ತಿ.ನರಸೀಪುರ : ಇತಿಹಾಸ ಪ್ರಸಿದ್ಧ ತಲಕಾಡು ಗ್ರಾಮದ ಹೃದಯಭಾಗದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾಹಿತ್ಯ ಪರಿಷತ್ ನಿಂಡ ಕನ್ನಡ ಭವನ ನಿರ್ಮಾಣವಾಗುತ್ತಿರುವ ಸೂಕ್ತ ಮತ್ತು ಸಮಯೋಜಿತವಾಗಿದೆ ಎಂದು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿಂಗಾಪುರ್ ಶ್ರೀನಿವಾಸ್ ಹೇಳಿದರು.
ತಾಲೂಕಿನ ತಲಕಾಡಿನ ಹಳೇಬೀದಿಯಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನ 10 ಲಕ್ಷ ರೂಗಳ ಅನುದಾನ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಭವನ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶ್ರೀ ವೈದ್ಯನಾಥೇಶ್ವರ, ಶ್ರೀ ಕೀರ್ತಿನಾರಾಯಣಸ್ವಾಮಿ ಹಾಗೂ ಶ್ರೀ ಚೌಡೇಶ್ವರಿ ದೇವಾಲಯದ ಮಗ್ಗುಲಲ್ಲಿನ ನಿವೇಶನದಲ್ಲಿ ನಿರ್ಮಾಣವಾಗುವ ಕನ್ನಡ ಭವನ ವಿವಿಧ ಉದ್ದೇಶಗಳಿಗೆ, ಸಭೆ ಸಮಾರಂಭಗಳಿಗೆ, ತರಬೇತಿಗಳಿಗೆ, ಹೋಬಳಿಯ ಸಾರ್ವಜನಿಕರಿಗೆ ಸದ್ಬಳಕೆಯಾಗಲಿ ಎಂದರು.
ಶ್ರೀ ವೈದ್ಯನಾಥೇಶ್ವರ ಸಮೂಹ ದೇವಾಲಯಗಳ ಮುಖ್ಯ ಅರ್ಚಕ ಆನಂದ್ ದೀಕ್ಷಿತ್ ಮಾತನಾಡಿ, ದೇವಾಲಯದ ಆಸುಪಾಸುನಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನವು ಕೆಲವೇ ದಿನಗಳಲ್ಲಿ ಮಾದರಿ ಭವನವಾಗಿ ಬಹಳಷ್ಟು ಎತ್ತರಕ್ಕೆ ಬೆಳೆಯಲಿದೆ. ಇಲ್ಲಿರುವ ಪದಾಧಿಕಾರಿಗಳು ಸಮಾಜಮುಖಿಯಾಗಿರುವುದರಿಂದ ಯಾವುದೇ ಲಾಭ, ಪ್ರತಿಫಲಾಪೇಕ್ಷೆ, ಭೇದ ಭಾವವಿಲ್ಲದ ಅಭಿವೃದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ನೂತನ ಕನ್ನಡ ಭವನ ಭೂಮಿ ಪೂಜೆ ಕಾರ್ಯವು ಬಾಲಕೃಷ್ಣನಂದ ಮಠದ ಶ್ರೀಗಳಾದ ಜಗದ್ಗುರು ಗೋವಿಂದಾನಂದ ಸರಸ್ವತಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹೋಬಳಿ ಘಟಕದ ಕಸಾಪ ಅಧ್ಯಕ್ಷ ವೆಂಕಟೇಶ್ ವಿನಾಯಕ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕ ಸಾ ಪ ನಿಕಟ ಪೂರ್ವ ಅಧ್ಯಕ್ಷ ಶ್ರೀನಿವಾಸರಾವ್, ನರೇಂದ್ರ, ಗ್ರಾ.ಪಂ ಸದಸ್ಯೆ ಪಾರ್ವತಮ್ಮ, ಸುಂದರ್ ರಾಜ್, ಜಿ.ನಾಗರಾಜ್, ಮಠದ ಸುಹಾಸ್, ದೀಪಕ್, ರೋಹನ್, ಗೋವಿಂದರಾಜು, ಶಿವರಾಜ್, ಶ್ರೀನಿವಾಸ ಗೌಡ, ಮಹದೇವಸ್ವಾಮಿ, ಸುರೇಶ್, ಕೆ.ಕುಮಾರ್, ಸೋಮಣ್ಣ, ಮಹದೇವ್, ರಾಜು, ಕೂಸಪ್ಪ, ಕೃಷ್ಣ, ನಾಗೇಶ್, ಅರುಣ್ ಕುಮಾರ್, ಅರ್ಚಕ ಜಗದೀಶ್ ಸೇರಿದಂತೆ ಪ್ರಮುಖರು ಹಾಗೂ ಗ್ರಾಮಸ್ಥರು ಇದ್ದರು.


























