Home ಜಿಲ್ಲೆ ಮೈಸೂರು ದಂಟಳ್ಳಿ ಏತ ನೀರಾವರಿ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಸಚಿವರ ಭೇಟಿ

ದಂಟಳ್ಳಿ ಏತ ನೀರಾವರಿ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಸಚಿವರ ಭೇಟಿ

ಸಂಜೆವಾಣಿ ವಾರ್ತೆ
ಹನೂರು.ಫೆ.9.:-
ಅಂತರ್ಜಲ ಅಭಿವೃದ್ಧಿಪಡಿಸಲು ದಂಟಳ್ಳಿ ಕಾವೇರಿ ನದಿಯಿಂದ ದಂಟಳ್ಳಿ ಏತ ನೀರಾವರಿ ಯೋಜನೆ ಜಾರಿ ಮಾಡುವಂತೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪಶು ಸಂಗೋಪನಾ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ರಾಜ್ಯ ರೈತ ಸಂಘದಿಂದ ಮನವಿ ಪತ್ರ ಸಲ್ಲಿಸಿದರು.


ಬೆಂಗಳೂರು ವಿಕಾಸ ಸೌಧದಲ್ಲಿ ಸಚಿವರನ್ನು ಭೇಟಿ ಮಾಡಿದ ರಾಜ್ಯ ರೈತ ಸಂಘ ಹಾಗೂ ದಂಟ್ಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ರೈತರು ಮುಖಂಡರು ಮನವಿ ಪತ್ರ ಸಲ್ಲಿಸಿ ಕಳೆದ 104 ದಿನಗಳಿಂದ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿರುವ ವಡಕೆಹಳ್ಳಿ ಗ್ರಾಮದಲ್ಲಿ ಅನಿರ್ದಿಷ್ಟ ಅಹೋರಾತ್ರಿ ಧರಣಿ ನಡೆಸಲಾಗುತ್ತಿದ್ದು ಕಳೆದ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ರಸ್ತೆ ತಡೆ ಚಳುವಳಿ ಕೂಡ ನಡೆಸಲಾಯಿತು.


ಅದೆ ದಿವಸ ಸಂಬಂಧಪಟ್ಟ ಅಧಿಕಾರಿಗಳು 15 ದಿನ ಕಾಲಾವಕಾಶ ಕೇಳಿದ್ದು ಅದರೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಇನ್ನು ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ತಿಳಿಸಲಾಗಿತ್ತು ಈ ಎಲ್ಲ ವಿಚಾರಗಳು ತಮ್ಮ ಗಮನದಲ್ಲೂ ಸಹ ಇರುತ್ತದೆ.


ಈಗಾಗಲೇ ಕಳೆದ 22 ವರ್ಷಗಳಿಂದ ಹನೂರು ತಾಲ್ಲೂಕು ರಾಮಾಪುರ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಮಾರ್ಟಳ್ಳಿ, ಪಂಚಾಯಿತಿ, ಕುರಟ್ಟಿ ಹೊಸೂರು ಪಂಚಾಯಿತಿ, ಶೆಟ್ಟಳ್ಳಿ ಪಂಚಾಯಿತಿ ಹಾಗೂ ಮಲೈ ಮಹದೇಶ್ವರ ಬೆಟ್ಟ ಪಂಚಾಯಿತಿಯ ವಡಕೆಹಳ್ಳ ಗ್ರಾಮದ ವ್ಯಾಪ್ತಿಗಳಲ್ಲಿ ಮಳೆ ಕಡಿಮೆಯಾಗಿ ಅಂತರ್ಜಲ ಕುಸಿದು ರೈತರು ವ್ಯವಸಾಯ ಬಿಟ್ಟು ಸಾವಿರಾರು ಸಂಖ್ಯೆಯಲ್ಲಿ ಗುಳೆ ಹೋಗಿರುತ್ತಾರೆ.
ಹಾಗೂ ಸಾವಿರಾರು ಜನರಿಗೆ ಶುದ್ದ ಕುಡಿಯುವ ನೀರಿಲ್ಲದೆ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಈಗಾಗಲೇ ಸಂಬಂಧಪಟ್ಟ ಇಲಾಖೆ ಕೊಳವೆ ಬಾವಿಯ ನೀರನ್ನು ಪರಿಶೀಲನೆ ಮಾಡಿ ನೀರು ಗಡಸು ನೀರಾಗಿದ್ದು ಈ ನೀರನ್ನು ಬಳಸದಂತೆ ವರದಿಯನ್ನು ನೀಡಿದೆ.


ಕಳೆದ 55 ವರ್ಷಗಳ ಹಿಂದೆ ಈ ಭಾಗದ ರೈತರಿಗೆ ಸಾವಿರಾರು ಎಕರೆ ಪ್ರದೇಶಕ್ಕೆ ಕೃಷಿ ಚಟುವಟಿಕೆ ನಡೆಸಲು ಸಾಗುವಳಿ ಚೀಟಿ ನೀಡಲಾಗಿದ್ದು ಅರಣ್ಯ ಇಲಾಖೆ ಕೂಡ ಆ ಭೂಮಿಯನ್ನು ಬಿಡುಗಡೆಗೊಳಿಸಿದ 55 ವರ್ಷಗಳಾದರು ಸಾಗುವಳಿ ಚೀಟಿ ನೀಡಿರುವ ಭೂಮಿಗಳಿಗೆ ಪೆÇೀಡಿ ಮಾಡಿ ಕೊಟ್ಟಿರುವುದಿಲ್ಲ. ಹಾಗೂ ಬಗರ್ ಹುಕ್ಕುಂ ಸಾಗುವಳಿ ದಾರರಿಗೆ ಸಾಗುವಳಿ ಚೀಟಿ ನೀಡಿರುವುದಿಲ್ಲ.
ಹಲವು ವಿಷಯಗಳನ್ನು ಈಗಾಗಲೇ ಮುಖ್ಯಮಂತ್ರಿಗಳಿಗೆ ಹಾಗೂ ತಮ್ಮ ಗಮನಕ್ಕೆ ತಂದು ಜಿಲ್ಲಾ ಆಡಳಿತಕ್ಕೆ, ಶಾಸಕರಿಗೆ ಅನೇಕ ಬಾರಿ ಕರ್ನಾಟಕ ರಾಜ್ಯ ರೈತ ಸಂಘ ಮನವಿಯನ್ನು ಮಾಡಿದರು ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲ ಆಗಿರುವುದರಿಂದ ಅಹೋ ರಾತ್ರಿ ಧರಣಿ ನಡೆಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ತಾವು ತುರ್ತಾಗಿ ಕ್ರಮವಹಿಸಿ ಮೇಲ್ಕಂಡ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಜಿಲ್ಲಾ ಖಾಯಂ ಸದಸ್ಯ ಬಸವರಾಜಪ್ಪ, ಮಾರ್ಟಳ್ಳಿ ಭಾಗದ ರೈತ ಸಂಘದ ಅಧ್ಯಕ್ಷ ಅರ್ಪುದರಾಜ್, ಪೀಟರ್, ಲೂರ್ದಸ್ವಾಮಿ, ಆರೋಗ್ಯಸ್ವಾಮಿ ಇದ್ದರು.