ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೊಲೆ, ಗಲಭೆ ಪ್ರಕರಣ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದು, ಹಲವು ಉನ್ನತ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅದೇಶ ಹೊರಡಿಸಿದ್ದಾರೆ.
ಗುರುವಾರ ಸಂಜೆ ನಡೆದ ಸಭೆಯಲ್ಲಿ ಗೃಹ ಸಚಿವ ಡಾ| ಜಿ. ಪರಮೇಶ್ವರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಡಿಜಿ-ಐಜಿ ಸಲೀಂ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಹಾಜರಿದ್ದರು. ಈ ವೇಳೆ ಜಿಲ್ಲೆಯಲ್ಲಿ ಇತ್ತೀಚಿನ ವಿದ್ಯಮಾನ ಹಾಗೂ ಅದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಸಭೆ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ಮಂಗಳೂರು ಪೊಲೀಸ್ ಆಯುಕ್ತರು ಸಹಿತ ಕೆಲವು ಅಧಿಕಾರಿಗಳ ವಿರುದ್ದ ಅಸಮಾಧಾನ ಹೊರಹಾಕಿದರು. ಅಧಿಕಾರಿಗಳನ್ನು ಬದಲಿಸಿ ಅಥವಾ ಇಲ್ಲವೇ ಜಿಲ್ಲಾ ಉಸ್ತುವಾರಿ ಸಜಿವ ಸ್ಥಾನದಿಂದ ಬಿಡುಗಡೆ ಕೊಡಿ ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಜಿಲ್ಲೆಯ ಸೂಕ್ಷ್ಮತೆ ನೋಡಿಕೊಂಡು ಹೆಜ್ಜೆ ಇಡಬೇಕು. ಈಗಾಗಲೇ ವಿಶೇಷ ಕಾರ್ಯಪಡೆ ರಚಿಸಿದ್ದು, ಗೃಹಸಚಿವರು, ಅಧಿಕಾರಿಗಳು ಎಲ್ಲರೊಂದಿಗೆ ಸಿಎಂ ಚರ್ಚಿಸಿದರು. ನಮ್ಮ ಕಡೆಯಿಂದ ಏನು ಸಾಧ್ಯ ಆಗುತ್ತದೆಯೋ ಆ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದ್ದೇವೆ ಎಂದು ಸಜಿವ ದಿನೇಶ್ ಗುಂಡೂರಾವ್ ಹೇಳಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷ ರಾಜಕೀಯ ವಾತಾವರಣವನ್ನು ತಿಳಿ ಮಾಡಬೇಕು. ತಪ್ಪು ಮಾಡಿದವರ ಮೇಲೆ ಕಠಿನ ಶ್ರಮ ತೆಗೆದುಕೊಳ್ಳಬೇಕು ಎಂದರು. ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕವಾಗಿ ಪ್ರಚೋದನ ಭಾಷಣ, ಬೆಂಕಿ ಹಚ್ಚುವ ಕೆಲಸ ಮಾಡೋದಕ್ಕೆ ಇತಿಶ್ರಿ ಹಾಡಬೇಕು. ಇದು ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸಹಿತ ಯಾರಿಗೂ ಒಳ್ಳೆಯದಲ್ಲ. ಜನರನ್ನು ಹತ್ತಿರ ತರುವ ಕೆಲಸ ಮಾಡಬೇಕು. ಅಲ್ಪಸಂಖ್ಯಾಕ ಘಟಕದ ಯಾವ ನಾಯಕರು ರಾಜೀನಾಮೆ ಕೊಟ್ಟಿದ್ದಾರೆ? ಯಾರನ್ನು ಭೇಟಿ ಮಾಡಿದ್ದಾರೆ? ಯಾವಾಗ ಸಭೆ ಮಾಡಿದ್ದಾರೆ ಎಂಬ ಮಾಹಿತಿ ನನಗಿಲ್ಲ. ಅದು ಮುಖ್ಯವೂ ಅಲ್ಲ ಎಂದರು.
ನಾಳೆ ಮಂಗಳೂರು ಭೇಟಿ
ಜಿಲ್ಲೆಯ ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಮೇ ೩೧ ರಂದು ಜಿಲ್ಲೆಗೆ ಗೃಹ ಸಚಿವ ಡಾ|ಜಿ.ಪರಮೇಶ್ವರ ಹಾಗೂ ತಾವು ಭೇಟಿ ನೀಡುವುದಾಗಿ ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ತಿಲಿಸಿದ್ದಾರೆ.
ಜಿಲ್ಲೆಯ ಘಟನೆ ಕುರಿತು ಸಿಎಂ ಹಾಗೂ ಗೃಹಸಚಿವರೊಂದಿಗೆ ಚರ್ಚಿಸಲಾಗಿದೆ. ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು, ಸಾನಾಗಲೀ, ನಮ್ಮ ಸರಕಾರವಾಗಲೀ ಯಾರನ್ನೂ ಓಟೈಸುವುದಿಲ್ಲ. ಬಿಜೆಪಿ ಸರಕಾರ ಇದ್ದಾಗಲೂ ಕೊಲೆಗಳು ನಡೆದಿವೆ. ಯಾರು ಸತ್ತರೂ ಮುಖ್ಯವೇ ಆಗುತ್ತದೆ. ಯಾರೋ ಏನೋ ಹೇಳಿದರೆಂದು ನಾನು ವಿಚಲಿತನಾಗುವವನಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಆಗಬೇಕು. ವಾತಾವರಣ ತಿಳಿಯಾಗಬೇಕಷ್ಟೆ. ನಾಡಿದ್ದು ಮಂಗಳೂರಿಗೆ ಭೇಟಿ ಕೊಡುತ್ತಿದ್ದೇನೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.