
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.22: ಹೇಮಾವತಿ ಜಲಾಶಯದ ಎಡದಂಡೆ ನಾಲೆಯ ಮೂಲಕ ತಾಲೂಕಿನ ಕೆರೆ ಕಟ್ಟೆಗಳಿಗೆ ಹೇಮಾವತಿ ನೀರು ಹರಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.
ಈ ಕುರಿತು ಮಾತನಾಡಿರುವ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಹೇಮಾವತಿ ಜಲಾಶಯದ ಎಡದಂಡೆ ತಾಲೂಕು ವ್ಯಾಪ್ತಿಯಲ್ಲಿ 106 ನೇ ಕಿ.ಮೀ.ನಿಂದ 150.975 ನೇ ಕಿ.ಮೀ ವರೆಗೆ ಒಟ್ಟು 45.975 ಕಿ.ಮೀ ಉದ್ದ ಹಾದು ಹೋಗಿದೆ. ಇದರಡಿಯಲ್ಲಿ ವಿತರಣಾ ನಾಲೆ 47 ರಿಂದ 64 ರವರೆಗೆ ಒಟ್ಟು 18 ವಿತರಣಾ ನಾಲೆಗಳಿದ್ದು ಇದರ ಒಟ್ಟು ಉದ್ದ 200.80 ಕಿ.ಮೀ. ಸದರಿ ವಿತರಣಾ ನಾಲೆಗಳ ಮೂಲಕ 54,088 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಖಾರೀಫ್ ಮತ್ತು ರಬಿ ಬೆಳೆಗೆ ನೀರು ಕೊಡಲು ಉದ್ದೇಶಿತ ಯೋಜನೆಯಲ್ಲಿದ್ದರೂ ರಬಿ ಬೆಳೆ ಪದ್ದತಿ ಅನುಸರಿಸುತ್ತಿಲ್ಲ. ಸದರಿ ನಾಲಾ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆಗೆ ಸೇರಿದ 95 ಕೆರೆಗಳಿದ್ದು ಈ ಎಲ್ಲಾ ಕೆರೆಗಳು ಹೇಮೆಯ ನೀರನ್ನು ಅವಲಂಭಿಸಿವೆ. ಕೆರೆ ಬಯಲಿನಲ್ಲಿಯೂ 5255 ಎಕರೆ ಕೃಷಿ ಭೂಮಿ ಹೇಮೆಯ ನೀರನ್ನು ಅವಲಂಭಿಸಿದೆ.
ಕಳೆದ ವರ್ಷ ಉತ್ತಮ ಮಳೆಯಾದ ಪ್ರಯುಕ್ತ ಹೇಮಾವತಿ ಜಲಾಶಯದಲ್ಲಿ ರೈತರ ಕೃಷಿಗೆ ನೀಡಬಹುದಾದಷ್ಟು ನೀರಿನ ಸಂಗ್ರಹವಿದೆ. ರಾಜ್ಯ ಸರ್ಕಾರ ಈಗಾಗಲೇ ನೀರಾವರಿ ಸಲಹಾ ಸಮಿತಿಯ ಸಭೆ ನಡೆಸಿ ಕೆ.ಆರ್.ಎಸ್ ಜಲಾನಯನ ವ್ಯಾಪ್ತಿಯ ರೈತರಿಗೆ ಬೇಸಿಗೆ ಬೆಳೆಗೆ ನೀರು ಬಿಟ್ಟಿದೆ. ಆದರೆ ಹೇಮಾವತಿ ಜಲಾನಯನ ಪ್ರದೇಶದ ರೈತರಿಗೆ ಇದುವರೆಗೂ ನಾಲೆಗಳ ಮೂಲಕ ನೀರು ಹರಿಸುವತ್ತ ಆಲೋಚಿಸಿಲ್ಲ. ಕಳೆದ ವರ್ಷವೂ ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೂ ರಾಜ್ಯ ಸರ್ಕಾರ ಹೇಮಾವತಿ ಕಾಲುವೆಗಳಲ್ಲಿ ನೀರು ಹರಿಸದೆ ರೈತರಿಗೆ ವಂಚನೆ ಮಾಡಿತು. ಪ್ರಸಕ್ತ ಸಾಲಿನಲ್ಲೂ ಈ ಭಾಗದ ರೈತರಿಗೆ ವಂಚನೆಯಾಗುತ್ತಿದೆ. ರಾಜ್ಯದ ಕೃಷಿ ಸಚಿವರು ಹೇಮಾವತಿ ಜಲಾನಯನ ಪ್ರದೇಶಕ್ಕೆ ಸೇರಿದವರಾಗಿದ್ದರೂ ಹೇಮಾವತಿ ರೈತರ ಹಿತರಕ್ಷಣೆಗೆ ಮುಂದಾಗುತ್ತಿಲ್ಲ. ಮಂಡ್ಯ ಜಿಲ್ಲೆಯ ಹೇಮಾವತಿ ಪ್ರದೇಶದ ಶಾಸಕರುಗಳೂ ಹೇಮೆಯ ನೀರಿಗಾಗಿ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕುತ್ತಿಲ್ಲ. ನೀರಿಗಾಗಿ ಹೇಮಾವತಿ ಜಲಾನಯನ ಪ್ರದೇಶದ ರೈತರು ಸಂಘಟಿತ ಹೋರಾಟ ನಡೆಸದ ಪರಿಣಾಮ ಜನರ ಹಿತ ಕಾಯಬೇಕಾದ ಶಾಸಕರುಗಳು ಹೇಮಾವತಿ ರೈತರ ಹಿತರಕ್ಷಣೆಗೆ ಮುಂದಾಗುತ್ತಿಲ್ಲ. ಹೇಮಾವತಿ ಜಲಾಶಯದ ರೈತರ ಮೇಲಿನ ಸರ್ಕಾರದ ಮಲತಾಯಿ ಧೋರಣೆ ನಿಲ್ಲಬೇಕು. ತಕ್ಷಣವೇ ಹೇಮಾವತಿ ಜಲಾಶಯದ ಎಡದಂಡೆ ನಾಲೆಯ ಮೂಲಕ ತಾಲೂಕಿನ ಕೆರೆ ಕಟ್ಟೆಗಳಿಗೆ ಹೇಮೆಯ ನೀರು ಹರಿಸುವಂತೆ ಕಾರಿಗನಹಳ್ಳಿ ಪುಟ್ಟೇಗೌಡ ಆಗ್ರಹಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಬೇಸಿಗೆ ಝಳ ತೀವ್ರವಾಗುವ ಮುನ್ನೆಚ್ಚರಿಕೆಯನ್ನು ಈಗಾಗಲೇ ಹವಾಮಾನ ತಜ್ಞರು ನೀಡಿದ್ದಾರೆ. ಬಿರು ಬೇಸಿಗೆಯಲ್ಲಿ ಕೆರೆ ಕಟ್ಟೆಗಳನ್ನು ಹೇಮೆಯ ನೀರಿನಿಂದ ಭರ್ತಿ ಮಾಡಿದರೆ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆಯಲ್ಲದೆ ಅಂತರ್ಜಲ ವೃದ್ದಿಗೊಂಡು ಪಂಪ್ ಸೆಟ್ ಆಧಾರಿತ ರೈತರ ಕೃಷಿಗೂ ಅನುಕೂಲವಾಗುತ್ತದೆ. ಹೇಮೆಯ ನೀರಿಗಾಗಿ ರೈತಸಂಘ ಹೋರಾಟಕ್ಕಿಳಿಯುವ ಮುನ್ನವೇ ರಾಜ್ಯ ಸರ್ಕಾರ ರೈತಪರ ನಿಲುವು ವ್ಯಕ್ತಪಡಿಸಿ ತಕ್ಷಣವೇ ಹೇಮಾವತಿ ಜಲಾನಯನ ಪ್ರದೇಶದ ಅಚ್ಚುಕಟ್ಟು ಪ್ರದೇಶಕ್ಕೆ ಅಗತ್ಯ ನೀರು ಹರಿಸುವಂತೆ ಪುಟ್ಟೇಗೌಡ ಮನವಿ ಮಾಡಿದ್ದಾರೆ.




























