ತೂಕದಲ್ಲೂ ಭೀಮನೇ ಬಲಭೀಮ

ಸಂಜೆವಾಣಿ ನ್ಯೂಸ್
ಮೈಸೂರು:ಅ.06:-
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ 14 ಆನೆಗಳಲ್ಲಿ ಕಿರಿಯ ಗಂಡಾನೆ ಭೀಮನ ತೂಕದಲ್ಲಿ 440 ಕೆಜಿ ಹೆಚ್ಚಿಸಿಕೊಂಡು ಹೆಚ್ಚು ತೂಕವುಳ್ಳ ಆನೆ ಎನಿಸಿದ್ದರೆ, ಎರಡನೇ ಸ್ಥಾನದಲ್ಲಿ ಸುಗ್ರೀವ ಹಾಗೂ ಮೂರನೇ ಸ್ಥಾನದಲ್ಲಿ ಶ್ರೀಕಂಠ ಆನೆ ಹೆಚ್ಚು ತೂಕದ ಆನೆಗಳಾಗಿವೆ.


ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಎರಡು ತಂಡಗಳಲ್ಲಿ ಮೈಸೂರಿಗೆ ಬಂದಿದ್ದ 14 ಆನೆಗಳಿಗೆ ಅರಮನೆ ಆವರಣದಲ್ಲಿ ವಿಶೇಷ ಆಹಾರ ನೀಡಿ ಆರೈಕೆ ಮಾಡಲಾಗುತ್ತಿತ್ತು. ಆ.4ರಂದು ಮೊದಲ ತಂಡದಲ್ಲಿ ಮೈಸೂರಿಗೆ ಆಗಮಿಸಿದ್ದ 9 ಆನೆಗಳಿಗೆ ಆ.12ರಿಂದ ವಿಶೇಷ ಪೌಷ್ಟಿಕ ಆಹಾರ ನೀಡಲಾರಂಭಿಸಲಾಗಿತ್ತು. ಆ.25ರಂದು ಎರಡನೇ ತಂಡದಲ್ಲಿ ಆಗಮಿಸಿದ್ದ 5 ಆನೆಗಳಿಗೆ ಆ.26ರಿಂದ ವಿಶೇಷ ಆಹಾರ ನೀಡುವ ಮೂಲಕ ಆರೈಕೆ ಮಾಡಲಾಗುತ್ತಿತ್ತು. ಮೊದಲ ತಂಡದ ಆನೆಗಳಿಗೆ 45 ದಿನ, ಎರಡನೇ ತಂಡದ ಆನೆಗಳಿಗೆ 35 ದಿನ ವಿಶೇಷ ಆಹಾರ ನೀಡಿ ಉಪಚರಿಸಲಾಗಿತ್ತು. ದಸರಾ ಮುಗಿಸಿ ಸ್ವಸ್ಥಾನಕ್ಕೆ ಮರಳುವ ಮುನ್ನ ಸಂಪ್ರದಾಯದಂತೆ ಗಜಪಡೆಗೆ ತೂಕದ ಪರೀಕ್ಷೆ ಮಾಡಿಸಲಾಗಿದ್ದು, ಅದರಲ್ಲಿ ಭೀಮ ಹೆಚ್ಚಿನ ತೂಕವುಳ್ಳ ಆನೆಯಾಗಿ ಹೊರ ಹೊಮ್ಮಿದ್ದಾನೆ.


ಯಾವ್ಯಾವ ಆನೆ ಎಷ್ಟು ಕೆಜಿ: ಗಜಪಡೆಯಲ್ಲಿ ಕಿರಿಯ ಗಂಡಾನೆ ಭೀಮನ ತೂಕದಲ್ಲಿ 440 ಕೆಜಿ ತೂಕ ಹೆಚ್ಚಾಗಿದ್ದು 5905(ಬಂದಾಗ 5465) ಕೆಜಿ ತೂಕದಿಂದ ಮೊದಲ ಸ್ಥಾನ ಪಡೆದಿದ್ದಾರೆ. ಎರಡನೇ ತಂಡದಲ್ಲಿ ಬಂದಿದ್ದ ಸುಗ್ರೀವ 350 ಕೆಜಿ ತೂಕ ಹೆಚ್ಚಿಸಿಕೊಂಡು 5895(5545) ಕೆಜಿ ತೂಗುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾನೆ. ಪಟ್ಟದ ಆನೆ ಶ್ರೀಕಂಠ 320 ಕೆಜಿ ತೂಕ ಹೆಚ್ಚಳವಾಗಿ 5860(5540) ಕೆಜಿ ತೂಗಿ ಮೂರನೇ ಸ್ಥಾನ ಪಡೆದಿದ್ದಾನೆ. ಪಟ್ಟದ ನಿಶಾನೆ ಆನೆ ಏಕಲವ್ಯ ಆನೆಯ ತೂಕದಲ್ಲಿ 390 ಕೆಜಿ ಹೆಚ್ಚಳವಾಗಿ 5695(5305) ಕೆಜಿ ತೂಕ ಹೊಂದಿದ್ದಾನೆ. ಮಹೇಂದ್ರ ಆನೆಯ ತೂಕದಲ್ಲಿ 245 ಕೆಜಿ ತೂಕ ಹೆಚ್ಚಾಗಿ 5365(5120) ಕೆಜಿ ತೂಗಿದ್ದಾನೆ. ಧನಂಜಯ ಆನೆ 300 ಕೆಜಿ ತೂಕ ಹೆಚ್ಚಿಸಿಕೊಂಡು 5650(5310) ಕೆಜಿ ತೂಕ, ಕ್ಯಾಪ್ಟನ್ ಅಭಿಮನ್ಯು 275 ಕೆಜಿ ತೂಕ ಹೆಚ್ಚಳವಾಗಿ 5635(5360) ಕೆಜಿ ತೂಕ ಹೊಂದಿದ್ದಾನೆ. ಗೋಪಿ ತೂಕದಲ್ಲಿ 255ಕೆಜಿ ಹೆಚ್ಚಳವಾಗಿ 5245(4990) ಕೆಜಿ ತೂಕವುಳ್ಳವನಾಗಿದ್ದಾನೆ.


ಕಂಜನ್ ತೂಕದಲ್ಲಿ 345 ಕೆಜಿ ಹೆಚ್ಚಾಗಿದ್ದು, ಇದೀಗ 5225(4880) ಕೆಜಿ ತೂಕ ಹೊಂದಿದ್ದಾನೆ. ಪ್ರಶಾಂತ ಆನೆ ಕೇವಲ 50 ಕೆಜಿ ತೂಕ ಹೆಚ್ಚಳವಾಗಿದ್ದು, 5160(5110) ತೂಕ ಹೊಂದಿದ್ದಾನೆ. ಹೆಣ್ಣಾನೆಗಳಲ್ಲಿ ಬಳ್ಳೆ ಲಕ್ಷ್ಮೀ 230 ಕೆಜಿ ತೂಕ ಹೆಚ್ಚಾಗಿ 3960(3730) ಕೆಜಿ ತೂಕ ಹೊಂದಿದ್ದರೆ, ರೂಪ ತೂಕದಲ್ಲಿ ಕೇವಲ 40 ಕೆಜಿ ಹೆಚ್ಚಾಗಿ 3360(3320) ಕೆಜಿ, ಕಾವೇರಿ ತೂಕದಲ್ಲಿ 225 ಕೆಜಿ ಹೆಚ್ಚಳವಾಗಿ 3235(3010) ಕೆಜಿ ಹಾಗೂ ಕಿರಿಯ ಹೆಣ್ಣಾನೆ ಹೇಮಾವತಿ ತೂಕದಲ್ಲಿ 255 ಕೆಜಿ ಹೆಚ್ಚಾಗಿ 2674(2440) ಕೆಜಿ ತೂಕ ಹೊಂದಿದೆ.


ಅಭಿಮನ್ಯು, ಪ್ರಶಾಂತನಿಗೆ ಕಾಡಿತ್ತು ಅನಾರೋಗ್ಯ: ಅರಮನೆ ಆವರಣದಲ್ಲಿ ನೀಡಿದ ಪೌಷ್ಟಿಕ ಆಹಾರಕ್ಕೆ ಹೊಂದಿಕೊಳ್ಳುವಲ್ಲಿ ಈ ಬಾರಿ ಕೆಲವು ಆನೆಗಳು ಪರದಾಡಿದವು. ಅವುಗಳಲ್ಲಿ ಕ್ಯಾಪ್ಟನ್ ಅಭಿಮನ್ಯು ಹಾಗೂ ಪ್ರಶಾಂತ ಆನೆ ತತ್ತರಿಸಿತ್ತು. ಅರಮನೆಗೆ ಬಂದ ಆರಂಭದ ದಿನ ಸೇರಿ ಐದಾರು ಬಾರಿ ತೀವ್ರ ಬೇದಿಯಿಂದ ಬಳಲಿದ್ದ ಈ ಎರಡು ಆನೆಗಳ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಸತತ ಆರೋಗ್ಯ ಸೇವೆ ಒದಗಿಸಿದ ಪರಿಣಾಮ ಅವು ಚೇತರಿಸಿಕೊಂಡವಾದರೂ, ತೂಕದಲ್ಲಿ ಗಮನಾರ್ಹ ಹೆಚ್ಚಳವಾಗಿಲ್ಲದೇ ಇರುವುದು ಆನೆಗಳು ಎಷ್ಟರ ಮಟ್ಟಿಗೆ ತತ್ತರಿಸಿದ್ದವು ಎಂದು ತೋರ್ಪಡಿಸಿದೆ. ಆದರೂ, ಅಂತಿಮ ಘಟ್ಟದಲ್ಲಿ ಆರೋಗ್ಯ ಕಾಪಾಡಿಕೊಂಡು ಯಶಸ್ವಿಯಾಗಿ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.