Home ಜಿಲ್ಲೆ ಮಂಗಳೂರು ತಂಗಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ತಂಗಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ ನಾಲ್ವರು ಅಪರಾಧಿಗಳಿಗೆ ಮಂಗಳೂರಿನ ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಆರೋಪಿಗಳಾದ ಸುನೀಲ್ ಕುಮಾರ್ ಯಾನೆ ಕೌಟಿ, ಪ್ರವೀಣ್ ಪೂಜಾರಿ ಯಾನೆ ಚೋಟು, ಪ್ರೀತಮ್ ಯಾನೆ ಅಭಿ ಹಾಗೂ ರೋಹಿತ್ ಕುಮಾರ್ ಯಾನೆ ಶೂಟರ್ ಶಿಕ್ಷೆಗೆ ಒಳಗಾದ ದೋಷಿಗಳು.
೨೦೧೯ರ ಜನವರಿ ೩ ರಂದು ಪಂಜಿಮೊಗರು ಮಾಲಾಡಿ ರಸ್ತೆಯ ಒ.ಗಿ. ಶೆಟ್ಟಿ ಕಾಲೇಜ್ ಬಳಿ ಈ ಕೊಲೆ ಪ್ರಕರಣ ನಡೆದಿತ್ತು. ಪ್ರಕರಣದ ೧ನೇ ಆರೋಪಿ ಸುನಿಲ್ ಕುಮಾರ್ ಎಂಬಾತನ ತಂಗಿಯನ್ನು ಮೃತ ರಾಕೇಶ್ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಆಕ್ರೋಶಗೊಂಡ ಆರೋಪಿಗಳೆಲ್ಲರೂ ಸೇರಿ ಸಂಚು ರೂಪಿಸಿ, ರಾಕೇಶ್ ನನ್ನು ತಲವಾರ್ ನಿಂದ ಕಡಿದು ಹತ್ಯೆ ಮಾಡಿದ್ದರು.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಕಾವೂರು ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಆರ್. ನಾಯ್ಕ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಟೆ ಅವರು ಸುದೀರ್ಘ ವಿಚಾರಣೆ ಬಳಿಕ ನಾಲ್ವರೂ ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದ್ದಾರೆ.
ನ್ಯಾಯಾಲಯವು ೧ ರಿಂದ ೩ ನೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ೧೫,೦೦೦ ರೂಪಾಯಿ ದಂಡ ವಿಧಿಸಿದ್ದು, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ ೧ ವರ್ಷ ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ. ಹಾಗೆಯೇ ೧ ರಿಂದ ೪ ನೇ ಆರೋಪಿಗಳಿಗೆ ಸಾಕ್ಷ್ಯ ನಾಶಪಡಿಸಿದ ಅಪರಾಧಕ್ಕಾಗಿ ೩ ವರ್ಷಗಳ ಕಾರಾಗೃಹ ವಾಸ ಹಾಗೂ ತಲಾ ೫,೦೦೦ ರೂಪಾಯಿ ದಂಡ ವಿಧಿಸಲಾಗಿದೆ. ತಪ್ಪಿದಲ್ಲಿ ಹೆಚ್ಚುವರಿ ೧ ತಿಂಗಳ ಶಿಕ್ಷೆ ವಿಧಿಸಲಾಗಿದೆ. ಇದಲ್ಲದೆ, ೪ನೇ ಆರೋಪಿಗೆ ಆರೋಪಿಗೆ ಆಶ್ರಯ ನೀಡಿದ ಅಪರಾಧಕ್ಕಾಗಿ ೩ ವರ್ಷಗಳ ಕಾರಾಗೃಹವಾಸ ಹಾಗೂ ೫,೦೦೦ ರೂಪಾಯಿ ದಂಡ ವಿಧಿಸಲಾಗಿದೆ.
ಆರೋಪಿಗಳಿಗೆ ವಿಧಿಸಲಾದ ಒಟ್ಟು ೭೦,೦೦೦ ರೂಪಾಯಿ ದಂಡದ ಮೊತ್ತದಲ್ಲಿ ೨೦,೦೦೦ ರೂಪಾಯಿಯನ್ನು ಸರ್ಕಾರಕ್ಕೆ ಹಾಗೂ ೫೦,೦೦೦ ರೂಪಾಯಿಯನ್ನು ಮೃತ ರಾಕೇಶ್ ನ ತಂದೆಗೆ ನೀಡುವಂತೆ ನ್ಯಾಯಾಲಯ ತೀರ್ಪಿನಲ್ಲಿ ಸೂಚಿಸಿದೆ.