‘ತೆರೆದಮನೆ’ ಆಯೋಜನೆಯಲ್ಲಿ ಪೊಲೀಸ್ ಇಲಾಖೆ ವಿಫಲನಿರ್ಲಕ್ಷ ವಹಿಸದೆ ಕಾರ್ಯಕ್ರಮ ರೂಪಿಸಲು ಡಾ.ತಿಪ್ಪೇಸ್ವಾಮಿ ಸೂಚನೆ


ಪುತ್ತೂರು : ಮಕ್ಕಳ ರಕ್ಷಣಾ ನೀತಿಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಜಾರಿಗೊಳಿಸಿದ್ದ ‘ತೆರೆದ ಮನೆ’ ಕಾರ್ಯಕ್ರಮ ಅಯೋಜಿಸುವಲ್ಲಿ ಪೊಲೀಸ್ ಇಲಾಖೆ ಯಾವುದೇ ಗಂಭೀರವಾದ ಚಿಂತನೆ ಮಾಡಿಲ್ಲ. ತಿಂಗಳಿಗೆ ೪ ಕಾರ್ಯಕ್ರಮ ನಡೆಸಬೇಕಾಗಿದ್ದ ಪೊಲೀಸ್ ಇಲಾಖೆ ವರ್ಷಕ್ಕೆ ೫ ಕಾರ್ಯಕ್ರಮ ಮಾಡುವ ಮೂಲಕ ಇದನ್ನು ನಿರ್ಲಕ್ಷಿಸಿದೆ. ತಕ್ಷಣ ಈ ಕಾರ್ಯಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ನಡೆಸಬೇಕು. ಇದರಲ್ಲಿ ಪ್ರೌಢಶಾಲೆ ಮತ್ತು ಪಿಯುಸಿ ಮಕ್ಕಳನ್ನು ಹೆಚ್ಚು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದರು.
ಪುತ್ತೂರು ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಅವಿಭಜಿತ ಪುತ್ತೂರು ತಾಲೂಕುಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ೧೦ ತಿಂಗಳಲ್ಲಿ ರಾಜ್ಯ ೨೬೪೬೩ ಅಪ್ರಾಪ್ತ ಹೆಣ್ಣುಮಕ್ಕಳು ಗರ್ಭಿಣಿಯಾಗಿದ್ದಾರೆ. ಇದನ್ನು ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಬಿಸಿಎಂ, ಸಮಾಜಕಲ್ಯಾಣ ಇಲಾಖೆಗಳು ಗಂಭೀರವಾಗಿ ಪರಿಗಣಿಸಬೇಕು. ಮಕ್ಕಳ ಜತೆಗೆ ಸಂವಹನ ನಡೆಸಿ ಅವರ ಸಮಸ್ಯೆಗಳ ಪರಿಹಾರದ ಬಗ್ಗೆ ಚಿಂತನೆ ಮಾಡಬೇಕು ಎಂದವರು ಸೂಚಿಸಿದರು.
ಕಡಬ ಮತ್ತು ಪುತ್ತೂರು ತಾಲೂನಲ್ಲಿರುವ ಎಲ್ಲಾ ಸಭಾಭವನಗಳಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯ ಫಲಕಗಳನ್ನು ಕಡ್ಡಾಯವಾಗಿ ಅಳವಡಿಕೆ ಮಾಡಬೇಕು. ಕೃಷಿಹೊಂಡಗಳಲ್ಲಿ ಮಕ್ಕಳು ಬಿದ್ದು ಅಸುನೀಗಿದ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಅಂತಿಮ ಬಿಲ್ ಪಾವತಿ ಮಾಡುವ ಮೊದಲು ಸಮರ್ಪಕ ಕ್ರಮ ವಹಿಸಲಾಗಿದೆಯಾ ಎಂದು ಪರಿಶೀಲನೆ ನಡೆಸಬೇಕು. ಕಲ್ಲಿನಕೋರೆಗಳಲ್ಲಿ ನೀರು ನಿಂತಿದ್ದರೆ ಅದನ್ನು ತೆರವುಗೊಳಿಸುವ ಕಾರ್ಯವನ್ನು ಕಡ್ಡಾಯವಾಗಿ ಮಾಡಬೇಕು. ಶಾಲೆಗಳ ವಠಾರದಲ್ಲಿ ವಿದ್ಯುತ್ ಕಂಬ ಅಪಾಯಕಾರಿ ಸ್ಥಿತಿಯಲ್ಲಿದ್ದರೆ ಮೆಸ್ಕಾಂ ಗೆ ಮಾಹಿತಿ ನೀಡಬೇಕು. ಅದರ ಆಧಾರದಲ್ಲಿ ಮೆಸ್ಕಾಂ ತೆರವು ಮಾಡಬೇಕು. ಒಂದು ವೇಳೆ ಪರಿಶೀಲಿಸದೆ ವರದಿ ನೀಡದಿದ್ದರೆ, ವರದಿ ನೀಡಿಯೂ ಕ್ರಮ ಕೈಗೊಳ್ಳದಿದ್ದರೆ ಶಿಕ್ಷಣ ಇಲಾಖೆ, ಮೆಸ್ಕಾಂ ಎರಡರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಡಾ|ತಿಪ್ಪೇಸ್ವಾಮಿ ಹೇಳಿದರು.
ಮಕ್ಕಳ ಸಹಾಯವಾಣಿ ಸಂಖ್ಯೆ ಇರುವ ಫಲಕಗಳು ಎಲ್ಲ ಸರ್ಕಾರಿ ಕಚೇರಿ ಕಟ್ಟಡದಲ್ಲಿ ಇರಬೇಕು. ಒಂದು ತಿಂಗಳೊಳಗೆ ಇದಕ್ಕೆ ವ್ಯವಸ್ಥೆ ಆಗಬೇಕು. ಬಾಲ್ಯ ವಿವಾಹ ಸಹಿತ ಮಕ್ಕಳ ಹಕ್ಕುಗಳ ವಿರುದ್ಧ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಅಲ್ಲಲ್ಲಿ ಅಳವಡಿಸಬೇಕು ಎಂದು ಅವರು ಸೂಚಿಸಿದರು.
ಎಲ್ಲ ಗ್ರಾ.ಪಂ.ಗಳಲ್ಲಿ ಮಕ್ಕಳ ರಕ್ಷಣ ಹಕ್ಕುಗಳ ಸಮಿತಿ ಕ್ರಿಯಾಶೀಲವಾಗಿರಬೇಕು. ಶಾಲಾ ಕಟ್ಟಡಗಳ ಸ್ಥಿತಿ ಗತಿಗಳನ್ನು ಪರಿಶೀಲಿಸಬೇಕು. ಮಳೆಗಾಲದಲ್ಲಿ ಅಪಾಯಕಾರಿ ಮರ, ಕಟ್ಟಡಗಳಿದ್ದರೆ ಅವುಗಳಿಂದ ಮಕ್ಕಳನ್ನು ದೂರ ಇರಿಸಬೇಕು ಎಂದು ಅವರು ಸೂಚಿಸಿದರು. ಶಾಲಾ ಕಟ್ಟಡ, ಅಪಾಯಕಾರಿ ಮರ, ವಿದ್ಯುತ್ ಲೈನ್ ಬಗ್ಗೆ ಮಳೆಗಾಲಕ್ಕಿಂತ ಮೊದಲೇ ಸಮೀಕ್ಷೆ ನಡೆಸಿ ಖಾತರಿಪಸಿಕೊಳ್ಳಬೇಕು. ಖಾಸಗಿ ಶಾಲೆಗಳಲ್ಲಿ ಮಕ್ಕಳ ಓಡಾಟಕ್ಕೆ ಇರುವ ವಾಹನಗಳ ಸ್ಥಿತಿ ಸಹಿತ ಶಾಲೆಗಳು ಮಕ್ಕಳು ಸುರಕ್ಷಿತವಾಗಿರಲು ಬೇಕಾದ ಸ್ಥಿತಿಯಲ್ಲಿ ಇದೆಯೇ ಅನ್ನುವುದನ್ನು ಖಚಿತಪಡಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದು. ಹಾಗಾಗಿ ಮೇಲಿನ ಇಲಾಖೆಗಳಿಗೆ ತಪ್ಪು ಮಾಹಿತಿ ನೀಡದೆ ವಾಸ್ತವ ಸ್ಥಿತಿಗತಿಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದರು.
ವೇದಿಕೆಯಲ್ಲಿ ಪುತ್ತೂರು ತಹಶೀಲ್ದಾರ್ ನಾಗರಾಜು, ಕಡಬ ತಹಶೀಲ್ದಾರ್ ಪ್ರಭಾಕರ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಸಿಡಿಪಿಒ ಹರೀಶ್ ಉಪಸ್ಥಿತರಿದ್ದರು.