇಹತೂಕ, ಎತ್ತರ ಎಲ್ಲವನ್ನೂ ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ. ಹೆಣ್ಣು ಆನೆಗಳ ಗರ್ಭಾಧಾರಣೆಯ ಪರೀಕ್ಷೆಗಾಗಿ ಸ್ಯಾಂಪಲ್ಸ್‍ಗಳನ್ನು ಸಂಗ್ರಹಿಸಿ ಲ್ಯಾಬ್‍ಗೆ ಕಳುಹಿಸಲಾಗಿದೆ. ಲ್ಯಾಬ್‍ನಿಂದ ಪರೀಕ್ಷಾ ವರದಿ ಬಂದ ನಂತರ ಆನೆಗಳ ತಾತ್ಕಾಲಿಕ ಪಟ್ಟಿ ತಯಾರಿಸಿ ಸಂಬಂಧಪಟ್ಟ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ಪಟ್ಟಿಯನ್ನು ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ.
ಸರ್ಕಾರದಿಂದ ಅನುಮೋದನೆಗೊಂಡ ಆನೆಗಳ ಆಯ್ಕೆ ಪಟ್ಟಿಯನ್ನು ನಂತರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಅರಣ್ಯ ಇಲಾಖೆಯಿಂದ ಜಂಬೂಸವಾರಿಯಲ್ಲಿ ಭಾಗವಹಿಸುವ ಇಲಾಖೆ ಆನೆಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಪ್ರಸ್ತುತ ಆನೆಗಳ ಆರೋಗ್ಯ ತಪಾಸಣೆ ಕಾರ್ಯ ಪ್ರಗತಿಯಲ್ಲಿದ್ದು, ಜು.20ರ ನಂತರ ಆನೆಗಳ ಆಯ್ಕೆಪಟ್ಟಿಯ ಪ್ರಕಟಣೆಯನ್ನು ಪ್ರಕಟಿಸಲಾಗುತ್ತದೆ.
ಯಾವ್ಯಾವ ಆನೆಗಳ ಆರೋಗ್ಯ ಪರಿಶೀಲನೆ: ಮತ್ತಿಗೋಡು ಆನೆ ಶಿಬಿರದ ಭೀಮ, ಶ್ರೀಕಂಠ, ಪಾರ್ಥ, ದುಬಾರೆಯ ಧನಂಜಯ, ಪ್ರಶಾಂತ, ಕಂಜನ್, ಸುಗ್ರೀವ, ಶ್ರೀರಾಮ, ಹರ್ಷ, ಅಯ್ಯಪ್ಪ, ಹೇಮಾವತಿ, ದೊಡ್ಡಹರವೆಯ ಏಕಲವ್ಯ, ಲಕ್ಷ್ಮೀ, ಭೀಮನಕಟ್ಟೆಯ ಗಣೇಶ, ಶ್ರೀರಂಗ, ರೂಪ, ಬಳ್ಳೆ ಶಿಬಿರದ ಮಹೇಂದ್ರ, ಬಂಡೀಪುರ ಹಳೆ ಶಿಬಿರದ ಹಿರಣ್ಯ, ರೋಹಿತ್, ಪಾರ್ಥಸಾರಥಿ, ಐರಾವತ, ಹಾರಂಗಿ ಶಿಬಿರದ ಲಕ್ಷ್ಮಣ, ಈಶ್ವರ ಆನೆಗಳ ಆರೋಗ್ಯ ಪರಿಶೀಲನೆ ಮಾಡಿದ್ದು, ಇವುಗಳಲ್ಲಿ ಜಂಬೂಸವಾರಿಯಲ್ಲಿ ಭಾಗವಹಿಸಲು ಸೂಕ್ತವೆನಿಸುವ 14-15 ಆನೆಗಳ ಪಟ್ಟಿ ಸಿದ್ಧವಾಗಲಿದೆ.