
ಪುತ್ತೂರು: ಉಪ್ಪಿನಂಗಡಿಯ ಇಳಂತಿಲದಲ್ಲಿ ಎರಡು ದಿನಗಳ ಕಾಲ ನಡೆದ ಆಫ್ ರೋಡ್ ಜೀಪ್ ವಿಭಾಗದ ಸ್ಪರ್ಧೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಹವ್ಯಾಸಿ ಆಫ್ ರೋಡ್ ಡ್ರೈವರ್ ಜಾಕ್ ಅನಿಲ್ ಪ್ರಥಮ ಪ್ರಶಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಉಪ್ಪಿನಂಗಡಿಯಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಈ ರೇಸ್ ನಲ್ಲಿ ತನ್ನ ಅದ್ಭುತ ಚಾಲನಾ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಜಾಕ್ ಅನಿಲ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೀಪ್ , ಥಾರ್, ಜಿಮ್ಮಿ, ಜಿಪ್ಸಿ ಮತ್ತು ಮೋಡಿಫೈಡ್ ಎಂಬ ಐದು ವಿಭಾಗದಲ್ಲಿ ನಡೆದ ಪ್ರತ್ಯೇಕ ಸ್ಪರ್ಧೆಯಲ್ಲಿ ಜಾಕ್ ಅನಿಲ್ ಥಾರ್ ಜೀಪ್ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. ಕಲ್ಲು, ಮಣ್ಣು, ಕೆಸರು,ಹೊಂಡ,ಗುಂಡಿ ಹೀಗೆ ಕಂಪ್ಲೀಟ್ ಆಫ್ ರೋಡ್ ಮಾದರಿಯಲ್ಲಿ ನಿರ್ಮಾಣಗೊಂಡಿದ್ದ ಈ ಟ್ರ್ಯಾಕ್ ನಲ್ಲಿ ಕೇರಳ ಹಾಗು ಕರ್ನಾಟಕದ ಬೆಂಗಳೂರು,ಕೊಡಗು,ಚಿಕ್ಕಮಗಳೂರು ಸೇರಿದಂತೆ ನೂರಕ್ಕೂ ಮಿಕ್ಕಿದ ಆಫ್ ರೋಡ್ ಸವಾರರು ಎರಡು ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಥಾರ್ ವಿಭಾದಲ್ಲಿ ಜಾಕ್ ಅನಿಲ್ ತಮ್ಮ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಶಸ್ತಿ ಪಡೆದ ಓರ್ವರಾಗಿ ಗುರುತಿಸಿಕೊಂಡಿದ್ದಾರೆ.
ವಿವಿಧ ತಳಿಗಳ ಹಲಸಿನ ಗಿಡಗಳನ್ನು ಕಸಿ ಮಾಡಿ ಸಂರಕ್ಷಿಸಿ ಮಾರಾಟ ಮಾಡುವ ಕಾಯಕದಲ್ಲಿ ತೊಡಗಿರುವ ಜಾಕ್ ಅನಿಲ್ ತಮ್ಮ ಬಿಡುವಿನ ಸಮಯದಲ್ಲಿ ರೇಸ್ ಗೆ ಹೋಗುವ ಮೂಲಕ ಹೆಸರುವಾಸಿಯಾಗಿದ್ದಾರೆ. ಅವರಿಗೆ ಕರ್ನಾಟಕ-ಕೇರಳ ಭಾಗದಲ್ಲಿ ನಡೆಯುವ ಆಫ್ ರೋಡ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅನುಭವವೂ ಇದೆ.























