
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.15: ಇಂದು ಗುರುವಾರ, ಬೆಳಿಗ್ಗೆ 4 ಗಂಟೆಗೆ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ಕಲಬುರ್ಗಿ ವಿಭಾಗ(ತಿಂಥಣಿ ಬ್ರಿಡ್ಜ್)ದ ಪೀಠಾಧಿಪತಿ ಸಿದ್ಧರಾಮಾನಂದ ಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆ.
ಸಾಹಿತ್ಯ, ಸಮಾಜ, ಹಾಲುಮತದ ಸಂಸ್ಕೃತಿ ಪ್ರಿಯರಾಗಿದ್ದರು. ಇವರ ಪುಸ್ತಕ ಪ್ರೀತಿ ಅಗಾಧವಾದುದು. ಕಳೆದ ಮೂವತ್ತು ವರ್ಷಗಳಿಂದ “ಹಾಲುಮತ ಸಂಸ್ಕೃತಿ ವೈಭವ’ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಸಮಾಜದಲ್ಲಿ ಸಂಘಟನೆ ಶಿಕ್ಷಣ ಕ್ಷೇತ್ರದಲ್ಲಿ ಜಾಗೃತಿ ಮೂಡಿಸಿದ್ದರು. ಹಾಲುಮತ ಸಂಸ್ಕೃತಿ ಕುರಿತು ವಿಚಾರ ಸಂಕಿರಣ,ಪುಸ್ತಕ ಪ್ರಕಟನೆ, ಕಲೆಗಳ ಪ್ರದರ್ಶನ, ಸಂಪ್ರದಾಯ, ಪರಂಪರೆಯನ್ನು ದಾಖಲಿಸಬೇಕೆನ್ನುವ ಅವರ ಕಳಕಳಿ ಅನನ್ಯವಾದುದು. ಸ್ವಾಮಿಗಳ ಅಗಲಿಕೆಯಿಂದ ಕುರುಬ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ.ಪಿ.ಎಸ್.ಗಾದಿಲಿಂಗನಗೌಡ, ಪ್ರಧಾನ ಕಾರ್ಯದರ್ಶಿ ಅಲ್ಲಿಪುರ ಕೆ.ಮೋಹನ್ , ಪದಾಧಿಕಾರಿಗಳು ಹಾಗೂ ಸಂಘದ ಎಲ್ಲಾ ನಿರ್ದೇಶಕರುಗಳು ಸರ್ವ ಸದಸ್ಯರು ಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
























