
ಹೊಸಪೇಟೆ:- ಕಳೆದ ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ನಗರದ 60 ಹಾಸಿಗೆ ತಾಯಿ ಮಕ್ಕಳ ಆಸ್ಪತ್ರೆಯ ಹೆರಿಗೆ ವಾರ್ಡ್‍ನಲ್ಲಿ ಎಸಿ ಕಾರ್ಯಾರಂಭ ಮಾಡಿದ್ದು. ಫ್ಯಾನ್ ಗಳು ತಿರುಗಲು ಆರಂಭಿಸಿವೆ.
ಸ್ಥಳೀಯ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕುರಿತು ಸಂಜೆವಾಣಿ'' ಪತ್ರಿಕೆಯ ದಿ.01-05-2026 ರ ಸಂಚಿಕೆಯಲ್ಲಿ60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ, ಹೆರಿಗೆ ವಾಡ್ರ್ನಲ್ಲಿ ಎಸಿ ಫ್ಯಾನ್ ಗಳು ಬಂದ್, ಬಿಸಿಲಿನ ತಾಪಕ್ಕೆ ಬಾಣಂತಿಯರು ಹಾಗೂ ನವಜಾತ ಶಿಶುಗಳು ಹೈರಾಣ” ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು.
ಸುದ್ದಿ ಪ್ರಕಟವಾಗುತ್ತಲೇ ಎಚ್ಚೆತ್ತ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು, ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಸ್ಪಂದಿಸಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ದುರಸ್ಥಿಗೆ ಒಳಗಾಗಿದ್ದ, ಎಸಿ ಮತ್ತು ಫ್ಯಾನ್ ಗಳನ್ನು ಸುದ್ದಿ ಪ್ರಕಟವಾದ 24 ಗಂಟೆಯೊಳಗೆ ಸರಿಪಡಿಸಿದ್ದಾರೆ.
ಮೆಚ್ಚುಗೆ: ಸುದ್ದಿ ಪ್ರಕಟವಾದ 24 ಗಂಟೆಗಳಲ್ಲಿಯೇ ಆಸ್ಪತ್ರೆಯ ಹೆರಿಗೆ ವಾರ್ಡಿನ್ ವೈರಿಂಗ್ ಬದಲಿಸಿ, ಹೊಸ ಡಿಪಿ ಅಳವಡಿಸಿ, ಎಸಿ ಹಾಗೂ ಫ್ಯಾನ್ ಗಳನ್ನು ದುರಸ್ಥಿ ಮಾಡಿದ್ದಕ್ಕಾಗಿ, ಆಸ್ಪತ್ರೆಯ ರೋಗಿಗಳು ಹಾಗೂ ಅವರ ಸಂಬಂಧಿಕರು ಪತ್ರಿಕೆಯ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಕರ್ತರಿಂದ ಸಮಾಜದಲ್ಲಿ ಒಳ್ಳೆಯ ಕೆಲಸಗಳು ಆಗುತ್ತಿವೆ. ನಿಮಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ದೂರು: ಸದರಿ ಆಸ್ಪತ್ರೆಯ ಹೆರಿಗೆ ವಾಡ್ರ್ನಲ್ಲಿನ ಎಸಿ ಹಾಗೂ ಫ್ಯಾನ್ ಗಳು ದುರಸ್ಥಿ ಆಗಿರುವ ಕುರಿತು ಕಳೆದ ಒಂದು ತಿಂಗಳ ಹಿಂದೆಯೇ ಆಸ್ಪತ್ರೆಯ ವೈದ್ಯಾಧಿಕಾರಿ ಗಮನಕ್ಕೆ ತಂದರೂ, ಅವರು ದುgಸ್ಥಿ ಮಾಡಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಪತ್ರಿಕೆಯಲ್ಲಿ ಸುದ್ದಿ ಬಂದ ನಂತರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ದೂರಿದರು.
ಮುನ್ನೆಚ್ಚರಿಕೆ ಕ್ರಮ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ್, ಹೈ ವೋಲ್ಟೇಜ್ ಪ್ರಾಬ್ಲಮ್ ನಿಂದಾಗಿ, ಹೆರಿಗೆ ವಾರ್ಡ್‍ನಲ್ಲಿ ಎಸಿ ಮತ್ತು ಫ್ಯಾನ್ ಗಳಿಗೆ ತೊಂದರೆ ಆಗಿತ್ತು. ಈಗ ಅದನ್ನು ಸರಿಪಡಿಸಿ, ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ಹೆರಿಗೆ ವಾರ್ಡುಗಳಲ್ಲಿ ಪರುಷರು ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಆಸ್ಪತ್ರೆಯ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಜಂಬಯ್ಯ ಹಾಗೂ ಸಿಬ್ಬಂದಿಗಳು ಇದ್ದರು.
ಹೊಸಪೇಟೆ. ಸ್ಥಳೀಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕುರಿತು ಪತ್ರಿಕೆಯಲ್ಲಿ ಸುದ್ದಿ ಪ್ರಕಟ ನಂತರ ಆಸ್ಪತ್ರೆಯ ಹೆರಿಗೆ ವಾಡ್ರ್ನಲ್ಲಿ ಕಾರ್ಯಾರಂಭ ಮಾಡಿರುವ ಎಸಿ ಹಾಗೂ ಫ್ಯಾನ್ ಗಳು.






















