
ಬಳ್ಳಾರಿ,ಜೂ.18: ಮಕ್ಕಳಲ್ಲಿ ತೀವ್ರತರ ಅತಿಸಾರ ಭೇದಿ ಕಂಡುಬಂದಲ್ಲಿ ಓಆರ್‌ಎಸ್ ದ್ರಾವಣ ಹಾಗೂ ಜಿಂಕ್ ಮಾತ್ರೆ ಬಳಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದೊಂದಿಗೆ ನಗರದ ಬ್ರ‍್ರೂಸ್‌ಪೇಟೆ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಟ್ಟಿ ಏರಿಯಾ ಕೊರಚಗೇರಿ ಕಾಲೋನಿಯ ಬಸಮ್ಮ ಸ್ಮಾರಕ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತಿಸಾರ ಭೇದಿಯು ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳ ಮರಣ ಕಾರಣಗಳಲ್ಲಿ ಒಂದಾಗಿದ್ದು, ಶೇ.10 ರಷ್ಟು ಇದರಿಂದ ಮರಣ ಹೊಂದುತ್ತಾರೆ. ಈ ಹಿನ್ನಲೆಯಲ್ಲಿ ಓಆರ್‌ಎಸ್ ದ್ರಾವಣ ಹಾಗೂ ಜಿಂಕ್ ಮಾತ್ರೆಯನ್ನು 14 ದಿನಗಳ ಕಾಲ ಮಗುವಿಗೆ ನೀಡುವ ಮೂಲಕ ಮಗುವಿನ ಆರೋಗ್ಯ ಕಾಪಾಡುವ ಅತಿಸಾರ ಭೇದಿಯನ್ನು ಬಹು ಸುಲಭವಾಗಿ ನಿಯಂತ್ರಿಸಬಹುದಾಗಿದೆ ಎಂದರು.
ರಾಜ್ಯದಲ್ಲಿ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮವನ್ನು 2014-15ನೇ ಸಾಲಿನಿಂದ “ ತೀವ್ರತರ ಅತಿಸಾರ ಭೇದಿಯಿಂದ ಶೂನ್ಯ ಮಕ್ಕಳ ಮರಣ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಪ್ರಸ್ತುತ 2025-26ನೇ ಸಾಲಿನಲ್ಲಿ ಜೂನ್ 16 ರಿಂದ ಜುಲೈ 31 ರವರೆಗೆ ಜಿಲ್ಲೆಯಾದ್ಯಾಂತ ಆಚರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 1,97,264 ಮಕ್ಕಳಿಗೆ ಓಆರ್‌ಎಸ್ ಪೊಟ್ಟಣ ಹಾಗೂ ಅಗತ್ಯಯುಳ್ಳವರಿಗೆ ಜಿಂಕ್ ಮಾತ್ರೆ ವಿತರಿಸಲಾಗುವುದು.
ಪೋಷಕರು ಮತ್ತು ಮಕ್ಕಳಿಗೆ ಪರಿಸರ ನೈರ್ಮಲ್ಯ, ಕೈತೊಳೆಯುವ ವಿಧಾನ, ವೈಯಕ್ತಿಕ ಶುಚಿತ್ವದ ಬಗ್ಗೆ ಹಾಗೂ ಅತಿಸಾರ ಭೇದಿಗೆ ಒಳಗಾದ ಮಕ್ಕಳಿಗೆ ಆರೈಕೆ ಮತ್ತು ಚಿಕಿತ್ಸೆ ನೀಡುವ ವಿಧಾನದ ಅರಿವು ಮೂಡಿಸಲು ತಮ್ಮ ಮನೆಗೆ ಆಗಮಿಸುವ ವೈದ್ಯಕೀಯ ತಂಡಗಳಿಗೆ ಸಹಕರಿಸುವಂತೆ ಕೋರಿದರು.
ಶಾಲಾ ಮುಖ್ಯೋಪಾಧ್ಯಾಯರಾದ ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಳಚೆ ಪ್ರದೇಶದ ಈ ಶಾಲೆಯಲ್ಲಿ 600ಕ್ಕೂ ಹೆಚ್ಚು ಮಕ್ಕಳು ಓದುತಿದ್ದು, ವೈಯಕ್ತಿಕ ಶುಚಿತ್ವದ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳುವ ಮಕ್ಕಳಿಗೆ ಜಾಗೃತಿ ನೀಡುವ ಆರೋಗ್ಯ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವೈದ್ಯರು ಹೇಳಿದಂತೆ ಊಟದ ಪೂರ್ವ ಹಾಗೂ ಶೌಚದ ನಂತರ 6 ವಿಧಾನಗಳ ಮೂಲಕ ಕೈಗಳನ್ನು ತೊಳೆದುಕೊಂಡು ರೋಗ ಹರಡದಂತೆ ಹಾಗೂ ಓಆರ್‌ಎಸ್ ದ್ರಾವಣ ಸಿದ್ದಪಡಿಸಿದ ನಂತರ 24 ಗಂಟೆಯೊಳಗಡೆ ಬಳಸುವಂತೆ ಮಕ್ಕಳು ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಕೈತೊಳೆಯುವ ವಿಧಾನ ಹಾಗೂ ಓಆರ್‌ಎಸ್ ದ್ರಾವಣ ತಯಾರಿಕೆ ಕುರಿತು ಸಿಬ್ಬಂದಿಯವರು ಪ್ರಾತ್ಯಕ್ಷತೆಯ ಮೂಲಕ ಮಕ್ಕಳಿಗೆ ಜಾಗೃತಿ ನೀಡಿದರು.
ಈ ಸಂದರ್ಭದಲ್ಲಿ ಬ್ರೂಸ್‌ಪೇಟೆಯ ನಗರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುರೇಖಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಮುಖ್ಯ ಗುರುಗಳಾದ ಚೆನ್ನನಗೌಡ, ಶಿಕ್ಷಕರಾದ ನಾಗರಾಜ್, ವಿರುಪಾಕ್ಷಿ, ಜಿಲ್ಲಾ ನರ್ಸಿಂಗ್ ಅಧಿಕಾರಿ ಜಿ.ಗಿರೀಶ್ ಕುಮಾರ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಚೈತ್ರ, ಪ್ರಸನ್ನ ಜ್ಯೋತಿ, ಅರುಣಾ ಜ್ಯೋತಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಿಲ್ಪ, ದೀಪ ಸೇರಿದಂತೆ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.