ದರೋಡೆ: ಅಂತರಾಜ್ಯ ಡಕಾಯಿತರ ಬಂಧನ

ಸಂಜೆವಾಣಿ ನ್ಯೂಸ್
ಮೈಸೂರು: ಆ.16:-
ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದ ಬೆಳ್ಳಿ ಆಭರಣ ತಯಾರಿಸುವ ಫ್ಯಾಕ್ಟರಿಯಲ್ಲಿನ ದರೋಡೆ ಪ್ರಕರಣವನ್ನು ಭೇದಿಸಿರುವ ಮೈಸೂರು ನಗರ ಪೆÇಲೀಸರು, ಅಂತರರಾಜ್ಯ ನಟೋರಿಯಸ್ ಡಕಾಯಿತರನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ 18,80,000 ರೂ. ಮೌಲ್ಯದ 16 ಕೆ.ಜಿ.ಬೆಳ್ಳಿ ಪದಾರ್ಥ, ಕೃತ್ಯಕ್ಕೆ ಬಳಸಿದ್ದ 2 ಕಾರು, 1 ಪಿಸ್ತೂಲು, 9 ಜೀವಂತ ಗುಂಡುಗಳನ್ನು ವಶಪಡೆಸಿಕೊಂಡಿದ್ದಾರೆ ಎಂದು ನಗರ ಪೆÇಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುಜರಾತಿ ನಟೋರಿಯಸ್ ಬಂಧನ: ಜು.28 ರಂದು ನಡೆದ ಪ್ರಕರಣವನ್ನು ಆರಂಭದಲ್ಲಿ ಕಳ್ಳತನ ಎಂದು ತಿಳಿಯಲಾಗಿತ್ತು. ಪ್ರಕರಣದಲ್ಲಿ 7 ಜನ ಭಾಗಿಯಾಗಿರುವುದು ತಿಳಿದ ದರೋಡೆ ಪ್ರಕರಣ ದಾಖಲಿಸಲಾಗಿದೆ. ಡಕಾಯಿತರು ಅಂದು ರಾತ್ರಿ 1.45ರಿಂದ ಬೆಳಗಿನ ಜಾವ 4.50ರವರೆಗೂ 350 ಕೆ.ಜಿ ಬೆಳ್ಳಿ ಇದ್ದ ಲಾಕರ್ ಒಡೆಯಲು ಪ್ರಯತ್ನ ಮಾಡಿ ವಿಫಲರಾಗಿದ್ದರು. ಬಳಿಕ ಕೈಗೆ ಸಿಕ್ಕ ಬೆಳ್ಳಿ ಪದಾರ್ಥಗಳನ್ನು ದರೋಡೆ ಮಾಡಿದ್ದರು. ಈ ಸಂಬಂಧ ಹೆಬ್ಬಾಳು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ವಿಶೇಷ ತಂಡ ವಿವಿಧ ವೈಜ್ಞಾನಿಕ ಸುಳಿವುಗಳ ಆಧಾರದ ಮೇರೆಗೆ ಇಬ್ಬರು ಆರೋಪಿಗಳನ್ನು ಗುಜರಾತ್‍ನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿತು. ಅವರು ನೀಡಿದ ಮಾಹಿತಿ ಮೇರೆಗೆ ಮೈಸೂರಿನಲ್ಲಿ ಒಬ್ಬ ಹಾಗೂ ಬೆಂಗಳೂರಿನಲ್ಲಿ 3 ಆರೋಪಿಗಳನ್ನು ಬಂಧಿಸಿದ್ದು, ಈವರೆಗೆ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಗುಜರಾತಿನ ಐವರು ಹಾಗೂ ಮಧ್ಯಪ್ರದೇಶದ ಇಬ್ಬರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

21 ಸ್ವತ್ತು ಕಳುವು ಪ್ರಕರಣಗಳ ಪತ್ತೆ: ಬೆಳ್ಳಿ ದರೋಡೆ ಪ್ರಕರಣದ ಜತೆಗೆ ಒಂದು ತಿಂಗಳ ಅವಧಿಯಲ್ಲಿ 21 ಸ್ವತ್ತು ಕಳುವು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 5 ಕನ್ನ ಕಳುವು, 1 ಸರಗಳ್ಳತನ, 1 ಸುಲಿಗೆ, 1 ಮನೆ ಕಳ್ಳತನ, 1 ಮನೆ ಕೆಲಸದವರಿಂದ ಕಳ್ಳತನ, 9 ವಾಹನ ಕಳ್ಳತನ, 3 ಸಾಮಾನ್ಯ ಕಳ್ಳತನ ಸೇರಿದಂತೆ ಒಟ್ಟು 21 ಸ್ವತ್ತು ಕಳುವು ಪ್ರಕರಣಗಳನ್ನು ಪತ್ತೆ ಮಾಡಿದ್ದು, ಸದರಿ ಪ್ರಕರಣಗಳಿಂದ 47,57,000 ರೂ. ಮೌಲ್ಯದ ಒಟ್ಟು 442 ಗ್ರಾಂ ಚಿನ್ನಾಭರಣ, 10 ದ್ವಿಚಕ್ರ ವಾಹನಗಳು, 8,50,000 ರೂ. ನಗದು ಹಣ, 1 ಎಲ್‍ಇಡಿ ಟಿ.ವಿ, 8 ಮೊಬೈಲ್ ಫೆÇೀನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆಯಾದ ಈ ಪ್ರಕರಣಗಳಲ್ಲಿ ಒಟ್ಟು 22 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಚಾಲಕನೇ ಮಾಸ್ಟರ್ ಮೈಂಡ್: ಪ್ರಕರಣದಲ್ಲಿ ಫ್ಯಾಕ್ಟರಿಯ ಮಾಲೀಕನ ಕಾರು ಚಾಲಕನೇ ಮಾಸ್ಟರ್ ಮೈಂಡ್ ಆಗಿದ್ದಾನೆ. ಈತ ಗುಜರಾತ್‍ನ ಪ್ರಮುಖ ನಟೋರಿಯಸ್ ದರೋಡೆಕೋರನಾಗಿದ್ದ ಎ-2 ಆರೋಪಿಯೊಂದಿಗೆ ಸಂಚು ರೂಪಿಸಿ ಎ-3 ಯಿಂದ ಎ-7ರೊಂದಿಗೆ ಸೇರಿಕೊಂಡು ಫ್ಯಾಕ್ಟರಿಯಲ್ಲಿ ದರೋಡೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ನಟೋರಿಯಸ್ ಎ2 ಆರೋಪಿಯ ವಿರುದ್ಧ ಗುಜರಾತ್‍ನಲ್ಲಿ 30ಕ್ಕೂ ಹೆಚ್ಚು ದರೋಡೆ, ಸುಲಿಗೆ ಹಾಗೂ ಅಕ್ರಮ ಆಯುಧ ಸಂಗ್ರಹ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

303 ಪ್ರಕರಣ ದಾಖಲು: ನಗರ ಪೆÇಲೀಸರು ಒಂದು ತಿಂಗಳ ಅವಧಿಯಲ್ಲಿ ನಗರದಾದ್ಯಂತ ಪಾರ್ಕ್, ಪಿ.ಜಿ.ಗಳು ಲಾಡ್ಜ್‍ಗಳು ಮತ್ತು ಇತರೇ ಸಾರ್ವಜನಿಕರ ಸ್ಥಳಗಳಲ್ಲಿ ವಿಶೇಷ ತಪಾಸಣೆ ಕೈಗೊಂಡು ಸುಮಾರು 2,400ಕ್ಕೂ ಅಧಿಕ ಅನುಮಾನಿತ ಗಾಂಜಾ ಸೇವನೆ ಮಾಡುವವರನ್ನು ಪತ್ತೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಮಾದಕ ಪದಾರ್ಥ ಸೇವನೆ ದೃಢಗೊಂಡ 316 ಆರೋಪಿಗಳ ವಿರುದ್ಧ ಒಟ್ಟು 303 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ ನಗರದ ವಿವಿಧ ಸ್ಥಳಗಳಲ್ಲಿ ವಿಶೇಷ ದಾಳಿಗಳನ್ನು ಕೈಗೊಂಡು ಮಾದಕ ಪದಾರ್ಥಗಳನ್ನು ಹೊಂದಿದ್ದ ಮೇರೆಗೆ ಒಟ್ಟು 23 ಪ್ರಕರಣಗಳನ್ನು ದಾಖಲಿಸಿ 24 ಆರೋಪಿಗಳನ್ನು ಬಂಧಿಸಲಾಗಿದ್ದು, 13 ಕೆ.ಜಿ. 930 ಗ್ರಾಂ ಗಾಂಜಾ, 149 ಗ್ರಾಂ 53 ಮಿ.ಗ್ರಾಂ ಸಿಂಥೆಟಿಕಜ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಡಿಸಿಪಿಗಳಾದ ಸುಂದರ್‍ರಾಜ್, ಬಿಂದುರಾಣಿ ಇತರರಿದ್ದರು.