Home ಜಿಲ್ಲೆ ಮಂಗಳೂರು ತಪ್ಪು ತಿದ್ದಿಕೊಳ್ಳುವವರು ಸಮಾಜದ ಅದ್ಭುತ ವ್ಯಕ್ತಿಗಳಾಗುತ್ತಾರೆ- ಡಿವೈಎಸ್‌ಪಿ ಪ್ರಮೋದ್ ಕುಮಾರ್

ತಪ್ಪು ತಿದ್ದಿಕೊಳ್ಳುವವರು ಸಮಾಜದ ಅದ್ಭುತ ವ್ಯಕ್ತಿಗಳಾಗುತ್ತಾರೆ- ಡಿವೈಎಸ್‌ಪಿ ಪ್ರಮೋದ್ ಕುಮಾರ್

ತಾಲೂಕು ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ
ಪುತ್ತೂರು: ಪ್ರತಿಯೊಬ್ಬ ಮಹಾತ್ಮರೂ ತಮ್ಮ ಸಾಧನೆಗಳ ಮೂಲಕ ಸಮಾಜಕ್ಕೆ ಸನ್ಮಾರ್ಗದ ದಾರಿಯನ್ನು ತೋರಿಸಿದವರಾಗಿದ್ದು, ತಮ್ಮ ಜೀವನಾನುಭವಗಳನ್ನು ಸಮಾಜಕ್ಕೆ ಧಾರೆ ಎರೆದುಕೊಟ್ಟಿದ್ದಾರೆ. ಸರಕಾರ ಅಂತಹ ಮಹಾತ್ಮರ ಜಯಂತಿಯನ್ನು ಆಚರಿಸುವ ಮೂಲಕ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಕೃತಿಯ ಮೂಲಕ ಜಗತ್ತಿಗೆ ಹಿಂದೂ ಸನಾತನ ಧರ್ಮದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ ಎಂದು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷ ಪ್ರಮೋದ್ ಕುಮಾರ್ ಹೇಳಿದರು.
ಅವರು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆಯ ಜಂಟಿ ಆಶ್ರಯದಲ್ಲಿ ಸೋಮವಾರ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಂಸ್ಮರಣಾ ದೀಪ ಬೆಳಗಿಸಿ ಮಾತನಾಡಿದರು. ಜೀವನದಲ್ಲಿ ತಪ್ಪು ಮಾಡದವರು ಯಾರೂ ಇರಲಾರರು. ತನ್ನ ತಪ್ಪನ್ನು ತಿದ್ದಿಕೊಳ್ಳುವವರು ಸಮಾಜದಲ್ಲಿ ಅದ್ಭುತ ವ್ಯಕ್ತಿಗಳು, ಮಹಾತ್ಮರೂ ಆಗುತ್ತಾರೆ. ತಪ್ಪನ್ನು ತಿದ್ದಿಕೊಳ್ಳದವರು ಸಮಾಜ ಕಂಠಕರಾಗುತ್ತಾರೆ. ಬೇಡರಾಗಿದ್ದ ವಾಲ್ಮೀಕಿ ಮಹರ್ಷಿಯವರು ನಾರದರ ಪ್ರಭಾವದಿಂದ ತನ್ನ ತಪ್ಪಿನ ಅರಿವಾಗಿ ಜೀವನದಲ್ಲಿ ಪರಿವರ್ತನೆಯಾಗಿ ಸಮಾಜದಲ್ಲಿ ಮಹಾತ್ಮರಾಗಿ ಬೆಳೆದರು. ಅವರು ಸುಂದರ ರಾಮಾಯಣ ಕೃತಿ ರಚಿಸಿ ಸಮಾಜಕ್ಕೆ ಅರ್ಪಣೆ ಮಾಡಿದವರು. ಪ್ರತಿಯೊಬ್ಬರ ಜೀವನದಲ್ಲಿಯೂ ಬದಲಾವಣೆಗೆ ಸಾಕಷ್ಟು ಸಂದರ್ಭಗಳು ಎದುರಾಗುತ್ತಿರುತ್ತದೆ. ಅವುಗಳನ್ನು ಬಳಸಿಕೊಂಡು ಮುನ್ನಡೆಯಬೇಕು. ಜೀವನದಲ್ಲಿ ಒಳ್ಳೆತನವನ್ನು ಪೋಷಿಸಬೇಕು. ಯೋಚನಾ ಶೈಲಿಯನ್ನು ಬದಲಾಯಿಸಿಕೊಳ್ಳುವ ಮುಖಾಂತರ ಸಮಾಜ, ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಸಂಸ್ಮರಣಾ ಉಪನ್ಯಾಸ ನೀಡಿದ ಮುಖ್ಯ ಶಿಕ್ಷಕಿ ಶಂಕರಿ ಪಟ್ಟೆ ಮಾತನಾಡಿ ಮಹರ್ಷಿ ವಾಲ್ಮೀಕಿಯವರ ಜೀವನ ಮೌಲ್ಯ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೆ, ಜಗತ್ತಿಗೆ ಸಾರಿದೆ. ಸಂಸ್ಕಾರಯುತ ಕುಟುಂಬದಲ್ಲಿ ಹುಟ್ಟಿದ ಅವರು ಬೇಡರಾಗಿ ಬೆಳೆದವರು. ನಂತರ ನಾರದರ ಪ್ರಭಾವದಿಂದ ಆಧ್ಯಾತ್ಮದ ಒಳಹು ಪಡೆದ ಅವರು ಸಂಸ್ಕೃತದ ಆದಿಕವಿಯಾಗಿ ೨೪ ಸಾವಿರ ಶ್ಲೋಕಗಳನ್ನು ಒಳಗೊಂಡ ರಾಮಾಯಣ ಗ್ರಂಥ ರಚಿಸಿ ಜಗತ್ತಿಗೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ. ೨೦೧೦ರಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಕಾರದಿಂದ ಆಚರಿಸಲಾಗುತ್ತಿದ್ದು ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಸಮಾಜದ ಪ್ರತಿಯೊಬ್ಬರೂ ಭಾಗವಹಿಸುವಂತಾಗಬೇಕು ಎಂದು ಹೇಳಿದರು.
ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಬೇಟೆ ಮಾಡುತ್ತಿದ್ದ ವ್ಯಕ್ತಿಯೋರ್ವ ಮಹಾತ್ಮನಾಗಿ ಪರಿವರ್ತನೆಯಾದ ವಾಲ್ಮೀಕಿ ಮಹರ್ಷಿಯವರ ತ್ಯಾಗ, ಆದರ್ಶಗಳನ್ನು ಮತ್ತೆ ನೆನಪಿಸುವ ಕಾರ್ಯ ಜಯಂತಿ ಆಚರಣೆಯ ಮೂಲಕ ನಡೆಯುತ್ತಿದ್ದು ಇದು ಎಲ್ಲಾ ಶಾಲೆಗಳಲ್ಲಿ ನಡೆಯಬೇಕು ಎಂದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಮಹರ್ಷಿಯವರ ತತ್ವ, ಜೀವನ ವಿಧಾನಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಪೊಲೀ?? ಇಲಾಖೆಯ ಆವಶ್ಯಕತೆಯಿಲ್ಲ. ಮುಂದಿನ ಕಾಲಘಟ್ಟಕ್ಕೂ ಅವರ ಜೀವನ ಆದರ್ಶಗಳ ಆವಶ್ಯಕತೆಯಿದೆ ಎಂದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ಎಸ್.ಬಿ ಕೂಡಲಗಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಾಲ್ಮೀಕಿ ಹಾಗೂ ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಾದ ಆರಾಧನ ನಾಯ್ಕ, ಧೀರಜ್, ಮಾನಸ, ದಿಶ ಆರ್. ಅವರನ್ನು ಸನ್ಮಾನಿಸಲಾಯಿತು. ಸಂಸ್ಮರಣಾ ಉಪನ್ಯಾಸ ನೀಡಿದ ಶಂಕರಿ ಪಟ್ಟೆ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ ಕುಮಾರಿ ಸ್ವಾಗತಿಸಿದರು. ವಸತಿ ಶಾಲಾ ಶಿಕ್ಷಕಿ ಲಕ್ಷ್ಮೀ ಸನ್ಮಾನಿತರ ಪರಿಚಯ ಮಾಡಿದರು. ಸಂಧಾ ವಂದಿಸಿದರು. ಕೊಣಾಲು ವಸತಿ ನಿಲಯದ ಮೇಲ್ವಿಚಾರಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.