ತನ್ವೀರ್ ಸೇಠ್ ಕಪ್ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

ಸಂಜೆವಾಣಿ ನ್ಯೂಸ್
ಮೈಸೂರು:ಜ.04:
ಆರೋಗ್ಯವಂತ ಸಮಾಜ ಈ ದೇಶದ ಸಂಪತ್ತು ಮತ್ತು ಆರೋಗ್ಯವಂತ ಯುವ ಜನಾಂಗವೇ ಈ ದೇಶದ ಶಕ್ತಿ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ರಾಜೀವ್‍ನಗರದ ಈದ್ಗಾ ಮೈದಾನದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ‘ಡ್ರಗ್ಸ್ ಎಂಡ್ಸ್ ಆಲ್ ಡ್ರೀಮ್ಸ್’ ಮಾದಕ ವಸ್ತುಗಳು ನಮ್ಮ ಕನಸುಗಳನ್ನು ನಾಶ ಮಾಡುತ್ತವೆ ಎಂಬ ಶೀರ್ಷಿಕೆಯಡಿ ‘ಮಾಸ್ ಆಂಟಿ ಡ್ರಗ್ಸ್ ಅವೇರ್ನೆಸ್ ಡ್ರೈವ್’ ಮಾದಕ ವಸ್ತುಗಳ ವಿರುದ್ಧ ಸಾಮೂಹಿಕ ಜಾಗೃತಿ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ 10 ದಿನಗಳ ‘ತನ್ವೀರ್ ಸೇಠ್ ಕಪ್’ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.


ಮಾದಕ ವಸ್ತುಗಳ ಸೇವನೆಯು ಒಂದು ಕುಟುಂಬದ ಅವನತಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಶ್ರಮಿಕ ವರ್ಗ, ಬಡತನದ ಕುಟುಂಬಗಳು ಈ ಚಟಕ್ಕೆ ಬಲಿಯಾಗುತ್ತಿವೆ. ಯಾವುದನ್ನು ನಾವು ಮಾಡಬೇಡಿ ಅನ್ನುತ್ತೇವೋ ಅದರ ಹಿಂದೆಯೇ ಜನರು ಹೆಚ್ಚಾಗಿ ಹೋಗುವುದನ್ನು ನಾವು ನೋಡುತ್ತಿದ್ದೇವೆ.


ಕೇಂದ್ರ ಸರ್ಕಾರ ತಂಬಾಕು ಉತ್ಪನ್ನಗಳ ತೆರಿಗೆಯನ್ನು ಸಾಕಷ್ಟು ಹೆಚ್ಚು ಮಾಡುತ್ತಿದ್ದರೂ ಅದರ ಬಳಕೆ ಹೆಚ್ಚಾಗುತ್ತಲೇ ಇದೆ, ಇದು ಸಹಜ ಕ್ರಿಯೆ, ಯುವಜನಾಂಗವೇ ಹೆಚ್ಚಾಗಿ ಮಾದಕ ವಸ್ತುಗಳ ದಾಸರಾಗುತ್ತಿರುವುದು ಆತಂಕದ ವಿಚಾರ, ಯುವ ಜನಾಂಗ ದೇಶದ ಸಂಪತ್ತು ಆಗಿರುವ ಕಾರಣ ಮತ್ತು ಉತ್ತಮ ಸಮಾಜ ನಿರ್ಮಾಣ ಮಾಡಲು ಮಾದಕ ವಸ್ತುಗಳ ಸೇವನೆ, ಮಾರಾಟ ಮತ್ತು ತಯಾರಿಕೆಗೆ ಕಡಿವಾಣ ಹಾಕಲೇಬೇಕು. ಹೊಗೆಯುಕ್ತ ಮಾದಕ ವಸ್ತುಗಳ ಸೇವನೆಯ ಬಳಕೆಗಿಂತಲೂ ಹೊಗೆ ರಹಿತ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬ್ರಾರ್ ಮೊಹಮ್ಮದ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಮುಖಂಡರು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಮೂಲಕ ಯುವ ಜನಾಂಗವನ್ನು ಸಂಘಟಿಸಿ ಈ ಜಾಗೃತಿ ಅಭಿಯಾನ ನಡೆಸಿರುವುದು ಶ್ಲಾಘನೀಯ ಎಂದರು.


ಶಾಸಕ ಹರೀಶ್‍ಗೌಡ ಮಾತನಾಡಿ, ಕ್ರೀಡೆಯ ಮೂಲಕ ಯುವ ಜನಾಂಗವನ್ನು ಸಂಘಟಿಸಿ ಅವರ ಮೂಲಕ ವ್ಯಸನಮುಕ್ತ ಸಮಾಜದ ನಿರ್ಮಾಣ ಮಾಡುವ ಸಂದೇಶ ಸಾರುತ್ತಿರುವ ಯುವ ಕಾಂಗ್ರೆಸ್ ಮುಖಂಡರ ಸಾಮಾಜಿಕ ಕಳಕಳಿ ಮೆಚ್ಚುವಂತಹದು ಎಂದರು.


ಉರಿಲಿಂಗಿಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಇಂದು ನಾವು ತಾಂತ್ರಿಕವಾಗಿ ಬದುಕುತ್ತಿದ್ದೇವೆ. ತಾತ್ವಿಕವಾಗಿ ಬದುಕುತ್ತಿಲ್ಲ, ಆಂದ್ರ ಪ್ರದೇಶದ ಕರ್ನೂಲ್‍ನಲ್ಲಿ ಡ್ರಗ್ಸ್ ತೆಗೆದುಕೊಂಡ ಒಬ್ಬ ಯುವಕ ನಶೆಯಲ್ಲಿ ತನ್ನ ಸಹೋದರಿಯ ಮೇಲೆ ಅತ್ಯಾಚಾರ ಮಾಡುತ್ತಾನೆ ಎಂದರೆ ನಮ್ಮ ಬದುಕು ಎತ್ತ ಸಾಗುತ್ತಿದೆ ಎಂದು ಯೋಚಿಸಬೇಕಿದೆ. ಭಾರತ ವಿಶ್ವಗುರು, ವಿಕಸಿತ ಭಾರತ ಎನ್ನುತ್ತಾರೆ. ಮೊದಲು ವ್ಯಸನಮುಕ್ತ, ಮೌಢ್ಯಮುಕ್ತ, ದಾರಿದ್ರ್ಯಮುಕ್ತ, ಹಸಿವುಮುಕ್ತ ಭಾರತವನ್ನು ನಾವು ನಿರ್ಮಿಸಬೇಕಿದೆ. ಆಗ ಬೇಕಾದರೆ ನಮ್ಮ ದೇಶವನ್ನು ವಿಶ್ವಗುರು ಎನ್ನಬಹುದು ಎಂದರು.
ಇದೇ ವೇಳೆ ಮಾದಕ ವಸ್ತುಗಳ ಸೇವನೆ ವಿರುದ್ಧ ಪ್ರತಿಜ್ಞೆ ಕೈಗೊಳ್ಳಲಾಯಿತು.


ಕ್ರೈಸ್ತ ಧರ್ಮಗುರು ಥಾಮಸ್ ಆಂತೋಣಿ ವಾಝಿಪಿಳ್ಳೈ, ಮೌಲಾನ ಅಕ್ಬರ್ ಷರೀಫ್, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್, ಕೆಪಿಎಲ್ ಆಟಗಾರ ವಿಷ್ಣು, ನಗರ ಕಾಂಗ್ರೆಸ್ ಅಧ್ಯಕ್ಷ ಎನ್.ಮೂರ್ತಿ, ಅಜೀಜ್‍ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಎಕ್ಬಾಲ್, ಉಪಾಧ್ಯಕ್ಷ ಷಹಿನ್‍ಷಾ ಅಹಮದ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬ್ರಾರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡರಾದ ಅಫೆÇ್ರೀಜ್ ಖಾನ್, ದೀಪಕ್ ಶಿವಣ್ಣ, ಸೈಫುದ್ದೀನ್ ಇತರರು ಇದ್ದರು.