
ಸಂಜೆವಾಣಿ ವಾರ್ತೆ
ಹನೂರು.ಜ.21:- ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಯೋಜನೆ ಕಲ್ಪಿಸುವಂತೆ ಆಗ್ರಹಿಸಿ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ವಡಕೆಹಳ್ಳ ಗ್ರಾಮದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ರೈತರ ಆಹೋರಾತ್ರಿ ಧರಣಿ ಪ್ರತಿಭಟನಾ ಸ್ಥಳಕ್ಕೆ ನೀರಾವರಿ ಇಲಾಖೆಯ ಇ.ಇ ಉಮೇಶ್ , ಹಾಗೂ ಎ.ಇ ರಾಮಕೃಷ್ಣ ರವರು ಆಗಮಿಸಿ ರೈತರೊಂದಿಗೆ ಚರ್ಚೆ ನಡೆಸಿದ್ದಾರೆ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ವಡಕೆಹಳ್ಳ ಗ್ರಾಮದಲ್ಲಿ ನಡೆಯುತ್ತಿರುವ ರೈತರ ಆಹೋರಾತ್ರಿ ಧರಣಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದರು. ನಂತರ ದಂಟಳ್ಳಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ರೈತರು ಹೋರಾಟಗಾರರಿಂದ ಕಾವೇರಿ ನದಿಗೆ ಭೇಟಿ ನೀಡಿ ಡಿ.ಪಿ.ಆರ್ ತಯಾರಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಈ ಬಗ್ಗೆ ರೈತ ಮುಖಂಡರಾದ ಶೈಲೇಂದ್ರ ಮಾತನಾಡಿ ರೈತ ಮುಖಂಡರುಗಳ ಜೊತೆ ತೆರಳಿದ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಗಳನ್ನು ಪರಿಶೀಲನೆ ನಡೆಸಿದರು. ಈಗಾಗಲೇ ಕಳೆದ 86 ದಿನಗಳಿಂದ ದಂಟಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಯುತ್ತಿದ್ದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯೋಜನೆ ಜಾರಿ ಮಾಡುವಲ್ಲಿ ವಿಫಲವಾಗಿದ್ದಾರೆ.
ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿಫಲತೆ ಖಂಡಿಸಿ ದಿನಾಂಕ 31-01 -2026 ನೇ ಶನಿವಾರದಿಂದ ಅನಿರ್ದಿಷ್ಟ ಅಹೋರಾತ್ರಿ ರಸ್ತೆ ತಡೆ ಚಳುವಳಿಗೆ ರೈತ ಸಂಘ ಕರೆ ನೀಡಿದ್ದು ನೆನ್ನೆ ಕೂಡ ಸಂಸದರ ಸಭೆಯಲ್ಲಿ ರಸ್ತೆ ತಡೆ ವಿಚಾರವನ್ನು ತಿಳಿಸಲಾಗಿತ್ತು ಈ ದಿವಸ ಅಧಿಕಾರಿಗಳು ನದಿಗೆ ಬೇಟಿ ಕೊಟ್ಟಿರುವುದು ಸ್ವಲ್ಪ ಮಟ್ಟಿಗೆ ಖುಷಿ ತಂದಿರುತ್ತದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
ಅಧಿಕಾರಿಗಳ ಜೊತೆ ಶೈಲೇಂದ್ರ, ಎಂ.ಇ ಬಸವರಾಜು ,ಮೋಳೆ ರಾಜು, ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಗಿರೀಶ್, ಆರ್ ಅರ್ಪುದ ರಾಜ್, ಮಾಜಿ ಯೋಧರಾದ ಮರಿಯಾ ಜೋಸೆಫ್, ಪೌಲ್ ಧರ್ಮರಾಜ್, ಕುರಟ್ಟಿ ಹೊಸೂರು ಪುಟ್ಟಸ್ವಾಮಿ ,ಡೇವಿಡ್, ಸಿರಿಲ್, ವಲ್ಲಬದಾಸ್, ಚಾರ್ಲೀಸ್, ಜಾನ್ ಜೋಸೆಫ್, ವಡಕೆಹಳ್ಳ ಡೇವಿಡ್ ,ಇಮಾನುವೇಲು, ಫ್ರಾನ್ಸಿಸ್, ಜೋಸ್ವ, ಪೆರಿಯ ನಾಯಗ, ತಮಿಳ್,ಡ್ಯಾನಿ, ನಿತೀಶ್, ಸೂಸೈಯಮ್ಮಾಳ್ ಮುಂತಾದವರು ಇದ್ದರು.



























